ದೊಡ್ಡಬಳ್ಳಾಪುರ: ಸೆ.3ರಂದು ನಡೆದ ನಗರ ಸಭೆ ಚುನಾವಣೆಯಲ್ಲಿ ಶೇ.75.9 ಮತದಾನ ನಡೆದಿದ್ದು, ಕಳೆದ ಬಾರಿಗಿಂತ ಶೇ.3 ಹೆಚ್ಚಾಗಿದೆ. ಸತತ ಏಳೂವರೆ ವರ್ಷಗಳ ನಂತರ ನಡೆಯುವ ಮೂಲಕ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ದೊಡ್ಡಬಳ್ಳಾಪುರ ನಗರಸಭೆ ಚುನಾವಣೆ ಶಾಂತಯುತವಾಗಿ ಮುಗಿದಿದ್ದು ಅಭ್ಯರ್ಥಿಗಳು ಮತಗಳಿಕೆಯ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
33,229 ಪುರುಷರು ಹಾಗೂ 33,412 ಮಹಿಳಾ ಮತದಾರರು ಸೇರಿ ಒಟ್ಟು ಒಟ್ಟು 66,641 ಮತದಾರರಿದ್ದು, ಇದರಲ್ಲಿ 25,554 ಪುರುಷರು ಹಾಗೂ 25,005 ಮಹಿಳಾ ಮತದಾರರು ಸೇರಿ ಒಟ್ಟು ಒಟ್ಟು 50,559 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಪುರುಷರು ಶೇ.76.9 ಹಾಗೂ ಮಹಿಳೆಯರು ಶೇ.74.8 ರಷ್ಟು ಮತ ಚಲಾಯಿಸಿ ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ.
31ವಾರ್ಡ್‍ಗಳ ಪೈಕಿ ಅತ್ಯಂತ ಕಡಿಮೆ ಮತದಾನ ಶೇ.61.7 ರಷ್ಟು 23ನೇ ವಾರ್ಡ್ ಗಾಣಿಗರ ಪೇಟೆ (ಮತಗಟ್ಟೆ ಸಂಖ್ಯೆ 46)ಯಲ್ಲಿ ನಡೆದಿದೆ. ಇನ್ನು ಅತ್ಯಂತ ಹೆಚ್ಚು ಮತದಾನ 89.9 ರಷ್ಟು 28ನೇ ವಾರ್ಡ್ ಕಚೇರಿ ಪಾಳ್ಯದಲ್ಲಿ(ಮತಗಟ್ಟೆ ಸಂಖ್ಯೆ 58) ನಡೆದಿದೆ.
ಚುನಾವಣೆಯ ನಂತರ ಯಾವ ವಾರ್ಡ್‍ನಲ್ಲಿ ಎಷ್ಟು ಮತದಾನವಾಯಿತು..? ಯಾರದು ಮೇಲುಗೈ ಎಂಬಿತ್ಯಾದಿ ಚರ್ಚೆಗಳು ಸಾರ್ವಜನಿಕರಲ್ಲಿ ಕೇಳಿ ಬರುತ್ತಿದೆ.
ಶುಕ್ರವಾರ 31 ಸ್ಥಾನಗಳಿಗಾಗಿ ನಡೆದ ಚುನಾವಣೆಗೆ ಕಾಂಗ್ರೆಸ್-31, ಬಿಜೆಪಿ -30, ಜೆಡಿಎಸ್-28, ಸಿಪಿಐ(ಎಂ)-2, ಬಿಎಸ್‍ಪಿ-3 , ಕನ್ನಡ ಪಕ್ಷ-5, ಕೆ.ಆರ್.ಎಸ್-2, ಉತ್ತಮ ಪ್ರಜಾಕೀಯ ಪಕ್ಷ-1, ಎಸ್.ಡಿ.ಪಿ.ಐ-2, ಹಾಗೂ ಪಕ್ಷೇತರರು -15 ಸೇರಿ 119 ಮಂದಿ ಅಂತಿಮ ಕಣದಲ್ಲಿದ್ದರು.
ಶಾಸಕ ಟಿ.ವೆಂಕಟರಮಣಯ್ಯರ ಅಭಿವೃದ್ಧಿ ಕಾರ್ಯ, ಕೋವಿಡ್ ಸಂದರ್ಭದಲ್ಲಿನ ನೆರವು, ಅಭ್ಯರ್ಥಿಗಳ ವರ್ಚಸ್ಸು, ಅಭ್ಯರ್ಥಿಗಳ ಆಯ್ಕೆ ಅಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧೆಗೆ ಇಳಿದರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ ಸಾಧನೆ ಮುಂದಿಟ್ಟು ಹಾಗೂ ಸ್ವಂತ ವರ್ಚಿಸ್ಸು, ಮಾಜಿ ನಗರಸಭೆ ಸದಸ್ಯರ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧೆಗೆ ಇಳಿದಿದ್ದಾರೆ.
ಇನ್ನೂ ಅಂತಿಮ ಕ್ಷಣದಲ್ಲಿ ಮಾಜಿಮುಖ್ಯಮಂತ್ರಿ ಕುಮಾರಸ್ವಾಮಿ ಸಂಧಾನದಿಂದ ಜೆಡಿಎಸ್ ಮುಖಂಡರ ಒಗ್ಗಟ್ಟಿನ ಮಂತ್ರ, ಆಡಳಿತ – ವಿರೋಧ ಪಕ್ಷದ ವೈಪಲ್ಯ, ಮಾಜಿ ನಗರಸಭೆ ಸದಸ್ಯರ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಸ್ಥಳೀಯ ಮಟ್ಟದಲ್ಲಿ ತನ್ನದೇ ಸಂಘಟನೆ ಹೊಂದಿರುವ ಕನ್ನಡ ಪಕ್ಷ, ಸಿಪಿಐ(ಎಂ) ಸ್ಪರ್ಧೆಗಿಳಿದಿದ್ದರೆ, ಪ್ರಥಮ ಬಾರಿಗೆ ಕೆ.ಆರ್.ಎಸ್, ಉತ್ತಮ ಪ್ರಜಾಕೀಯ ಪಕ್ಷ-, ಎಸ್.ಡಿ.ಪಿ.ಐ ಸತ್ವ ಪರೀಕ್ಷೆಗೆ ಒಳಗಾಗಿದ್ದರು.ಅಲ್ಲದೆ ಪ್ರಮುಖ ಪಕ್ಷಗಳಿಂದ ಟಿಕೆಟ್ ವಂಚಿತರು ಪಕ್ಷೇತರರಾಗಿ ಕಣದಲ್ಲಿದ್ದರು.
ಮತಯಂತ್ರಗಳನ್ನು ಕೊಂಗಾಡಿಯಪ್ಪ ಪ್ರೌಢಶಾಲೆಯ ಚುನಾವಣಾ ಕೇಂದ್ರದ ಭದ್ರತಾ ಕೊಠಡಿಯಲ್ಲಿರಿಸಲಾಗಿದೆ. ಕೊಠಡಿಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಸೇ.6 ರಂದು ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯಲಿದ್ದು, ಕುತೂಹಲಕ್ಕೆ ತೆರೆ ಬೀಳಲಿದೆ.
ಮತ ಎಣಿಕೆಗೆ ಸಿದ್ಧತೆ: ಚುನಾವಣಾ ಫಲಿತಾಂಶ ಸೆ.6ರಂದು ಬೆಳಿಗ್ಗೆ 8 ಗಂಟೆಗೆ ನಗರದ ಕೊಂಗಾಡಿಯಪ್ಪ ಪ್ರೌಢಶಾಲೆಯ ಚುನಾವಣಾ ಕೇಂದ್ರದಲ್ಲಿ ನಡೆಯಲಿದೆ. ಇದಕ್ಕಾಗಿ 4 ಎಣಿಕೆ ಕೊಠಡಿಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಎಣಿಕೆ ಕೊಠಡಿಯಲ್ಲಿ 4 ಟೇಬಲ್‍ಗಳಂತೆ 16 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ. 4 ಸುತ್ತುಗಳಲ್ಲಿ ಮತ ಎಣಿಕೆ ನಡೆಸಲಾಗುವುದು ಎಂದು ತಾಲೂಕು ಚುನಾವಣಾಕಾರಿ ಹಾಗೂ ತಹಸೀಲ್ದಾರ್ ಟಿ.ಎಸ್.ಶಿವರಾಜ್ ತಿಳಿಸಿದ್ದಾರೆ.
ವಿದ್ಯುನ್ಮಾನ ಮತ ಯಂತ್ರಗಳ ಮೂಲಕ ಮತದಾನ ನಡೆದಿರುವ ಹಿನ್ನಲೆಯಲ್ಲಿ ಬೆಳಿಗ್ಗೆ 10.30ರ ವೇಳೆಗೆ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..