ಹಾವೇರಿ: ದೇಶಕ್ಕೆ ಸಮಗ್ರವಾದ ಮೀಸಲಾತಿ ವ್ಯವಸ್ಥೆ ಜಾರಿಗೊಳಿಸುವುದು ಅಗತ್ಯವಾಗಿದೆ ಎಂದು ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆಯ ರಾಜ್ಯ ಖಾತೆ ಸಚಿವರಾದ ಎ.ನಾರಾಯಣಸ್ವಾಮಿ ಹೇಳಿದ್ದಾರೆ.
ಹಾವೇರಿ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಸಮಗ್ರ ಜಾತಿಗಣತಿ ನಡೆಸಬೇಕಾಗಿದೆ. 1931 ರ ನಂತರ ಜಾತಿಗಣತಿ ನಡೆದಿರುವುದಿಲ್ಲ. ಈ ಕಾರಣಕ್ಕಾಗಿ ದೇಶಾದ್ಯಂತ ಸಮಗ್ರ ಜಾತಿಗಣತಿ ನಡೆಸಿದರೆ ಸಾಮಾಜಿಕ ನ್ಯಾಯದಡಿ ಹಿಂದುಳಿದ ವರ್ಗ ಸೇರಿದಂತೆ ಎಲ್ಲ ಸಮುದಾಯಕ್ಕೂ ಮೀಸಲಾತಿ ಕಲ್ಪಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಸದಾಶಿವ ಆಯೋಗದ ವರದಿ ಜಾರಿ ಕುರಿತಂತೆ ಪರ-ವಿರೋಧದ ಚರ್ಚೆ ನಡೆಯುತ್ತಿದ್ದು, ಸಮಾಜದ ಜೊತೆಗೆ ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಬೇಕಾಗಿದೆ, ಸದನದಲ್ಲಿ ಮಂಡಿಸಿ ಪಕ್ಷಬೇಧಮರೆತು ಬಹುಮತ ಸಿಗಬೇಕಾಗಿದೆ. ಮೂರು ಸಾವಿರಕ್ಕೂ ಅಧಿಕ ಜಾತಿಗಳಿವೆ ಎಲ್ಲರಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ತೀರ್ಮಾನಗಳನ್ನು ಕೈಗೊಳ್ಳಬೇಕಾಗಿದೆ. ಸದಾಶಿವ ಆಯೋಗದ ವರದಿಯ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಮುಕ್ತಮನಸ್ಸಿನಿಂದ ಚರ್ಚಿಸಲಾಗುವುದು ಎಂದರು.
ಚುನಾವಣೆ ಸಂದರ್ಭದಲ್ಲಿ ಸೂಕ್ಷ್ಮ ವಿಚಾರಗಳನ್ನು ಜನರಬಳಿ ತೆಗೆದುಕೊಂಡು ಹೋಗಿ ವೋಟು ಪಡೆಯುವ ಬದಲು ಸಮಾಜದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಿ ಮತ ಕೇಳುವುದು ಒಳಿತು. ಸಂಸತ್ತಿನಲ್ಲಿ ನೂತನ ಸಚಿವರ ಪರಿಚಯಮಾಡಿಕೊಳ್ಳಲು ಅವಕಾಶವಾಗದ ಕಾರಣ ಜನಾಶೀರ್ವಾದದ ಮೂಲಕ ಜನರ ಬಳಿಹೋಗಿ ಪರಿಚಯಮಾಡಿಕೊಳ್ಳಲಾಗುತ್ತಿದೆ. ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಕಾರ್ಯಕ್ರಮ ಇದಾಗಿದೆ. ಕಾರ್ಯಕ್ರಮದಲ್ಲಿ ಎಲ್ಲರೂ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಾದುದು ಇಂದಿನ ಅಗತ್ಯವಾಗಿದೆ ಎಂದರು.
ಹಾವೇರಿಯಲ್ಲಿ ಅಭೂತಪೂರ್ವ ಸ್ವಾಗತ ಸಿಕ್ಕಿದೆ. ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ, ಆದರೆ ಇಂದು ಸ್ವಾತಂತ್ರ್ಯಯೋಧ ಮೈಲಾರ ಮಹದೇವಪ್ಪ ಅವರ ವೀರಸೌಧಕ್ಕೆ ಭೇಟಿ ನೀಡಿದ್ದು ವಿಶೇಷವಾಗಿತ್ತು ಎಂದರು.
ಪೆಟ್ರೋಲ್ ದರ ಏರಿಕೆ ಕುರಿತು ಮಾಹಿತಿ ನೀಡಿದ ಅವರು, ಮುಂದಿನ ದಿನಗಳಲ್ಲಿ ಪೆಟ್ರೋಲ್ ಬಳಕೆಯನ್ನು ನಿರ್ಬಂಧಿಸುವ ಯೋಜನೆ ಹೊಂದಲಾಗಿದೆ. ಈಗಾಗಲೇ ಇಲೆಕ್ಟ್ರಿಕಲ್ ವಾಹನ ಬಳಕೆಗೆ ಆದ್ಯತೆ ನೀಡಲಾಗುತ್ತಿದೆ. ಕೋವಿಡ್ ಸಂದರ್ಭದಲಲಿ ಪೆಟ್ರೋಲ್ ಬೆಲೆ ಹೆಚ್ಚಾಗಿದೆ. ಇಳಿಕೆ ಕುರಿತು ಸರ್ಕಾರ ಚಿಂತನೆ ಮಾಡುತ್ತಿದೆ ಎಂದರು.
ಮಾಧ್ಯಮಗೋಷ್ಠಿಯಲ್ಲಿ ಶಾಸಕರು, ರಾಜ್ಯ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಬುಡಕಟ್ಟು ಆಯೋಗದ ಅಧ್ಯಕ್ಷರಾದ ನೆಹರು ಓಲೇಕಾರ, ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಗುತ್ತೂರ, ಸಿದ್ಧರಾಜ ಕಲಕೋಟಿ, ಪರಮೇಶ್ವರಪ್ಪ ಮೆಗಳಮನಿ ಇತರರು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..