ದೊಡ್ಡಬಳ್ಳಾಪುರ: ಅವಧಿ ಮುಕ್ತಾಯವಾಗಿ ಎರಡು ವರ್ಷ ಕಳೆದಿದ್ದ ದೊಡ್ಡಬಳ್ಳಾಪುರ ನಗರಸಭೆಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ದಿನಾಂಕ ನಿಗದಿ ಪಡಿಸಿದೆ.
ರಾಜ್ಯ ಚುನಾವಣೆ ಆಯೋಗದ ಅಧೀನ ಕಾರ್ಯದರ್ಶಿ ಎನ್.ಆರ್.ನಾಗರಾಜ್ ಅವರು ಮಾಡಿರುವ ಆದೇಶಾನುಸಾರ ರಾಜ್ಯದ ಮೂರು ನಗರಸಭೆ ಹಾಗೂ ಒಂದು ಪುರಸಭೆಗ ದಿನಾಂಕ ನಿಗದಿ ಪಡಿಸಲಾಗಿದೆ.
ಇದರ ಅನ್ವಯ ದೊಡ್ಡಬಳ್ಳಾಪುರ, ಬೀದರ್, ಭದ್ರಾವತಿ ನಗರಸಭೆ ಹಾಗೂ ತರೀಕೆರೆ ಪುರಸಭೆಗೆ ಸೆಪ್ಟೆಂಬರ್ 03 ರಂದು ಚುನಾವಣೆ ನಡೆಸಲು ದಿನಾಂಕ ನಿಗದಿಯಾಗಿದೆ.
ನಾಮ ಪತ್ರ ಸಲ್ಲಿಸಲು ಆಗಸ್ಟ್.23 ಕೊನೆಯ ದಿನವಾಗಿದ್ದು, ಹಿಂಪಡೆಯಲು ಆಗಸ್ಟ್ 27 ಕಡೆಯದಿನವಾಗಿರುತ್ತದೆ. ಅಂತಿಮವಾಗಿ ಚುನಾವಣೆ ಅವಶ್ಯಕತೆ ಇದ್ದಲ್ಲಿ ಸೆಪ್ಟೆಂಬರ್ 3ರಂದು ನಡೆಸಿ, ಸೆಪ್ಟೆಂಬರ್ 6 ರಂದು ಮತಗಳ ಎಣಿಕೆಗೆ ದಿನಾಂಕ ನಿಗದಿ ಪಡಿಸಿ ಆದೇಶಿಸಲಾಗಿದೆ.
ದೊಡ್ಡಬಳ್ಳಾಪುರ ನಗರಸಭೆ ಅವಧಿ ಮುಕ್ತಾಯವಾಗಿ ಎರಡು ವರ್ಷ: ಐದು ವರ್ಷಗಳ ಅವಧಿಯ ನಗರಸಭೆ ಸದಸ್ಯರ ಅಧಿಕಾರ ಅವಧಿ 2019ರ ಮಾ.12ರ ಸಂಜೆ ಮುಕ್ತಾಯವಾಗಿ, ನಗರಸಭೆ ಈಗ ಆಡಳಿತಾಧಿಕಾರಿಗಳ ಸುಪರ್ದಿನಲ್ಲಿದೆ. 2 ವರ್ಷ 5 ತಿಂಗಳಾಗಿದ್ದರೂ ಇನ್ನೂ ಚುನಾವಣೆ ಭಾಗ್ಯವಿಲ್ಲ. ಈಗ ನಗರಸಭೆ ಚುನಾವಣೆ ಮುಂದೂಡಿರುವುದರಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆ ಹೊಂದಿದ್ದ ಆಕಾಂಕ್ಷಿಗಳಿಗೆ ನಿರಾಸೆಯಾಗಿತ್ತು.
ವಾರ್ಡ್ ಮೀಸಲಾತಿ ತಕರಾರು:ವಾರ್ಡ್‍ಗಳ ಗಡಿ ನಿಗದಿ, ವಾರ್ಡ್‍ಗಳ ಮೀಸಲಾತಿ ಅಂತಿಮಗೊಳಿಸಿದ್ದರೂ ಸಹ ಇದು ಸರಿ ಇಲ್ಲ ಎನ್ನುವುದನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೊರೆಹೋದ ಕಾರಣದಿಂದಾಗಿ ನಗರಸಭಾ ಚುನಾವಣೆ ವಿಳಂಬವಾಗುತ್ತಲೇ ಬರುತ್ತಿದೆ. ಮೂರು ತಿಂಗಳ ಹಿಂದೆಯಷ್ಟೇ ನ್ಯಾಯಾಲಯದ ಆದೇಶದಂತೆ ವಾರ್ಡ್ ಗಳ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಾಗಿತ್ತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..