ಬೆಂ.ಗ್ರಾ.ಜಿಲ್ಲೆ: ಕಲ್ಲು ಗಣಿ ಗುತ್ತಿಗೆ ಪ್ರದೇಶದಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದರ ಜೊತೆಗೆ, ಸುತ್ತ ಮುತ್ತ ತಡೆಗೋಡೆಗಳನ್ನು ಹಾಗೂ ಬೆಂಚ್ ಮಾರ್ಕ್ ಗಳನ್ನು ನಿರ್ಮಿಸುವ ಮೂಲಕ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಭಿನ್ನ ಸಾಮರ್ಥ್ಯ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವ ಹಾಲಪ್ಪ ಆಚಾರ್ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅವರು ಮಾತನಾಡಿದರು.
ಕಲ್ಲು ಗಣಿ ಗುತ್ತಿಗೆಗಳು ಕ್ಲಸ್ಟರ್ ರೂಪದಲ್ಲಿ ಇರುವುದರಿಂದ ಸರಿಯಾದ ಫೆನ್ಸಿಂಗ್ ಹಾಗೂ ವೇ ಬ್ರಿಡ್ಜ್ ಗಳನ್ನು ಕ್ಲಸ್ಟರ್ ಗಳಲ್ಲಿ ನಿರ್ಮಿಸಲು ಹಾಗೂ ಡಿಎಂಎಫ್ ಅನುದಾನವನ್ನು ಸದರಿ ಪ್ರದೇಶದಲ್ಲಿ ಬಳಕೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ನಿಯಮಾನುಸಾರ ತೆಗೆದುಕೊಳ್ಳಬೇಕಾದ ಎಲ್ಲಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಹಾಗೂ ಗಣಿ ಬಾಧಿತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು. ಅಲ್ಲದೆ, ಉಪಖನಿಜ ಸಾಗಣೆ ಮಾಡುವ ವಾಹನಗಳಿಂದ ರಸ್ತೆಗಳು ಹಾಳಾಗದಂತೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಕಲ್ಲು ಗಣಿ ಗುತ್ತಿಗೆ ಪ್ರದೇಶದಲ್ಲಿ ಯಾವುದೇ ರೀತಿಯ ಅನಾಹುತಗಳು ಸಂಭವಿಸದಂತೆ ಗುತ್ತಿಗೆದಾರರು ಸೂಕ್ತ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದರಲ್ಲದೆ, ಗಣಿ ಪ್ರದೇಶದಲ್ಲಿ ಸ್ಪೋಟಕಗೊಂಡು ಪ್ರಾಣಹಾನಿಯಂತಹ ಅವಘಡಗಳು ಸಂಭವಿಸುವ ಸಾಧ್ಯತೆಯಿರುವುದರಿಂದ, ಇಂತಹ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಈ ವೇಳೆ ಜಿಲ್ಲೆಯ ರೈತರು ಅಕ್ರಮ ಗಣಿಗಾರಿಕೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಸಚಿವರಿಗೆ ಮನವಿ ಸಲ್ಲಿಸಿದರು.
ಸಭೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ರಾಜ್ಯ ನಿರ್ದೇಶಕ ಪಿ.ಎನ್.ರವೀಂದ್ರ, ಅಪರ ಜಿಲ್ಲಾಧಿಕಾರಿ ವಿಜಯಾ.ಈ.ರವಿಕುಮಾರ್, ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ರೇಣುಕಾ, ತೋಟಗಾರಿಕೆ ಉಪ ನಿರ್ದೇಶಕ ಮಹಾಂತೇಶ ಮುರುಗೋಡ, ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕೇಂದ್ರ ಕಚೇರಿಯ ಉಪನಿರ್ದೇಶಕಿ (ಖನಿಜ ವಿಭಾಗ) ಲಕ್ಷ್ಮಮ್ಮ, ಡಿವೈಎಸ್ಪಿ ಟಿ. ರಂಗಪ್ಪ, ತಹಶೀಲ್ದಾರ್ ಅನಿಲ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಗೂ ಮುನ್ನ ದೇವನಹಳ್ಳಿ ತಾಲ್ಲೂಕಿನ ತೈಲಗೆರೆ ಗ್ರಾಮದ ಸರ್ವೆ ನಂ.110 ರಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬ ಮಾಹಿತಿ ಹಿನ್ನೆಲೆ, ಆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..