ಚಿಕ್ಕಮಗಳೂರು: ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಕಡ್ಡಾಯವಾಗಿ ಸೋಲಾರ್ ವಿದ್ಯುತ್ ಅನ್ನು ಆಳವಡಿಸಿಕೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಅವರು ಮಂಗಳವಾರ ಎ.ಐ.ಟಿ ಕಾಲೇಜು ಆವರಣದಲ್ಲಿ ನಡೆದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯುತ್ ವ್ಯತ್ಯಯದಿಂದಾಗಿ ಗ್ರಾಮ ಪಂಚಾಯಿತಿಗೆ ಜನರು ತಮ್ಮ ಕೆಲಸ ಕಾರ್ಯಗಳಿಗೆ ಆಗಮಿಸಿದಾಗ ತೊಂದರೆಯುಂಟಾಗುತ್ತಿದ್ದು, ಜನರು ತಮ್ಮ ಕೆಲಸವಾಗದೆ ಹಲವಾರು ಬಾರಿ ಗ್ರಾಮ ಪಂಚಾಯಿತಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಆದ್ದರಿಂದ ಪ್ರತಿ ಗ್ರಾಮ ಪಂಚಾಯಿತಿಗಳಲ್ಲು ಸೋಲಾರ್ ವಿದ್ಯುತ್ ಅನ್ನು ಆಳವಡಿಸಿಕೊಳ್ಳುವಂತೆ ಹೇಳಿದ ಅವರು ಇದಕ್ಕೆ ಇಲಾಖೆಯಿಂದ ಅನುದಾನ ಒದಗಿಸಲಾಗುವುದು ಎಂದರು.
ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಿರುವ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯಿತಿಯ ಕೆಲಸವನ್ನು ತಮ್ಮ ಮನೆಯ ಕೆಲಸವೆಂದು ಭಾವಿಸಿ ಮಾಡಿದರೆ ಗ್ರಾಮಗಳು ಅಭಿವೃದ್ಧಿಯತ್ತ ಸಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಒಟ್ಟು 28 ಸಾವಿರ ಕೆರೆಗಳಿದ್ದು, ಹಿಂದೆ ಕೆರೆಗಳು ಜಿಲ್ಲಾ ಪಂಚಾಯಿತಿಯ ಅಧೀನದಲ್ಲಿದವು ಆದರೆ ಈಗಾ ಕೆರೆಗಳನ್ನು ಗ್ರಾಮ ಪಂಚಾಯಿತಿ ಅಧೀನಕ್ಕೆ ನೀಡಲಾಗಿದ್ದು, ನರೇಗಾ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕೆರೆಗಳನ್ನು ಅಭಿವೃದ್ಧಿ ಪಡಿಸಿದರೆ ಭೂಮಿಯಲ್ಲಿ ನೀರು ಹಿಂಗುವುದಲ್ಲದೆ ಅಂತರ್ಜಲ ಹೆಚ್ಚುವುದು ಇದರಿಂದ ಸಣ್ಣ ಕೃಷಿ ಹಿಡುವಳಿದಾರರಿಗೆ ಕೃಷಿ ಕಾರ್ಯಕ್ಕೆ ಅನುಕೂಲವಾಗುತ್ತದೆ ಹಾಗೂ ಅವರ ಆದಾಯವು ಹೆಚ್ಚುತ್ತದೆ ಎಂದರು.
ಗ್ರಾಮಗಳಲ್ಲಿ ಇದುವರೆಗೂ ಬಯಲು ಶೌಚಲಯಕ್ಕೆ ಹೋಗುವಂತಹ ಪರಿಸ್ಥಿತಿ ಇದ್ದು ಕೇಂದ್ರ ಸರ್ಕಾರ ಪ್ರತಿ ಮನೆ-ಮನೆಗಳಿಗೂ ಶೌಚಲಯವಿರಬೇಕೆಂಬ ದೃಷ್ಟಿಯಿಂದ ಅನುದಾನ ನೀಡಿದ್ದು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೌಚಾಲಯ ನಿರ್ಮಾಣ ಮಾಡಿಕೊಳ್ಳದ ಮನೆಗಳನ್ನು ಗುರುತಿಸಿ ಶೌಚಾಲಯ ನಿರ್ಮಿಸಿಕೊಳ್ಳಲು ಪ್ರೇರೇಪಿಸಬೇಕು ಎಂದರು.
ಗ್ರಾಮಗಳಲ್ಲಿ ಎದುರಾಗುತ್ತಿರುವಂತಹ ಕುಂದು ಕೊರತೆಯ ಬಗ್ಗೆ ಅಲ್ಲಿನ ಅಧಿಕಾರಿಗಳು ಗಮನಹರಿಸುತ್ತಿರಬೇಕು ಹಾಗೂ ಗಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳಿಗೆ ಸಹಕಾರ ನೀಡುವುದರಿಂದ ಗ್ರಾಮಗಳು ಅಭಿವೃದ್ಧಿಯಾಗುತ್ತವೆ ಎಂದು ಹೇಳಿದರು.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಕು.ಶೋಭಾ ಕರಂದ್ಲಾಜೆ ಮಾತನಾಡಿ, ನಮ್ಮ ದೇಶ ಹಳ್ಳಿಗಳ ದೇಶವಾಗಿದ್ದು, ಮಹಾತ್ಮ ಗಾಂಧೀಜಿ ಅವರು ಸ್ವಾತಂತ್ರ್ಯ ತಂದು ಕೊಡಲು ಹೋರಾಟ ಮಾಡಿದಂತಹ ಸಂದರ್ಭದಲ್ಲಿ ಗ್ರಾಮಗಳು ರಾಮ ರಾಜ್ಯವಾಗಬೇಕು ಎಂಬ ಪರಿಕಲ್ಪನೆಯನ್ನಿಟ್ಟು ಕೊಂಡಿದ್ದರು ಜೊತೆಗೆ ಗ್ರಾಮೀಣ ಸ್ವಚ್ಚತೆಗೆ ಆಧ್ಯತೆ ನೀಡಿ ಎಂದು ಕರೆ ನೀಡಿದ್ದರು ಅದು ಇಂದು ಸಹಕಾರವಾಗುತ್ತಿದೆ ಎಂದು ಹೇಳಿದರು.
ಸ್ವಾತಂತ್ರ್ಯ ಬಂದು 75 ವರ್ಷವಾದರು ಇಂದಿಗೂ ಗ್ರಾಮೀಣ ಪ್ರದೇಶದ ಅಭಿವೃದ್ಧಿ ವಿಷಯದಲ್ಲಿ ಅನೇಕ ಸಮಸ್ಯೆಗಳನ್ನು ಕಾಣುತ್ತಿದ್ದೇವೆ, ನಮ್ಮ ದೇಶದಲ್ಲಿನ ಹಲವಾರು ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ನಮ್ಮ ತಾಯಂದಿರು ಅರ್ಧ, ಒಂದು ಕಿ.ಮೀ ದೂರದಿಂದ ಕುಡಿಯುವ ನೀರನ್ನು ತರುವಂತಹ ದುಸ್ಥಿತಿ ಇನ್ನೂ ಇದೆ ಆ ಕಾರಣಕ್ಕಾಗಿ ಜಿಲ್ಲೆಯ ತರೀಕೆರೆ, ಕಡೂರು ಹಾಗೂ ಚಿಕ್ಕಮಗಳೂರು ಭಾಗದ ಬಯಲು ಸೀಮೆಯ ಹಳ್ಳಿಗಳಿಗೆ ಭದ್ರಾ ಜಲಾಶಯದಿಂದ ಬಹುಗ್ರಾಮ ಕುಡಿಯುವ ನೀರು ಯೋಜನೆ ಕಾರ್ಯಗತವಾಗುತ್ತಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಅಧ್ಯಕ್ಷರುಗಳು ತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಜನರ ಸಮಸ್ಯೆಗಳು ಮತ್ತು ಗ್ರಾಮಗಳಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳನ್ನು ಮನಗಂಡು ನಿರ್ವಹಿಸುವಂತೆ ಹೇಳಿದರು.ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಸಿ.ಟಿ ರವಿ ಮಾತನಾಡಿ, ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜೋಡೆತ್ತಿನ ಹಾಗೇ ಸಹಕಾರದಿಂದ ಕೆಲಸ ಮಾಡಿದರೆ ಅಭಿವೃದ್ಧಿ ಬಂಡಿಯು ಗುರಿತಲುಪಲು ಸಾಧ್ಯವಾಗುತ್ತದೆ. ಅಧಿಕಾರಿಗಳು ಸಹಕಾರದಿಂದ ಯೋಜನ ಬದ್ದರಾಗಿ ಕೆಲಸ ಮಾಡುವುದರಿಂದ ಗ್ರಾಮಗಳು ಅಭಿವೃದ್ಧಿ ಹೊಂದುವುದರಲ್ಲಿ ಸಂಶಯವಿಲ್ಲ ಎಂದ ಅವರು ದೇಶದ ಭವಿಷ್ಯ ಹಳ್ಳಿಗಳಲ್ಲಿ ಅಡಗಿದೆ ಎಂದು ಮಹಾತ್ಮ ಗಾಂಧೀಜಿ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಹೇಳಿದ್ದರು ಜೊತೆಗೆ ಆಡಳಿತವು ವಿಕೇಂದ್ರಿಕರಣದ ಮೂಲಕ ಪ್ರತಿ ಹಳ್ಳಿಗಳು ಸ್ವಾವಲಂಬಿಯಾಗಬೇಕೆಂದು ಮಹಾತ್ಮರು ತಿಳಿಸಿದ್ದರು.
ಹಿಂದೆ ಹಳ್ಳಿಗಳು ದೇಣಿಗೆಗಳನ್ನು ನೀಡುತ್ತಿದಂತಹ ವ್ಯವಸ್ಥೆಯಲ್ಲಿದ್ದು, ಇಂದು ಹಳ್ಳಿಗಳು ದೇಣಿಗೆಗಳಿಗಾಗಿ ಕಾಯುವಂತಹ ಪರಿಸ್ಥಿತಿ ಎದುರಾಗಿದೆ ಎಂದ ಅವರು ಹಳ್ಳಿಗಳಲ್ಲಿ ಕೆರೆಗಳ ಒತ್ತುವರಿಯಾಗಿದ್ದು, ನಾವು ನಮ್ಮದು ಎಂಬ ಮನೋಭಾವವಿಲ್ಲದೆ ಕೆರೆಗಳ ರಕ್ಷಣೆಗಾಗಿ ಜಿಲ್ಲಾ ಕಛೇರಿಯ ಮೊರೆ ಹೋಗುವಂತಹ ಪ್ರಸಂಗ ಎದುರಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ ಪ್ರಾಣೇಶ್ ಮಾತನಾಡಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಯನ್ನು ಮೇಲ್ದರ್ಜೆಗೆರಿಸಬೇಕು ಹಾಗೂ ಪಂಚಾಯಿಗಳ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡುವಂತೆ ಗ್ರಾಮೀಣಾಭಿವೃಧ್ಧಿ ಸಚಿವರಲ್ಲಿ ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಜಿ.ಪ್ರಭು ಎಲ್ಲರನ್ನು ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….