ಬೆಂ.ಗ್ರಾ.ಜಿಲ್ಲೆ: ಕೋವಿಡ್-19 ಕಾರಣದಿಂದಾಗಿ ಒಂದು ವರ್ಷದಿಂದ ಸ್ಥಗಿತಗೊಂಡಿದ್ದ ಶಾಲೆಗಳು ಮತ್ತೆ ಪುನಾರಂಭಗೊಂಡಿದ್ದು, ಪೋಷಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಬಹಳ ಆಸಕ್ತಿಯಿಂದ ಶಾಲೆಗೆ ಮರಳುತ್ತಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇ.52 ರಷ್ಟು ಮಕ್ಕಳು ಹಾಜರಾಗಿದ್ದು, ಶಾಲಾ ಆರಂಭದಲ್ಲಿಯೇ ಉತ್ತಮ ಹಾಜರಾತಿ ಕಂಡು ಸಂತಸವಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
ಕೋವಿಡ್-19 ಸೋಂಕಿನ ಇಳಿಕೆ ಹಿನ್ನೆಲೆ, ಶಾಲಾ ಕಾಲೇಜುಗಳು ಪುನರಾರಂಭವಾಗಿದ್ದರಿಂದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ವಿವಿಧ ಶಾಲೆಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು.
ಇಂಟರ್‌ನೆಟ್ ಸೌಲಭ್ಯ, ಸ್ಮಾರ್ಟ್ ಫೋನ್ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಹಲವು ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳ ಆನ್‌ಲೈನ್ ತರಗತಿಗಳು ತಲುಪದ ಕಾರಣ, ವಿಶೇಷವಾಗಿ ಸರ್ಕಾರಿ ಶಾಲೆಗಳು, ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ಕಳಕಳಿ ಹೊಂದಿದ್ದು, ಭೌತಿಕ ತರಗತಿಗಳನ್ನು ನಡೆಸುವ ಮೂಲಕ ಅವರಿಗೂ ಪಾಠಗಳನ್ನು ಕಲಿಸಲು ಸಾಧ್ಯವಾಗಲಿದೆ ಎಂದರು.
ಮಕ್ಕಳು ಮನೆಯಲ್ಲಿ ಇದ್ದ ಕಾರಣ ಬೌದ್ಧಿಕ ಮಟ್ಟ ಕುಸಿತಗೊಂಡಿದೆ ಎಂದರಲ್ಲದೆ, ಶೈಕ್ಷಣಿಕ ತರಗತಿಗಳು ಹೊಸದಾಗಿ ಶುರುವಾಗಿರುವುದರಿಂದ ಶಾಲೆಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು.
1 ರಿಂದ 8 ನೇ ತರಗತಿ ಪ್ರಾರಂಭ ಮಾಡುವುದಕ್ಕಿಂತ ಮುನ್ನ ಆಗಸ್ಟ್ 30 ರಂದು ತಾಂತ್ರಿಕ ತಜ್ಞರ ಸಭೆ ನಡೆಸಿ, ಸಭೆಯಲ್ಲಿ ದೊರೆಯುವ ಸಲಹೆಗಳ ಮೇರೆಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರಲ್ಲದೆ, ಶಿಕ್ಷಕರ ಹಾಗೂ ಅಧಿಕಾರಿಗಳ ವರ್ಗದಿಂದ ಅಭಿಪ್ರಾಯ ಪಡೆದು, ನಂತರ ಹಂತ ಹಂತವಾಗಿ ತರಗತಿಗಳನ್ನಿ ಪ್ರಾರಂಭಿಸುತ್ತೇವೆ ಎಂದು ತಿಳಿಸಿದರು
ಸಚಿವರು ವಿವಿಧ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಿ, ಅವರೊಂದಿಗೆ ಸಮಾಲೋಚನೆ ನಡೆಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಂಗಮಾರೇಗೌಡ, ನೆಲಮಂಗಲ ತಹಶೀಲ್ದಾರ್ ಮಂಜುನಾಥ್, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……