ಬೆಂ.ಗ್ರಾ.ಜಿಲ್ಲೆ: ಕೇಂದ್ರ ಸರ್ಕಾರವು 2021-22ನೇ ಸಾಲಿನಿಂದ ‘’ರಾಷ್ಟ್ರೀಯ ಕಂದು ರೋಗ ನಿಯಂತ್ರಣ ಲಸಿಕಾ ಅಭಿಯಾನ’’ ಕಾರ್ಯಕ್ರಮವನ್ನು ಆರಂಭಿಸಿದ್ದು, 4 ರಿಂದ 8 ತಿಂಗಳ ವಯಸ್ಸಿನ ಆಕಳು ಮತ್ತು ಎಮ್ಮೆಗಳ ಹೆಣ್ಣು ಕರುಗಳಿಗೆ ವರ್ಷದಲ್ಲಿ ಮೂರು ಬಾರಿ ಅಂದರೆ ಸೆಪ್ಟಂಬರ್-2021, ಜನವರಿ-2022, ಮೇ-2022ರ ಮಾಹೆಯಲ್ಲಿ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಲ್ಲಿ ಪ್ರಥಮ ಸುತ್ತಿನ ಕಂದುರೋಗ ಲಸಿಕಾ ಕಾರ್ಯಕ್ರಮವನ್ನು 2021ರ ಸೆಪ್ಟೆಂಬರ್ 01 ರಿಂದ 15 ರವರೆಗೆ ನಡೆಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ ತಿಳಿಸಿದ್ದಾರೆ.
ಕಂದು ರೋಗವು ಬ್ಯಾಕ್ಟೀರಿಯಾದ ಸೋಂಕು ಆಗಿದ್ದು, ಹಸು, ಎಮ್ಮೆ, ಕುರಿ, ಮೇಕೆ, ಹಂದಿ, ನಾಯಿ, ಒಂಟೆ ಮತ್ತು ಕುದುರೆಗಳು ಈ ರೋಗಕ್ಕೆ ತುತ್ತಾಗುತ್ತವೆ, ರೋಗ ಪೀಡಿತ ಜಾನುವಾರುಗಳಲ್ಲಿ ಕಂದು ಹಾಕುವಿಕೆ, ಮಾಸು/ಸತ್ತೆ ಹೊರಬೀಳದೆ ಗರ್ಭದಲ್ಲೆಯೇ ಉಳಿದು ಗರ್ಭಾಶಯದ ನಂಜು ಉಂಟಾವುದರಿಂದಾಗಿ ರಾಸುಗಳು ಗರ್ಭಕಟ್ಟುವಲ್ಲಿ ವಿಳಂಬವಾಗುತ್ತವೆ, ಕಾಲುಗಳಲ್ಲಿ ನೀರು ತುಂಬಿಕೊಂಡ ಊತ ಕಂಡುಬರುತ್ತದೆ, ರೋಗಗ್ರಸ್ಥ ಗಂಡು ಜಾನುವಾರುಗಳಲ್ಲಿ ವೃಷಣಗಳು ಬಾತುಕೊಳ್ಳುತ್ತವೆ.
ಕಂದು ರೋಗದಿಂದ ರಾಸುಗಳಲ್ಲಿ ಗರ್ಭಪಾತವಾಗುವುದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ. ಅಲ್ಲದೆ ಕಂದು ರೋಗವು ಪ್ರಾಣಿಜನ್ಯ ರೋಗ ಆಗಿದ್ದು, ಮನುಷ್ಯರಿಗೂ ಸಹ ಹರಡುಬಲ್ಲದು ಹಾಗಾಗಿ ಪಶುಪಾಲಕರು ಈ ರೋಗಕ್ಕೆ ತುತ್ತಾಗುವ ಸಂಭವ ಹೆಚ್ಚಾಗಿರುತ್ತದೆ.
ಜಿಲ್ಲೆಯ ಪಶುಪಾಲನಾ ಇಲಾಖೆಯ ಅಧಿಕಾರಿ ಅಥವಾ ಸಿಬ್ಬಂದಿಯವರು ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ, ಜಿಲ್ಲೆಯಲ್ಲಿರುವ ಸುಮಾರು 25,000 ಆಕಳು ಮತ್ತು ಎಮ್ಮೆಗಳ 4 ರಿಂದ 8 ತಿಂಗಳ ವಯಸ್ಸಿನ ಹೆಣ್ಣುಕರುಗಳಿಗೆ ಮೊದಲನೇ ಸುತ್ತಿನಲ್ಲಿ ಲಸಿಕೆ ಹಾಕಲಾಗುವುದು. ಕಂದುರೋಗದ ಲಸಿಕೆಯನ್ನು ಹಾಕಿಸುವ ಮೂಲಕ ರೋಗವನ್ನು ನಿಯಂತ್ರಣ ಮಾಡಲು ಪಶುಪಾಲಕರು ಸಹಕರಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..