ದೊಡ್ಡಬಳ್ಳಾಪುರ: ಉತ್ತರ-ದಕ್ಷಿಣ ದಿಕ್ಕಿನಲ್ಲಿ ಸಾಗುತ್ತ ಗುಂಪುಗಾರಿಕೆ ನಡೆಸುತ್ತಿದ್ದ ತಾಲ್ಲೂಕಿನ ಜೆಡಿಎಸ್ ಮುಖಂಡರ ಬಣ ರಾಜಕೀಯಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹರೀಶ್ ಗೌಡರೆಂಬ ಬಾಣ ಬಿಡುವ ಮೂಲಕ ಬಹುತೇಕ ಅಂತ್ಯವಾಡಿದ್ದಾರೆ ಎನ್ನಲಾಗಿದೆ.
ಕುಮಾರಸ್ವಾಮಿ ಸಮ್ಮುಖದಲ್ಲಿ ನಡೆದ ಸಭೆಯ ನಂತರ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಅಪ್ಪಯ್ಯಣ್ಣ ಇಬ್ಬರು ಮುಖಂಡರು ರಾಜಿಯಾಗಿದ್ದು, ಒಬ್ಬರಿಗೊಬ್ಬರು ಸಿಹಿ ತಿನ್ನಿಸಿ, ಕೈಕೈ ಹಿಡಿದು ಒಗ್ಗಟ್ಟಿನ ಮಂತ್ರ ಜಪಿಸಿ ನಗರಸಭೆ ಚುನಾವಣೆಗೆ ಮುಂದಾಗಿದ್ದಾರೆ.
ತಾಲ್ಲೂಕಿನಲ್ಲಿ ಎಲ್ಲರೂ ಒಟ್ಟಾಗಿ ಪಕ್ಷ ಸಂಘಟಿಸುವ ಮೂಲಕ ನಗರಸಭೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಒಟ್ಟಾಗಿ ಕೆಲಸ ಮಾಡುವುದಾಗಿ ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದಾರೆ.
ಆದರೆ ಸದಾ ಉತ್ತರ-ದಕ್ಷಿಣ ದಿಕ್ಕಿನಲ್ಲಿ ಸಾಗುತ್ತ ಗುಂಪುಗಾರಿಕೆ ನಡೆಸುತ್ತಿದ್ದ ತಾಲ್ಲೂಕಿನ ಜೆಡಿಎಸ್ ಮುಖಂಡರು ಏಕಾಏಕಿ ಒಗ್ಗಟ್ಟಿನ ಮಂತ್ರ ಜಪಿಸಲು ಕಾರಣವೇನು ಎಂಬ ಕುತೂಹಲದ ಹಿನ್ನೆಲೆಯಲ್ಲಿ ಹರಿತಲೇಖನಿ ಮಾಹಿತಿ ಸಂಗ್ರಹಿಸಿದಾಗ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹರೀಶ್ ಗೌಡರೆಂಬ ಬಾಣ ಬಿಟ್ಟಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ
ನಗರಸಭೆ ಚುನಾವಣೆಯ ‘ಬಿ’ ಫಾರಂ ಹಂಚಿಕೆ ವಿಚಾರದಲ್ಲಿ ತಮ್ಮ ಬೆಂಬಲಿಗರಿಗೆ ಟಿಕೆಟ್ ಗಳನ್ನು ಕೊಡಿಸಲು ಮುಖಂಡರು ಲಾಭಿಗಳನ್ನು ನಡೆಸಿದ್ದರು. ಆದರೆ ಎಚ್.ಡಿ.ಕುಮಾರಸ್ವಾಮಿ ಅವರೇ ನಗರಸಭೆಯ ಎಲ್ಲಾ 31 ವಾರ್ಡ್ಗಳ ಬಗ್ಗೆ ಖಾಸಗಿಯಾಗಿ ಹರೀಶ್ ಗೌಡರ ಮೂಲಕ ಸಮೀಕ್ಷೆ ನಡೆಸಿ ಮಾಹಿತಿ ಪಡೆದಿದ್ದು ಅಭ್ಯರ್ಥಿಗಳ ಕುರಿತು ವಿವರ ಸಂಗ್ರಹಿಸಿದ್ದಾರೆ.
ಹೀಗಾಗಿ ಕುಮಾರಸ್ವಾಮಿ ಅವರೆ ಈ ಬಾರಿ ನಗರಸಭೆ ಚುನಾವಣೆಯ ‘ಬಿ’ ಫಾರಂ ಅಂತಿಮಗೊಳಿಸಿ ನೀಡಲು ಸಿದ್ದತೆ ನಡೆಸಿದ್ದರು. ಇದರಿಂದ ಆತಂಕಕ್ಕೆ ಒಳಗಾದ ಎರಡು ಬಣಗಳು ಒಗ್ಗಟ್ಟಿನ ಮಂತ್ರ ಜಪಿಸಿವೆ ಎನ್ನಲಾಗಿದೆ.
ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಪಕ್ಷ ಸೇರ್ಪಡೆಗೆ ವೇದಿಕೆ ಸಿದ್ದತೆ ಮತ್ತಿತರ ವಿಚಾರಗಳು ಬಿ.ಮುನೇಗೌಡ ಹಾಗೂ ಅಪ್ಪಯ್ಯಣ್ಣ ನಡುವಿನ ವೈಮನಸ್ಯ ಕಡಿಮೆಯಾಗಲು ವೇದಿಕೆಯಾಗಿಸಲು ಹರೀಶ್ ಗೌಡ ಸಮರ್ಪಕವಾಗಿ ಬಳಸಿಕೊಂಡಿದ್ದಾರೆ ಎಂದು ಜೆಡಿಎಸ್ ಮುಖಂಡರು ತಿಳಿಸಿದ್ದಾರೆ.
ಬಿ.ಮುನೇಗೌಡರಿಗೆ ಹೆಚ್ಚಿದ ಜವಬ್ದಾರಿ: ಭಿನಮತದಿಂದ ದೂರಾಗಿದ್ದ ಪಕ್ಷದ ಮುಂಖಡರು ಒಂದಾಗಿರುವುದು ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಆದರೂ ದೊಡ್ಡಬಳ್ಳಾಪುರ ವಿಧಾನಸಭೆ ಚುನಾವಣೆಗೂ ಮುನ್ನ ಸೆ.3 ರಂದು ನಡೆಯಲಿರುವ ನಗರಸಭೆ ಚುನಾವಣೆ, ಮುಂಬರಲಿರುವ ತಾಲೂಕುಪಂಚಾಯಿತಿ, ಜಿಲ್ಲಾಪಂಚಾಯಿತಿ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಅವರು ಹೆಚ್ಚಿನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಪಕ್ಷದ ವರಿಷ್ಟರಿಗೆ ತಮಗಿರುವ ಜನ ಬೆಂಬಲವನ್ನು ತೋರಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎನ್ನುತ್ತಿವೆ ಜೆಡಿಎಸ್ ಮೂಲಗಳು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..