ದೊಡ್ಡಬಳ್ಳಾಪುರ: ಸೆ.3 ರಂದು ನಡೆಯಲಿರುವ ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಗುರುವಾರದ 4ನೇ ದಿನದ ವೇಳೆಗೆ..ಆಶ್ಚರ್ಯಕರ ಬೆಳವಣಿಗೆಯಲ್ಲಿ ಜೆಡಿಎಸ್ ಮುಖಂಡರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.
ಖಾಸಗಿ ಹೋಟೆಲ್ ಒಂದರಲ್ಲಿ ಜೆಡಿಎಸ್ ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಹೆಚ್.ಅಪ್ಪಯ್ಯಣ್ಣ, ಜೆಡಿಎಸ್ ಹಿರಿಯ ಮುಖಂಡ ಎ.ನರಸಿಂಹಯ್ಯ, ನಗರಸಭೆ ಮಾಜಿ ಅಧ್ಯಕ್ಷ ತ.ನ.ಪ್ರಭುದೇವ್, ಯುವ ಮುಖಂಡರಾದ ಹರೀಶ್ ಗೌಡ, ಕುಂಟನಹಳ್ಳಿ ಮಂಜುನಾಥ್, ತಾಲೂಕು ಅಧ್ಯಕ್ಷ ಲಕ್ಷ್ಮೀಪತಿ ಮತ್ತಿತರರು ಸೇರಿ ಗೌಪ್ಯ ಸಭೆ ನಡೆಸಿದ್ದಾರೆ.
ಈ ಸಭೆಯಲ್ಲಿ ಸೆಪ್ಟೆಂಬರ್ 3 ರಂದು ನಡೆಯಲಿರುವ ನಗರಸಭೆ ಚುನಾವಣೆಯಲ್ಲಿ 31 ವಾರ್ಡ್ ಗಳಿಗೆ ಭಿನ್ನಾಭಿಪ್ರಾಯ ಬದಿಗೊತ್ತಿ ಒಮ್ಮತದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಚರ್ಚೆ ನಡೆದಿದ್ದು, ಇತರೆ ಪಕ್ಷಗಳಿಗೆ ಟಕ್ಕರ್ ನೀಡಿ ಹೆಚ್ಚಿನ ಅಭ್ಯರ್ಥಿಗಳ ಗೆಲ್ಲಿಸಿಕೊಂಡು ನಗರಸಭೆಯ ಚುಕ್ಕಾಣಿ ಹಿಡಿಯಲು ತಯಾರಿ ನಡೆಸಿರುವುದಾಗಿ ಮೂಲಗಳು ಹರಿತಲೇಖನಿಗೆ ತಿಳಿಸಿವೆ.
ತಾಲೂಕಿನಲ್ಲಿ ಜೆಡಿಎಸ್ ಪಕ್ಷಕ್ಕೆ ತನ್ನದೇ ಆದ ಮತ ಬ್ಯಾಂಕ್ ಹೊಂದಿದ್ದು, ಬಣ ರಾಜಕೀಯದಿಂದಾಗಿ ಅನ್ಯ ಪಕ್ಷದವರಿಗೆ ಲಾಭವಾಗುತ್ತಿತ್ತು. ಆದರೆ ದಿಢೀರ್ ಬೆಳವಣಿಗೆಯಲ್ಲಿ ಇಂದು ಜೆಡಿಎಸ್ ಪಕ್ಷದ ಮುಖಂಡರು ಒಂದೆಡೆ ಸೇರಿ ಸಭೆ ನಡೆಸಿರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ.
ಇಂದು ನಡೆದ ಸಭೆಯ ಚಿತ್ರಣ ಸುದ್ದಿಗೋಷ್ಠಿಯ ಮೂಲಕ ಹೊರಬೀಳಲಿದೆ ಎನ್ನಲಾಗುತ್ತಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..