ದೊಡ್ಡಬಳ್ಳಾಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಯಾದವ ಸಮುದಾಯದ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡದೇ ನಿರ್ಲಕ್ಷಿಸಿರುವುದು ಖಂಡನೀಯವಾಗಿದ್ದು, ಮುಖ್ಯಮಂತ್ರಿಗಳು ಉಳಿದ ಸಚಿವ ಸ್ಥಾನಗಳಲ್ಲಾದರೂ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಸಮುದಾಯದಿಂದ ತೀವ್ರ ಹೋರಾಟ ನಡೆಸಲಾಗುವುದು ಎಂದು ಭಾರತೀಯ ಯಾದವ ಮಹಾಸಭಾದ ದೊಡ್ಡಬಳ್ಳಾಪುರ ಘಟಕದ ಅಧ್ಯಕ್ಷ ಎ.ವಿ.ನಾರಾಯಣ್ ಹೇಳಿದ್ದಾರೆ.
ಈ ಕುರಿತು ನಗರದ ಪ್ರವಾಸಿ ಮಂದಿರಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಯಾದವ ಗೊಲ್ಲ ಸಮುದಾಯದಿಂದ ಆಯ್ಕೆಯಾಗಿರುವ ಏಕೈಕ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಈ ಬಾರಿ ಸಚಿವ ಸಂಪುಟದಲ್ಲಿ ಸ್ಥಾನ ದೊರಕುವ ನಿರೀಕ್ಷೆ ಇತ್ತು. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭ್ರಷ್ಟಾಚಾರ ಆರೋಪ ಇರುವ ಶಶಿಕಲಾ ಜೊಲ್ಲೆ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿದ್ದಾರೆ. ಇವರಂತೆ ಲಾಬಿ ಮಾಡಲಿಲ್ಲ ಎನ್ನುವ ಕಾರಣಕ್ಕೆ ಪೂರ್ಣಿಮಾ ಅವರಿಗೆ ಸಚಿವ ಸ್ಥಾನ ನೀಡದಿರುವುದು ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.
ರಾಜ್ಯದಲ್ಲಿ 40 ಲಕ್ಷ ಜನಸಂಖ್ಯೆ ಹಾಗೂ ದೊಡ್ಡಬಳ್ಳಾಪುರ ತಾಲೂಕಿನಲ್ಲಿ 45 ಸಾವಿರ ಜನಸಂಖ್ಯೆ ಇರುವ ಯಾದವ ಗೊಲ್ಲ ಸಮುದಾಯ ಚುನಾವಣೆಗಳಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ನಿರ್ಣಾಯಕವಾಗಿದೆ. ಶಿರಾ ಉಪ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ನೀಡುವಲ್ಲಿ, ಮುಖ್ಯವಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಮಾಜಿ ಪ್ರಧಾನಿ ದೇವೇಗೌಡರನ್ನು ಸೋಲಿಸಲು ಯಾದವ ಸಮುದಾಯದ ಮತಗಳು ಹೆಚ್ಚು ನಿರ್ಣಯವಾಗಿದ್ದವು. ಯಾದವ ಗೊಲ್ಲ ಸಮುದಾಯ ಇಂದಿಗೂ ಶೋಷಿತ ಸಮುದಾಯವಾಗಿದ್ದು, ಅಮಾಯಕ ಜನರೇ ಹೆಚ್ಚು ಇದ್ದಾರೆ. ಸಾಮಾಜಿಕವಾಗಿ, ರಾಜಕೀಯವಾಗಿ ಸದಾ ಹಿಂದುಳಿದಿರುವ ಈ ಸಮುದಾಯವನ್ನು ನಿರ್ಲಕ್ಷಿಸುತ್ತಲೇ ಇದೆ. ಸಮುದಾಯಕ್ಕೆ ನಿಗಮ ಮಂಡಲಿ ಸ್ಥಾನವೂ ನೀಡಲಿಲ್ಲ. ಕೇಂದ್ರ ಸಚಿವ ನಾರಾಯಣಸ್ವಾಮಿ, ಸಂಸದ ಬಸವರಾಜ್ ಅವರೂ ಸಹ ಶಿಫಾರಸ್ಸು ಮಾಡಿಲ್ಲ. ಚುನಾವಣೆ ಸಮಯದಲ್ಲಿ ಮಾತ್ರ ನಾವು ಉಳಿದ ಸಮಯದಲ್ಲಿ ನಾವು ಬೇಡ ಎಂದರೆ ಹೇಗೆ..? ಸಮುದಾಯಕ್ಕೆ ಪ್ರಾತಿನಿಧ್ಯ ನೀಡದಿದ್ದರೆ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸಲಾಗುವುದು ಎಂದರು.
ಮುಖಂಡರಾದ ಕಾಂತರಾಜು ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಲಿಂಗಾಯಿತ, ಒಕ್ಕಲಿಗ, ಬ್ರಾಹ್ಮಣ ಮೊದಲಾದ ಸಮುದಾಯಕ್ಕೆ ಆದ್ಯತೆ ನೀಡಲಾಗಿದೆ. ಆದರೆ ಯಾದವ ಗೊಲ್ಲ ಸಮುದಾಯವನ್ನು ಕಡೆಗಣಿಸಿ ಅವಮಾನಿಸಲಾಗಿದೆ. ಇದೇ ರೀತಿ ನಿರ್ಲಕ್ಷಿಸಿದರೆ ಮುಂದೆ ಬಿಜೆಪಿ ಪಕ್ಷವನ್ನು ನಾವು ಯಾವುದೇ ಕಾರಣಕ್ಕೂ ಬೆಂಬಲಿಸುವುದಿಲ್ಲ ಎಂದರು.
ಸಭೆಯಲ್ಲಿ ಎಪಿಎಂಸಿ ನಾಮಿನಿ ಸದಸ್ಯ ಕೃಷ್ಣಮೂರ್ತಿ, ಭಾರತೀಯ ಯಾದವ ಮಹಾಸಭಾದ ದೊಡ್ಡಬಳ್ಳಾಪುರ ಘಟಕದ ಕಾರ್ಯದರ್ಶಿ ಚಂದ್ರಶೇಖರ್, ಮುಖಂಡರಾದ ಅಂಬರೀಷ್, ಹನುಮಂತರಾಯಪ್ಪ, ಹುಲಿಯ ಯಾದವ, ರಮೇಶ್ ಕುಮಾರ್, ಬಸವರಾಜ್ ಮತ್ತಿತರರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ಶೇರ್ ಮಾಡಿ.