ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಲಸಿಕಾಕರಣದ ವೇಗವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ವಾರಕ್ಕೊಮ್ಮೆ ಲಸಿಕಾ ಉತ್ಸವವನ್ನು ಆಯೋಜಿಸಲು ನಿರ್ಧರಿಸಿದ್ದು, ಆ ಲಸಿಕಾ ಉತ್ಸವದ ದಿನದಂದು 15 ರಿಂದ 20 ಲಕ್ಷ ಡೋಸ್ ಲಸಿಕೆ ಗುರಿ ಸಾಧಿಸಲಾಗುವುದು. ಲಸಿಕಾ ಉತ್ಸವಕ್ಕೆ ಮುಖ್ಯಮಂತ್ರಿಗಳು ಶೀಘ್ರವೇ ಚಾಲನೆ ನೀಡಲಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಸಾದಲಿ ಹೋಬಳಿ ಕೇಂದ್ರದಲ್ಲಿ ಕಂದಾಯ ಇಲಾಖೆ 30 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ನಾಡಕಚೇರಿಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಲಸಿಕಾಕರಣದ ವೇಗವನ್ನು ಮತ್ತಷ್ಟು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ವಾರಕ್ಕೊಮ್ಮೆ ಲಸಿಕಾ ಉತ್ಸವ ಆಯೋಜಿಸುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದು, ಲಸಿಕಾ ಉತ್ಸವದ ದಿನದಂದು 15 ರಿಂದ 20 ಲಕ್ಷ ಡೋಸ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ನಿನ್ನೆ ಒಂದೇ ದಿನ ಲಸಿಕಾ ಮೇಳದಲ್ಲಿ ಒಟ್ಟು ಹತ್ತು ಲಕ್ಷಕ್ಕೂ ಹೆಚ್ಚು ಡೋಸ್ ಲಸಿಕೆ ಒಂದೇ ದಿನದಲ್ಲಿ ಆಗಿದೆ.
ಲಸಿಕಾ ಉತ್ಸವದಲ್ಲಿ ಮುಖ್ಯವಾಗಿ ಬೆಂಗಳೂರಿನ ಕೊಳಗೇರಿ ಪ್ರದೇಶಗಳನ್ನುತಲುಪುವ ಗುರಿ ಹೊಂದಲಾಗಿದೆ. ಕೊಳಗೇರಿಗಳಲ್ಲಿನ ಕಡು ಬಡಜನರಿಗೆ ಲಸಿಕೆ ಹಾಕುವ ಕಾರ್ಯವನ್ನು ಒಂದು ಆಂದೋಲನದ ರೀತಿಯಲ್ಲಿ ಮಾಡಲಾಗುವುದು. ನೆನ್ನೆ ಯ ವೇಳೆಗೆ ಬೆಂಗಳೂರು ಮಹಾ ನಗರದಲ್ಲಿ ಒಟ್ಟು 1 ಕೋಟಿ ಜನರಿಗೆ ಲಸಿಕೆ ನೀಡಲಾಗಿದ್ದು, ಇಡೀ ಬೆಂಗಳೂರಿನ ಒಟ್ಟು ಜನಸಂಖ್ಯೆ 1 ಕೋಟಿ 10 ಲಕ್ಷ ಇದೆ. ಇದರಲ್ಲಿ ಮಕ್ಕಳನ್ನು ಹೊರತುಪಡಿಸಿದರೆ 18 ವರ್ಷ ಮೇಲ್ಪಟ್ಟವರು ಸುಮಾರು 80 ಲಕ್ಷ ಇದ್ದಾರೆ. ಇನ್ನು ಎರಡು ತಿಂಗಳ ಒಳಗಾಗಿ ಬೆಂಗಳೂರಿನ ಎಲ್ಲಾ ವಯಸ್ಕರಿಗೂ ಎರಡೂ ಡೋಸ್ ಲಸಿಕೆ ನೀಡಿ ಶೇ.100 ರಷ್ಟು ಗುರಿ ಸಾಧಿಸಲಾಗುವುದು. ಇನ್ನೆರಡು ತಿಂಗಳಲ್ಲಿ ಬೆಂಗಳೂರು ಮಹಾನಗರ ಇಡೀ ದೇಶದಲ್ಲಿ ಮೊದಲು ಶೇ.100 ರಷ್ಟು ಲಸಿಕೆ ನೀಡಿದ ಮಹಾನಗರವಾಗಿ ಹೊರಹೊಮ್ಮಲಿದೆ.
ಕೋವಿಡ್ ಸಂದರ್ಭದಲ್ಲಿ ರಾಜ್ಯದಲ್ಲಿ ಬೆಂಗಳೂರು ಮಹಾನಗರ ಕೇಂದ್ರಬಿಂದುವಾಗಿ ಗುರುತಿಸಿಕೊಂಡಿತ್ತು. ಬೆಂಗಳೂರಿಗೆ ದೇಶದ ಹೊರರಾಜ್ಯಗಳಿಂದ ಮತ್ತು ವಿದೇಶಗಳಿಂದ ಜನರು ಬರುತ್ತಾರೆ ಆದ್ದರಿಂದ ಬೆಂಗಳೂರಿನ ಜನರಿಗೆ ಕೋವಿಡ್ ಲಸಿಕೆಯನ್ನು ಕೊಡುವ ಪ್ರಾಮುಖ್ಯತೆ ಇದೆ. ಜೊತೆಗೆ ಮುಖ್ಯಮಂತ್ರಿಗಳೂ ಈ ಬಗ್ಗೆ ಸೂಚನೆ ನೀಡಿರುವ ಕಾರಣ ಬೆಂಗಳೂರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಕೇಂದ್ರ ಅರೋಗ್ಯ ಸಚಿವರನ್ನು ಭೇಟಿ ಮಾಡಿ ರಾಜ್ಯಕ್ಕೆ ಪ್ರತಿದಿನ ಐದು ಲಕ್ಷ ಡೋಸ್ ಲಸಿಕೆ ಪೂರೈಸಬೇಕೆಂದು ಮನವಿ ಮಾಡಲಾಗಿದ್ದು, ಈ ಬಗ್ಗೆ ಕೇಂದ್ರದಿಂದ ಸಕಾರಾತ್ಮಕ ಭರವಸೆ ದೊರೆತಿದೆ. ರಾಜ್ಯಕ್ಕೆ ಪ್ರತಿದಿನ ಐದು ಲಕ್ಷ ಡೋಸ್ ಲಸಿಕೆ ಬೇಡಿಕೆ ಸಲ್ಲಿಸಿದ್ದು, ಬೇಡಿಕೆಯಂತೆ ಪೂರೈಕೆಯಾದಲ್ಲಿ ರಾಜ್ಯದಲ್ಲಿ ತಿಂಗಳಿಗೆ ಒಂದೂವರೆ ಕೋಟಿ ಡೋಸ್ ಲಸಿಕೆ ನೀಡಲಾಗುವುದು ಎಂದರು.ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಂದೇ ದಿನ 30 ಸಾವಿರ ಲಸಿಕೆ ನೀಡಲಾಗಿದೆ. ಇನ್ನು ಮುಂದೆ 50 ಸಾವಿರ ಗುರಿ ನೀಡಲಾಗಿದೆ ಎಂದರು.
ಕೋವಿಡ್ 3 ನೇ ಅಲೆಗೆ ಸಿದ್ಧತೆಯಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಕ್ಕಳ ನಿಗಾ ಘಟಕವನ್ನು 60-70 ಹಾಸಿಗೆ ಸಹಿತ ಅಭಿವೃದ್ಧಿಪಡಿಸಲಾಗಿದೆ ಎಂದರು.
ಕರ್ನಾಟಕ ಜಾನುವಾರು ಹತ್ಯೆ, ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮದಡಿ ರಾಜ್ಯ ಸರ್ಕಾರ ಜಿಲ್ಲೆಗೊಂದರಂತೆ ಸರ್ಕಾರಿ ಗೋಶಾಲೆಯನ್ನು 50 ಲಕ್ಷ ರೂಪಾಯಿ ವೆಚ್ವದಲ್ಲಿ ನಿರ್ಮಿಸಲು ನಿರ್ಧರಿಸಿದ್ದು, ಅದರಂತೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ಗೋಶಾಲೆಯನ್ನು ಆರಂಭಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ನಾಗಿರೆಡ್ಡಿಹಳ್ಳಿಯಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸರ್ಕಾರಿ ಗೋಶಾಲೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ರಾಜ್ಯದಲ್ಲಿ ಪ್ರತಿವರ್ಷ ಸರಾಸರಿ 2,13, 800 ವಯಸ್ಸಾದ ಅನುತ್ಪಾದಕ, ರೋಗಗ್ರಸ್ತ ಮತ್ತು ಪ್ರಕೃತಿ ವಿಕೋಪಗಳಿಂದ ಅಂಗವಿಕಲತೆಗೆ ಒಳಗಾದ ಹಾಗೂ ಬೀಡಾಡಿ ದನಗಳ ಪುನರ್ವಸತಿಗಾಗಿ ರಾಜ್ಯ ಸರ್ಕಾರ ಗೋಶಾಲೆಗಳನ್ನು ಆರಂಭಿಸುತ್ತಿದೆ. ಗೋಶಾಲೆಗಳನ್ನು ಅಕ್ಟೋಬರ್ 2 ರ ಒಳಗಾಗಿ ಆರಂಭಿಸಲು ಉದ್ದೇಶಿಸಲಾಗಿದೆ. 2019 ರ ಜಾನುವಾರು ಗಣತಿಯಂತೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 2, 13, 815 ದನಗಳು ಹಾಗೂ 26, 397 ಎಮ್ಮೆಗಳಿವೆ. ಗೋಶಾಲೆ ನಿರ್ವಹಣಾ ವೆಚ್ಚವಾಗಿ ಪ್ರತಿದಿನಕ್ಕೆ ಪ್ರತಿ ಜಾನುವಾರಿಗೆ 17 ರಿಂದ 30 ರೂಗಳನ್ನು ನಿಗಧಿ ಮಾಡಿದ್ದು, ಕನಿಷ್ಟ ನೂರು ಜಾನುವಾರುಗಳನ್ನು ಹೊಂದಿರುವ ಮತ್ತು ಐದು ವರ್ಷಗಳ ಅನುಭವ ಹೊಂದಿದ ಪ್ರತಿಷ್ಠಿತ ಟ್ರಸ್ಟ್ ಅಥವಾ ಸರ್ಕಾರ ಈ ಗೋಶಾಲೆಗಳ ನಿರ್ವಹಣೆಯನ್ನು ಮಾಡಲಿದೆ. ಗೋಸಂಪತ್ತಿನ ರಕ್ಷಣೆಯಲ್ಲಿ ಹೊಸದಾಗಿ ಆರಂಭವಾಗಲಿರುವ ಗೋಶಾಲೆಗಳು ಸಹಕಾರಿಯಾಗಲಿವೆ ಎಂದರು.
ನಂತರ ಶಿಡ್ಲಘಟ್ಟದ ಬಾಲಾಜಿ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಶಿಡ್ಲಘಟ್ಟದಲ್ಲಿ 9-10 ಕೆರೆಗಳಿಗೆ ಎಚ್ ಎನ್ ವ್ಯಾಲಿಯಿಂದ ನೀರು ತುಂಬಿಸುವ ಯೋಜನೆ ಬಂದಿದೆ. ಪ್ರತಿ ಕೆರೆಗೆ ಈ ಭಾಗದಲ್ಲಿ ನೀರು ತುಂಬಿಸುವ ಯೋಜನೆ ಮಾಡಬೇಕಿದೆ. ಜೊತೆಗೆ ಶಿಡ್ಲಘಟ್ಟದಲ್ಲಿ ಕೈಗಾರಿಕಾ ವಲಯಗಳನ್ನು ನಿರ್ಮಿಸಲಾಗುವುದು ಎಂದರು.
ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಹಾಲು ಸಹಕಾರಿ ಸಂಘ ಮಾಡಬೇಕೆಂದು ಕೇಂದ್ರಕ್ಕೆ ಕೋರಲಾಗಿತ್ತು. ಒಂದು ತಿಂಗಳೊಳಗೆ ಪ್ರತ್ಯೇಕ ಹಾಲು ಸಹಕಾರಿ ಸಹಕಾರಿ ಸಂಘದ ರೂಪುರೇಷೆ ಸಿದ್ದವಾಗಲಿದೆ. ಹೈನುಗಾರಿಕೆ, ಕೈಮಗ್ಗ ಮತ್ತು ಪವರ್ ಲೂಮ್, ರೇಷ್ಮೆ ಸೇರಿದಂತೆ ಸಣ್ಣ ಸಂಘಗಳಿಗೆ ಆರ್ಥಿಕ ನೆರವು ನೀಡಲಾಗುವುದು. ಎಂದರು.
ಎತ್ತಿನಹೊಳೆ ಯೋಜನೆಯ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೊಂದಿಗೆ ಸುದೀರ್ಘವಾಗಿ ಚರ್ಚಿಸಲಾಗಿದೆ. ಅವರಿಗೂ ನೀರಾವರಿ ಬಗ್ಗೆ ಆಳ ಜ್ಞಾನವಿದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ ಜಿಲ್ಲೆಗಳಿಗೆ ಆದ್ಯತೆ ಮೇರೆಗೆ ನೀರು ದೊರೆಯಲಿದೆ. ಕೃಷ್ಣಾ ಮೇಲ್ದಂಡೆಯಿಂದ 156 ಟಿಎಂಸಿ ನೀರು ಪಡೆಯಬೇಕಿದೆ. ಇದಕ್ಕೆ ತಕರಾರು ನಡೆಯುತ್ತಿದ್ದು, ವಕೀಲರೊಂದಿಗೆ ಮುಖ್ಯಮಂತ್ರಿಗಳು ಚರ್ಚಿಸಿದ್ದಾರೆ. ಶೀಘ್ರ ತಡೆಯಾಜ್ಞೆ ತೆರವುಗೊಳಿಸಿ ನೀರು ಕೊಡಿಸುವ ಕೆಲಸವಾಗಬೇಕು ಎಂದು ಸಿಎಂ ಸೂಚಿಸಿದ್ದಾರೆ ಎಂದರು.
ಸಚಿವರ ಕಾರ್ಯಕ್ರಮ ಇಂದು ಎಲ್ಲೆಲ್ಲಿ ಏನೇನು: ಶಿಡ್ಲಘಟ್ಟ ತಾಲೂಕಿನ ಸಾದಲಿ ನಾಡ ಕಚೇರಿಯನ್ನು ಸಚಿವ ಡಾ.ಕೆ.ಸುಧಾಕರ್ ಉದ್ಘಾಟಿಸಿದರು. ನಂತರ ಬಶೆಟ್ಟಿಹಳ್ಳಿ ಬಳಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ವಸತಿ ಶಾಲೆ ಕಾಮಗಾರಿಗೆ ಚಾಲನೆ.
ನಗರೋತ್ಥಾನದಡಿ 4.60 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಪೈಪ್ ಕಾಮಗಾರಿ, 2 ಕೋಟಿ ರೂ. ವೆಚ್ಚದ ವಿದ್ಯಾರ್ಥಿನಿಲಯ ಕಟ್ಟಡ ಉದ್ಘಾಟನೆ ಮಾಡಿದರು. ಇದೇ ವೇಳೆ ಗುಡಿಹಳ್ಳಿಯ ಅಬ್ಲೂಡು ಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ, ಸಚಿವರು ಕೆರೆಗೆ ಬಾಗಿನ ಸಮರ್ಪಿಸಿದರು.
99 ಲಕ್ಷ ರೂಗಳ ವೆಚ್ಚದಲ್ಲಿ ಶ್ರೀ ದೇವರಾಜ ಅರಸು ಭವನ ನಿರ್ಮಾಣಕ್ಕೆ ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿಯಲ್ಲಿ ಭೂಮಿ ಪೂಜೆ ಮಾಡಲಾಯಿತು.
ಶಿಡ್ಲಘಟ್ಟದ ನಗರ ಆರೋಗ್ಯ ಕೇಂದ್ರದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಆಮ್ಲಜನಕ ಉತ್ಪಾದನಾ ಘಟಕವನ್ನು ಉದ್ಘಾಟಿಸಿದರು.
15ಕೋಟಿ ವೆಚ್ಚದಲ್ಲಿ ಜಂಗಮಕೋಟೆ ಹೋಬಳಿಯ ಸುಂಡ್ರಹಳ್ಳಿಯ ಇಂದಿರಾ ವಸತಿ ಶಾಲೆಯ ನೂತನ ಕಟ್ಟಡ ಉದ್ಘಾಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶಾಸಕ ವಿ.ಮುನಿಯಪ್ಪ, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ತಹಸೀಲ್ದಾರ್ ರಾಜೀವ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..