ದೊಡ್ಡಬಳ್ಳಾಪುರ: ತಾಲ್ಲೂಕಿನ ಚಿಗರೇನಹಳ್ಳಿ ಸಮೀಪದ ಎಂಎಸ್ಜಿಪಿ ಕಂಪನಿಯ ಬಿಬಿಎಂಪಿ ಕಸ ವಿಲೇವಾರಿ ಘಟಕ ದಲ್ಲಿನ ಕಸದ ರಾಶಿಯಿಂದ ಹೊರ ಬರುತ್ತಿರುವ ಕೊಳಚೆ ನೀರಿನ ದುರ್ವಾಸನೆಯಿಂದ ತಣ್ಣೀರನಹಳ್ಳಿ ಗ್ರಾಮಸ್ಥರು ಮೂಗುಮುಚ್ಚಿಕೊಂಡು ಬದುಕುವ ದುಸ್ಥಿತಿ ಉಂಟಾಗಿದೆ.
ಎರಡು ದಿನಗಳಿಂದ ತಾಲ್ಲೂಕಿನಲ್ಲಿ ಸುರಿದ ಮಳೆಯಿಂದಾಗಿ ಕಸದ ರಾಶಿಯಿಂದ ಕೊಳಚೆ ನೀರು ಹೊರಬರಲು ಆರಂಭವಾಗಿದೆ. ಕಸದ ರಾಶಿಯ ಸುತ್ತಲು ಮಣ್ಣಿನಲ್ಲಿ ಹಾಕಲಾಗಿದ್ದ ಕಟ್ಟೆ ಕೊಳಚೆ ನೀರಿನ ಹರಿವು ಹೆಚ್ಚಾಗಿದ್ದರಿಂದ ಹೊಡೆದು ಹೋಗಿದೆ. ಹೀಗಾಗಿ ತಣ್ಣೀರನಹಳ್ಳಿ ಗ್ರಾಮದ ಸಮೀಪದಲ್ಲಿನ ಹಳ್ಳದ ಮೂಲಕ ಕೊಳಚೆ ನೀರು ಮಾವತ್ತೂರು ಕೆರೆಯ ಕಡೆಗೆ ಹರಿಯ ತೊಡಗಿದೆ ಎಂದು ಹೇಳಿದ ತಣ್ಣೀರನಹಳ್ಳಿ ಗ್ರಾಮದ ರೈತರು, ಹಳ್ಳದ ಸಾಲಿನಲ್ಲಿ ಜಮೀನುಗಳಲ್ಲಿ ರೈತರು ಬೆಳೆದಿದ್ದ ಅಡಿಕೆ, ತೆಂಗು ಸೇರಿದಂತರೆ ಮರಗಳು ಒಣಗಲು ಆರಂಭಿಸಿವೆ.
ಎಂಎಸ್ ಜಿಪಿ ಘಟಕದಲ್ಲಿನ ಬಿಬಿಎಂಪಿ ಕಸದ ಹಾವಳಿಯನ್ನು ತಪ್ಪಿಸುವಂತೆ ಈ ಭಾಗದ ಹತ್ತಾರು ಗ್ರಾಮಗಳ ಜನರು ಪಕ್ಷಾತೀತವಾಗಿ ಏಳುದಿನಗಳ ಕಾಲ ನಡೆಸಿದ್ದ ನಿರಂತರ ಧರಣಿ ಸಂದರ್ಭದಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಧರಣಿ ನಿರತರು ಹಾಗೂ ಜನಪ್ರತಿನಿಧಿಗಳೊಂದಿಗೆ ವಿಧಾನ ಸೌಧದಲ್ಲಿ ಸಭೆ ನಡೆಸಿ ‘ಕೊಳಚೆ ನೀರು ಹಳ್ಳದ ಕಡೆಗೆ ಹರಿದು ಬರದಂತೆ ತಡೆಗೋಡೆ ನಿರ್ಮಿಸುವ ಹಾಗೂ ಬಿಬಿಎಂಪಿ ವ್ಯಾಪ್ತಿಯಿಂದ ನೂರಾರು ಸಂಖ್ಯೆಯಲ್ಲಿ ಕಸ ತುಂಬಿಕೊಂಡು ಬರುತ್ತಿರುವ ಲಾರಿಗಳ ಸಂಖ್ಯೆಯನ್ನು ಕಡಿಮೆ ಮಾಡಿ ಬೇರೆಡೆಗೂ ಹೋಗುವಂತೆ ಮಾಡುವ ಭರವಸೆ ನೀಡಿದ್ದರು’ ಆದರೆ ಸಭೆ ನಡೆಸಿ ಒಂದುವರೆ ವರ್ಷ ಕಳೆದಿದ್ದರು ಯಾವುದೇ ಭರವಸೆಯು ಈಡೇರಿಲ್ಲ.
ಹಳ್ಳದಲ್ಲಿ ಕೊಳಚೆ ನೀರು ಹರಿದು ಬರುವುದು ತಪ್ಪಿಲ್ಲ. ನಮ್ಮೂರಿನ ಸುತ್ತಲಿನ ಕೊಳವೆ ಬಾವಿಗಳಲ್ಲಿ ಬರುವ ನೀರು ಕುಡಿಯಲು ಯೋಗ್ಯವೇ ಇಲ್ಲ ಎನ್ನುವ ವರದಿ ಬಂದು ವರ್ಷಗಳೇ ಕಳೆದಿವೆ. ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟರೆ ದೂರುದ ಗ್ರಾಮಗಳಿಂದ ಕ್ಯಾನ್ಗಳಲ್ಲಿ ನೀರು ತಂದು ಕುಡಿಯುವ ಸ್ಥಿತಿ ಇದೆ. ರಾಸುಗಳಿಗು ಸಹ ಶುದ್ಧ ಕುಡಿಯುವ ನೀರಿನ ಘಟಕವೇ ನೀರಿನ ಆಸರೆಯಾಗಿದೆ. ಅಡಿಕೆ,ತೆಂಗಿನ ಮರಗಳಲ್ಲಿ ಕಾಯಿಗಳ ಸಂಖ್ಯೆ ಕಡಿಮೆ. ಮಳೆಗಾಲ ಹೊರತು ಬೇಸಿಗೆಯಲ್ಲಿ ಸಂಪೂರ್ಣವಾಗಿ ಕೊಳವೆ ಬಾವಿ ನೀರನ್ನೇ ಬಳಸಿ ತರಕಾರಿ ಮತ್ತಿತರೆ ಬೆಳೆಯನ್ನು ಬೆಳೆಯುವುದೇ ಕಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಒಮ್ಮೆಯೂ ಸಹ ನಮ್ಮೂರಿನ ಕಡೆಗೆ ಬಂದು ಇಲ್ಲಿನ ಜನರ ಬದುಕು ಏನಾಗಿದೆ ಎಂದಾಗಲಿ ಅಥವಾ ಬಿಬಿಎಂಪಿ ಕಸ ವಿಲೇವಾರಿ ಏನಾಗಿದೆ ಎನ್ನುವ ಬಗ್ಗೆ ಪರಿಶೀಲಿಸಿದ್ದರೆ ನಮ್ಮೂರಿಗೆ ಇಂತಹ ದುಸ್ಥಿತಿ ಬರುತ್ತಿರಲಿಲ್ಲ ಎಂದು ದೂರಿದ್ದಾರೆ ರೈತರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..