ದೊಡ್ಡಬಳ್ಳಾಪುರ: ವರಮಹಾಲಕ್ಷ್ಮೀ ಹಬ್ಬ ಒಂದು ದಿನವಿದ್ದಂತೆ ಹೂವು, ಹಣ್ಣು ಹಾಗೂ ಅಗತ್ಯವಸ್ತುಗಳ ಬೆಲೆಗಳು ಗಗನಕ್ಕೇರಿವೆ.
ಈ ಬಾರಿಯೂ ಕೊವಿಡ್ ಮಾರ್ಗಸೂಚಿಯನ್ವಯ ಜಾತ್ರೆ ಉತ್ಸವಗಳಿಗೆ ನಿರ್ಬಂಧ ಹೇರಿದೆ. ಆದರೆ ಹಬ್ಬದ ಸಂಭ್ರಮ ಮಾತ್ರ ಎಂದಿನಂತಿದ್ದು, ಬೆಲೆಗಳು ಇಳಿಮುಖವಾಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ.
ಕೊವಿಡ್-19 ಅಂತರಪಾಲನೆ ಇಲ್ಲದೇ ಮಾರುಕಟ್ಟೆ ಪ್ರದೇಶದಲ್ಲಿ ಜನಸಂದಣಿ ಎದ್ದು ಕಾಣುತ್ತಿತ್ತು. ನಗರದ ಮಾರ್ಕೆಟ್‍ನಲ್ಲಿ ಹೂವಿನ ಮಾರುಕಟ್ಟೆ ಹಣ್ಣುಗಳ ಅಂಗಡಿಗಳು ಹಬ್ಬಕ್ಕೆಂದೇ ತೆರೆದಿವೆ.
ಹೂವು ಹಣ್ಣಿನ ಬೆಲೆಗಳು ಎಂದಿನಂತೆ ಗಗನಕ್ಕೇರಿವೆ. ಕಾಕಡ, ಮಳ್ಳೆ ಹೂವಿನ ಬೆಲೆ 700ರಿಂದ 800 ರೂ, ಮಲ್ಲಿಗೆ ಹೂ 1000 ರೂ, ಕನಕಾಂಬರ ಕೆ.ಜಿಗೆ 1800 ರೂ, ಶಾಮಂತಿಗೆ 200 ರೂ, ಬಟನ್ಸ್, ಗುಲಾಬಿ ಮೊದಲಾದ ಹೂವಿನ ಬೆಲೆಗಳು 180 ರವರೆಗೂ ಇವೆ.ಇನ್ನು ತಾವರೆ ಹೂ ಜೊತೆಗೆ 60 ರೂ, ಡೇರಾ ಒಂದು ಹೂವಿಗೆ 10 ರೂ ಇದರೊಂದಿಗೆ ಸೇಬಿನ ಬೆಲೆ 150ರೂ, ದ್ರಾಕ್ಷಿ 150ರೂ ದಾಟಿದ್ದು,ಮಿಕ್ಕ ಹಣ್ಣುಗಳ ಬೆಲೆಗಳೂ ಕೆಜಿಗೆ 20 ರಿಂದ 30 ಹೆಚ್ಚಾಗಿವೆ. ಅಲಂಕಾರಿಕ ಹೂಗಳು ಒಂದು ಕುಚ್ಚಿಗೆ 200 ರೂಗಳಂತೆ ಮಾರಾಟವಾಗುತ್ತಿತ್ತು.
ತರಕಾರಿ ಹಾಗೂ ಹೂಗಳ ಬೆಲೆ ಹಬ್ಬಕ್ಕೆಂದೇ ದುಬಾರಿಯಾಗಿ ಸಾರ್ವಜನಿಕರನ್ನು ಕಂಗಾಲಾಗಿಸಿದೆ. ಇದರೊಂದಿಗೆ ಲಕ್ಷ್ಮೀ ಅಲಂಕೃತ ಮೂರ್ತಿಗಳು ಹಾಗೂ ಲಕ್ಷ್ಮೀ ಮುಖವಾಡಗಳು ಸಹ ಮಾರಾಟವಾಗುತ್ತಿದ್ದು, ಒಂದು ಸೆಟ್ ಪೂರ್ಣ ಪ್ರತಿಮೆಗೆ 3 ಸಾವಿರದಿಂದ 10 ಸಾವಿರದವರೆಗೆ ಮಾರಾಟವಾಗುತ್ತಿದೆ. ಕಳಸಕ್ಕೆ ಇಡುವ ಲಕ್ಷ್ಮೀ ಮುಖವಾಡಗಳನ್ನು ಮಹಿಳೆಯರು ಕೊಂಡೊಯ್ಯುತ್ತಿರುವುದು ಸಾಮಾನ್ಯವಾಗಿದೆ.
ಹೂವುಗಳ ಬೆಲೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಅಲಂಕಾರಿಕ ಪ್ಲಾಸ್ಟಿಕ್ ಹೂಗಳು, ಹಾಗೂ ಸಾಮಗ್ರಿಗಳ ಮಾರಾಟ ಸಹ ಭರದಿಂದ ಸಾಗಿದೆ.
ಸರಕುಗಳ ಸರಬರಾಜು ಕಡಿಮೆ ಇರುವುದರಿಂದ ಬೆಲೆ ಹೆಚ್ಚಾಗಿದೆ. ಅಲಂಕಾರಿಕ ಹೂಗಳನ್ನು ಹೊರಗಡೆಯಿಂದ ತರಬೇಕಿದೆ. ಕರೊನಾ ಪರಿಣಾಮ ಇತರ ವರ್ಷಗಳಂತೆ ವ್ಯಾಪಾರ ಈ ಬಾರಿ ಇಲ್ಲ ಎನ್ನುತ್ತಾರೆ ಹೂವಿನ ವ್ಯಾಪಾರಿಗಳು.
ಈ ನಡುವೆಯೂ ಕೊವಿಡ್-19 ಆರ್ಥಿಕ ಸಂಕಷ್ಟದಿಂದ ಮಹಾಲಕ್ಷ್ಮೀ ನಮ್ಮನ್ನು ಕಾಪಾಡಲಿ ಎಂದು ಪೂಜಿಸೋಣ ಎನ್ನುವ ಮನೋಭಾವದಿಂದ, ಬೆಲೆಗಳು ಎಷ್ಟಾದರೂ ಸರಿ ಹಬ್ಬ ಮಾಡಲೇಬೇಕೆಂದು ನಾಗರಿಕರು ಹಬ್ಬದ ಸಾಮಗ್ರಿಗಳನ್ನು ಕೊಂಡು ಹೊಯ್ಯುತ್ತಿದ್ದ ದೃಶ್ಯ ಸಾಮಾನ್ಯವಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..