ಚಿಕ್ಕಬಳ್ಳಾಪುರ: ಇವತ್ತಿನ ಜಾಗತೀಕರಣ ಯುಗದಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ಕೌಶಲ್ಯ ತರಬೇತಿ, ಶಿಕ್ಷಣ ಬಹಳ ಮುಖ್ಯವಾಗಿದ್ದು, ಕೇಂದ್ರ ಸರ್ಕಾರ ಇತ್ತೀಚಿಗೆ ಜಾರಿಗೆ ತಂದಿರುವ ಹೊಸ ಶಿಕ್ಷಣ ನೀತಿಯನ್ನು ಇದೇ ತಳಹದಿಯ ಮೇಲೆ ರೂಪಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸುಧಾಕರ್ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ, ಕೌಶಾಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಕೌಶಲ್ಯ ಮಿಷನ್ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಿನಿ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಕೋವಿಡ್ ಸಾಂಕ್ರಾಮಿಕ ರೋಗ ಬಂದ ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಬಹುಪಾಲು ಕ್ಷೇತ್ರದ ಜನರು ಸೇರಿ ನಾವೆಲ್ಲರೂ ಸಾಕಷ್ಟು ಆತಂಕಕ್ಕೆ ಒಳಗಾಗಿದ್ದೇವೆ. ಈ ಸಾಂಕ್ರಾಮಿಕ ರೋಗಕ್ಕೆ ಎಷ್ಟೋ ಜನ ಸಾವು-ನೋವುಗಳು ಆಗಿವೆ. ಇದರಿಂದ ಜೀವನೋಪಯವೇ ಕಳೆದು ಹೋಗಿದೆ ಎಂಬ ಭಯ ಇದುವರೆಗೂ ಹೋಗಿಲ್ಲ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಜಿಲ್ಲಾಡಳಿತ ಆಯೋಜಿಸಿರುವ ಮಿನಿ ಉದ್ಯೋಗ ಮೇಳವು ಯುವಕರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ಅಲ್ಲದೆ ಎಲ್ಲಾ ಆತಂಕಗಳನ್ನು ದೂರ ಮಾಡಿದೆ. ಮೇಳ ಆಯೋಜಿಸಿದ ಜಿಲ್ಲಾಡಳಿತ ಹಾಗೂ ಇತರೆ ಇಲಾಖೆಗಳಿಗೆ ವಿಶೇಷ ಅಭಿನಂದನೆಗಳನ್ನು ತಿಳಿಸಿದರು.
ಪ್ರಸ್ತುತ ತಾಂತ್ರಿಕ ಯುಗದಲ್ಲಿ ಉದ್ಯೋಗಾಧಾರಿತ ಶಿಕ್ಷಣ ಅಗತ್ಯ. ಆದರೆ ನಮ್ಮ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿಯ ಕೊರತೆ ಇದೆ. ಇವತ್ತಿನ ದಿನಗಳಲ್ಲಿ ವಿದ್ಯೆಯಲ್ಲಿ ಕೌಶಲ್ಯ ಇರಬೇಕು ಎಂಬ ಉದ್ದೇಶದಿಂದಲೇ ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿಯನ್ನು ಜಾರಿ ಮಾಡಿದೆ. ವಿದ್ಯಾರ್ಥಿಗಳು ಬೇಡಿಕೆಗೆ ಅನುಗುಣವಾಗಿ ಶಿಕ್ಷಣ ಪಡೆದು ಉದ್ಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಇವತ್ತಿನ ದಿನಗಳಲ್ಲಿ ಕೃಷಿಯಲ್ಲಿ ಆಧುನಿಕತೆ ಕಂಡುಕೊಳ್ಳಬೇಕು. ತಂತ್ರಜ್ಞಾನ ಬಳಸಿಕೊಂಡು ಕೃಷಿ ಮಾಡಬೇಕಿದೆ. ಇವತ್ತು ವಿದ್ಯಾರ್ಥಿಗಳು ಕೃಷಿ ಮಾಡಲ್ಲ ಎಂಬುದೇನೂ ಇಲ್ಲ. ಇಂಜಿನಿಯರ್ ವಿದ್ಯಾರ್ಥಿಗಳು ಕೂಡ ಇವತ್ತು ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
ಇದರ ಜತೆಗೆ ಸ್ವಯಂ ಉದ್ಯೋಗದಲ್ಲೂ ಸಾಕಷ್ಟು ವಿಪುಲ ಅವಕಾಶಗಳಿದ್ದು, ಯುವಕರು ಈ ಬಗ್ಗೆ ಹೆಚ್ಚಿನ ಚಿಂತನೆ ಮಾಡಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಬೇಡಿಕೆಗೆ ಅನುಗುಣವಾಗಿ ವಿದ್ಯಾಭ್ಯಾಸ ಪಡೆಯಬೇಕು. ಇದಕ್ಕೆ ಸರ್ಕಾರವೂ ಹೆಚ್ಚಿನ ಒತ್ತು ಕೊಡಲಾಗುವುದು. ಇದಲ್ಲದೆ ಆರೋಗ್ಯ ಇಲಾಖೆಯಲ್ಲಿ ಇದೀಗ ನರ್ಸಿಂಗ್ ಸಾಕಷ್ಟು ಅವಕಾಶ, ಈ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಲಾಗುತ್ತಿದೆ. ಇದಲ್ಲದೆ ಯುವಕರು, ವಿದ್ಯಾರ್ಥಿಗಳಲ್ಲಿ ಕೌಶಲ್ಯಭರಿತ ತರಬೇತಿ ನೀಡುವ ಉದ್ದೇಶದಿಂದಲೇ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಇದಕ್ಕಾಗಿಯೇ ಸ್ಕಿಲ್ ಇಂಡಿಯಾ ಎಂಬ ಪ್ರತ್ಯೇಕ ಇಲಾಖೆಯನ್ನೇ ರೂಪಿಸಿದ್ದು, ಅದರ ಮೂಲಕ ವಿಶೇಷ ಶಿಕ್ಷಣ ನೀಡಲಾಗಿದೆ ಎಂದರು.
ಇವತ್ತು ಎಲ್ಲಾ ಕ್ಷೇತ್ರಗಳಲ್ಲಿ ಸಂಶೋಧನೆಗಳಿಗೆ ಅವಕಾಶಗಳು ಇವೆ. ಹಾಗಾಗಿ ಸಂಶೋಧನೆಗಳು ಹೆಚ್ಚಾಗಬೇಕು. ವಿದ್ಯಾರ್ಥಿಗಳು ಈ ಬಗ್ಗೆ ಹೆಚ್ಚಿನ ಒಲವು ತೋರಬೇಕು. ಉಪನ್ಯಾಸಕರೂ, ಅಧ್ಯಾಪಕರ ಈ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ, ಸಲಹೆ ಸೂಚನೆ ನೀಡಬೇಕು. ಅವರಲ್ಲಿ ಕಲಿತಾ ಆಸಕ್ತಿ ತುಂಬಬೇಕು ಎಂದು ಸಲಹೆ ನೀಡಿದರು.
ಉದ್ಯೋಗ ಮೇಳದಲ್ಲಿ ಒಟ್ಟು 7000-8000 ಅರ್ಜಿಗಳು ಸಲ್ಲಿಕೆಯಾಗಿದ್ದು, ಇದರಲ್ಲಿ ಅರ್ಥದಷ್ಟು ಅರ್ಜಿಗಳು ಆನ್ ಲೈನ್ ಮೂಲಕ ಸಲ್ಲಿಕೆಯಾಗಿವೆ. ಇಲ್ಲಿ 900-1000 ಹುದ್ದೆಗಳು ಲಭ್ಯವಿದ್ದು, ಬ್ಯಾಂಕಿಂಗ್ ಸೆಕ್ಟರ್, ಸರ್ವೀಸ್ ಇಂಡಸ್ಟ್ರೀ, ಕೃಷಿ ಆಧಾರಿತ ಉದ್ಯಮಗಳು, ಆಟೋ ಮೊಬೈಲ್ವ ಹಾಗೂ ಇತರೆ ಕಂಪನಿಗಳು ಭಾಗಿಯಾಗಿದ್ದು, ಈ ಕಂಪನಿಗಳು 10,000 ರಿಂದ 25,000 ರೂಪಾಯಿವರೆಗೂ ಸಂಬಳ ಕೊಡುವುದಾಗಿ ತಿಳಿಸಿವೆ. ಹಾಗಾಗಿ ಉದ್ಯೋಗಾಕಾಂಕ್ಷಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದ ಅವರು, ಮೇಳದಲ್ಲಿ ಉದ್ಯೋಗ ಸಿಗದವರು ಧೃತಿಗೆಡುವ ಅಗತ್ಯವಿಲ್ಲ. ಮುಂದೆ ಸಾಕಷ್ಟು ಅವಕಾಶಗಳು ಇವೆ ಎಂದು ಭರವಸೆ ನೀಡಿದರು.
ಮಹಾತ್ಮಾಗಾಂಧಿ ಅವರು ಹೇಳಿದಂತೆ ನಮ್ಮ ನಂಬಿಕೆಗಳು ನಮ್ಮ ಮನಸ್ಸಿನ ಭಾವನೆಗಳಾಗುತ್ತವೆ. ಅವು ಪದಗಳು ಆಗುತ್ತವೆ. ಆ ಪದಗಳು ಕೃತಿಗಳು ಆಗುತ್ತವೆ. ಕೃತಿಗಳು ಅಭ್ಯಾಸಗಳು ಆಗುತ್ತವೆ. ಹಾಗಾಗಿ ನಾವು ಒಳ್ಳೆ ಅಭ್ಯಾಸಗಳನ್ನು ಸತತವಾಗಿ ರೂಡಿಸಿಕೊಳ್ಳಬೇಕು. ಆಗ ಅದರಿಂದ ಬಂದ ಫಲಿತಾಂಶವೂ ಸಕಾರಾತ್ಮಕವಾಗಿರುತ್ತದೆ ಎಂದು ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯು ಬರಡು ಜಿಲ್ಲೆಯಾದರೂ ಇಲ್ಲಿಂದ ರಾಜ್ಯದೆಲ್ಲೆಡೆಗೆ ತರಕಾರಿ, ಹಣ್ಣು ರಪ್ತು ಮಾಡುತ್ತಾರೆ. ಇದರಲ್ಲಿ ಯುವಕರ ಪರಿಶ್ರಮ ಇದೆ. ಹಾಗಾಗಿ ಎಲ್ಲರೂ ಸ್ವಾಭಿಮಾನದ ಬದುಕು ರೂಪಿಸಿಕೊಳ್ಳುವತ್ತ ಚಿಂತನೆ ಮಾಡಬೇಕು ಎಂದು ಹೇಳಿದರು.
ಮಹಿಳೆಯರ ಅಭಿವೃದ್ಧಿಗಾಗಿ ಮಾನ್ಯ ಮುಖ್ಯಮಂತ್ರಿಗಳು ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಸುಮಾರು 7500 ಸ್ತ್ರೀಶಕ್ತಿ ಸಂಘಗಳಿಗೆ ತಲಾ ಒಂದೂವರೆ ಲಕ್ಷ ರುಪಾಯಿ ಸಹಾಯಧನ ಕೊಟ್ಟಿದ್ದಾರೆ. ರಾಜ್ಯಾದ್ಯಂತ ಸುಮಾರು 750 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣಕ್ಕೆ 150 ಕೋಟಿ ರು. ಮೀಸಲಿಟ್ಟಿದ್ದಾರೆ ಎಂದರು.
ಪ್ರತಿ ಮನೆಯಲ್ಲಿರುವ ಯುವಕರಿಗೆ ಉದ್ಯೋಗ ಕೊಡುವ ಕನಸು ನಮ್ಮ ಸರ್ಕಾರ ಹೊಂದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಸಾಕಷ್ಟು ಕೈಗಾರಿಕೆಗಳು ಸ್ಥಾಪನೆ ಮಾಡಬೇಕು ಎಂಬ ಸಂಕಲ್ಪ ಹೊಂದಿದ್ದೇನೆ. ಇದಕ್ಕಾಗಿ ಕೈಗಾರಿಕೆಗಳ ಸ್ಥಾಪನೆಗೆ ಜಿಲ್ಲಾಡಳಿತ ಸರ್ಕಾರಿ ಜಾಗ ಗುರುತು ಮಾಡಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಆಧ್ಯತೆ ಮೆರೆಗೆ ಟೆಕ್ಸ ಟೈಲ್ಸ್ ಪಾರ್ಕ್ ನಿರ್ಮಾಣಕ್ಕಾಗಿ ಕೇಂದ್ರ ಸಚಿವರಲ್ಲಿ ಮನವಿ ಮಾಡಿದ್ದೇನೆ. ಅವರು ಕೂಡ ಸಕಾರಾತ್ಮಕವಾಗಿ ಸ್ಪಂದನೆ ಮಾಡಿದ್ದಾರೆ. ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿ ಪಾರ್ಮಾ ಸ್ಪುಟಿಕಲ್ ಸಂಬಂಧಿಸಿದ ಕಂಪನಿಗಳನ್ನು ತರಲು ಚಿಂತನೆ ಮಾಡಲಾಗಿದೆ ಎಂದ ಅವರು, ಜಿಲ್ಲೆಯಲ್ಲಿ ಸತತವಾಗಿ ಉದ್ಯೋಗ ಮೇಳಗಳು ಆಗಬೇಕು. ಮುಂದಿನ ದಿನಗಳಲ್ಲಿ ಬೃಹತ್ ಉದ್ಯೋಗ ಮೇಳಗಳನ್ನು ಆಯೋಜಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಮೇಳದಲ್ಲಿ ಭಾಗವಹಿಸಿ ವಿವಿಧ ಕಂಪನಿಗಳಿಗೆ ಆಯ್ಕೆಯಾದ ಹಲವು ಉದ್ಯೋಗಾಕಾಂಕ್ಷಿಗಳಿಗೆ ಸಚಿವ ಸುಧಾಕರ್ ಅವರು ನೇಮಕಾತಿ ಪತ್ರಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜು, ನಗರಸಭಾ ಅಧ್ಯಕ್ಷ ಆನಂದರೆಡ್ಡಿ ಬಾಬು, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶಿವಕುಮಾರ್, ಜಿಲ್ಲಾ ಉದ್ಯೋಗಾಧಿಕಾರಿ ಎಂ.ಪ್ರಸಾದ್, ನಗರಸಭೆ ಆಯುಕ್ತ ಡಾ.ಮಹಂತೇಶ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಂ.ಎ.ಚಂದ್ರಯ್ಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
890 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗ: ಉದ್ಯೋಗ ಮೇಳದಲ್ಲಿ 3351 ಅಭ್ಯರ್ಥಿಗಳು ಭಾಗವಹಿಸಿದ್ದರು. ಈ ಪೈಕಿ 1890 ಮಂದಿ ಪುರುಷ ಅಭ್ಯರ್ಥಿಗಳು,1416 ಮಹಿಳಾ ಅಭ್ಯರ್ಥಿಗಳು ಆಗಿದ್ದಾರೆ. ಉದ್ಯೋಗಕ್ಕಾಗಿ ಆನ್ ಲೈನ್ ನಲ್ಲಿ 1618, ಆಫ್ ಲೈನ್(ನೇರವಾಗಿ) ನಲ್ಲಿ 1733 ಮಂದಿ ಅರ್ಜಿ ಸಲ್ಲಿಸಿದ್ದು, ಒಟ್ಟು 25 ಕಂಪನಿಗಳು ಮೇಳದಲ್ಲಿ ಭಾಗವಹಿಸಿದ್ದವು. ಈ ಪೈಕಿ 890 ಮಂದಿಗೆ ಉದ್ಯೋಗವಕಾಶ ನೀಡಿದ್ದು, 150 ಮಂದಿ ಅಭ್ಯರ್ಥಿಗಳು ಮುಂದಿನ ಹಂತದ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..