ನವದೆಹಲಿ/ಬೆಂಗಳೂರು: ಕೃಷಿ ಸಚಿವ ಬಿ.ಸಿ.ಪಾಟೀಲರು ನವದೆಹಲಿಯಲ್ಲಿ ಮಂಗಳವಾರ ಕೇಂದ್ರದ ರಾಜ್ಯ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಕೇಂದ್ರದ ರಾಜ್ಯ ರಾಸಾಯನಿಕ ಸಚಿವ ಭಗವಂತ್ ಖೂಬಾ ಅವರನ್ನು ಭೇಟಿ ಮಾಡಿ, ಶುಭಕೋರಿ ರಾಜ್ಯದ ಕೃಷಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಮನವಿ ಮಾಡಿದರು.
ಭೇಟಿ ವೇಳೆ ಕರ್ನಾಟಕ ರಾಜ್ಯದಲ್ಲಿ ಕಳೆದ ವರ್ಷ, ಖಾರಿಫ್‌ನಲ್ಲಿ ನಿರೀಕ್ಷೆ ಮೀರಿ ಸುಮಾರು 77 ಲಕ್ಷ ಹೆಕ್ಟೇರ್ ದಾಖಲೆಯ ಪ್ರಮಾಣದಷ್ಟು ಬಿತ್ತನೆ ಆಗಿತ್ತು. ಈ ಬಾರಿಯೂ ಕೂಡ ಬೇಗನೇ ಬಿತ್ತನೆಯಾಗಿದ್ದು,ಕೃಷಿ ಚಟುವಟಿಕೆ ಚುರುಕುಪಡೆದಿದೆ. ಆದ್ದರಿಂದ ಫಸಲು ಬರಲು ಯಾವುದೇ ರೀತಿಯ ಕೊರತೆಯಾಗದಂತೆ ಯೂರಿಯಾ ಸೇರಿದಂತೆ ಇತರೆ ರಸಗೊಬ್ಬರಗಳನ್ನು ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ಮೇರೆಗೆ ಪೂರೈಸುವಂತೆ ಕೇಂದ್ರ ರಾಸಾಯನಿಕ ಸಚಿವರಿಗೆ ಮನವಿ ಮಾಡಿದರು.
ಪ್ರಸಕ್ತ ವರ್ಷದಲ್ಲಿ, ಬಿತ್ತನೆಯ ಪ್ರದೇಶದಲ್ಲಿ ದಾಖಲೆಯ ಹೆಚ್ಚಳ ಮತ್ತು ಸಾಮಾನ್ಯ ಮಳೆಗಿಂತ ಅಧಿಕ ಮಳೆಯಿಂದಾಗಿ, ರಾಜ್ಯಗಳ ಯೂರಿಯಾದ ಅವಶ್ಯಕತೆಯೂ ಅನುಗುಣವಾಗಿ ಹೆಚ್ಚಾಗಿದೆ. ರಾಜ್ಯದಲ್ಲಿ ಸದ್ಯ 0.32 ಲಕ್ಷ ಟನ್ ಯೂರಿಯ ಬಫರ್ ಸ್ಟಾಕ್ ಇದೆ. ಈ ವರ್ಷದಲ್ಲಿ 07 ನೇ ಆಗಸ್ಟ್, 2021 ರವರೆಗೆ ಯೂರಿಯಾ ಪೂರೈಕೆಯು 6.18 ಲಕ್ಷ ಮೆಟ್ರಿಕ್ ಟನ್ ಆಗಿದೆ. ಈ ಬಾರಿಯೂ ಸಹ ಯಾವುದೇ ರೀತಿಯ ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳುವಂತೆ ಅಲ್ಲದೇ ಕರ್ನಾಟಕ ರಾಜ್ಯದಲ್ಲಿ ಎಣ್ಣೆಕಾಳು ಬೆಳೆಗಳಿಗೆ ಉತ್ತೇಜನ ಮಾಡಲು ಹೆಚ್ಚಿನ ಕಾರ್ಯಕ್ರಮಗಳನ್ನು ನೀಡಬೇಕು.ಹಾಗೂ ಕೃಷಿ ಉತ್ಪನ್ನಗಳ ಹೆಚ್ಚಳಕ್ಕೆ ಹೆಚ್ಚು ಉತ್ತೇಜನ ನೀಡಬೇಕೆಂದು ಕೇಂದ್ರದ ಉಭಯ ಸಚಿವರಲ್ಲಿ ಬಿ.ಸಿ.ಪಾಟೀಲರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜಕುಮಾರ ಕತ್ರಿ, ಅಪರ ಕೃಷಿ ನಿರ್ದೇಶಕರು (ಸಾವಯವ ಕೃಷಿ)ವೆಂಟಕರಮಣರೆಡ್ಡಿ ಜೊತೆಗಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..