ದೊಡ್ಡಬಳ್ಳಾಪುರ: ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನಾಚರಣೆಯನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಅಚರಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಶಿಕ್ಷಕರಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
ಇದೇ ಹಿನ್ನೆಲೆ ದೊಡ್ಡಬಳ್ಳಾಪುರದ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಎಂ.ಬಿ.ನವೀನ್ ಕುಮಾರ್ ತಮ್ಮ ಜೀವನದ ಅಮೂಲ್ಯ ಎರಡು ವರ್ಷಗಳ ಶಿಕ್ಷಕ ವೃತ್ತಿಯನ್ನು ಸ್ಮರಿಸಿದ್ದು, ಆ ನೆನಪಿನ ಬುತ್ತಿಯಲ್ಲಿನ ಅಲ್ಪ ಮಾಹಿತಿಯನ್ನು ಹರಿತಲೇಖನಿ ಓದುಗರೊಂದಿಗೆ ಹಂಚಿಕೊಂಡಿದ್ದಾರೆ.
ಪ್ರಸ್ತುತ ದೊಡ್ಡಬಳ್ಳಾಪುರ ವೃತ್ತದ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಎಂ.ಬಿ.ನವೀನ್ ಕುಮಾರ್ ಅವರು 2005 ರಿಂದ 2007 ರವರೆಗೆ ಕನ್ನಡ ಹಾಗೂ ಸಮಾಜ ವಿಜ್ಞಾನದ ಶಿಕ್ಷಕರಾಗಿ ರಾಜಾನುಕುಂಟೆ ವ್ಯಾಪ್ತಿಯ ಕಾಕೋಳು ಸರ್ಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಬಿಎ ವ್ಯಾಸಂಗದಲ್ಲಿ ಪ್ರಥಮ ರ್ಯಾಂಕ್ ಗಳಿಸಿ 10 ಚಿನ್ನದ ಪದಕವನ್ನು ಉಪರಾಷ್ಟಪತಿ ಬೈರೂತ್ ಸಿಂಗ್ ಶೇಕಾವತ್ ಅವರಿಂದ ಪಡೆದ ನವೀನ್ ಕುಮಾರ್, ಬಿಎಡ್ ನಲ್ಲಿ ತೃತಿಯ ರ್ಯಾಂಕ್ ಹಾಗೂ ಎರಡು ಚಿನ್ನದ ಪದಕವನ್ನು ಪಡೆದು 2004 ರಲ್ಲಿ ಶಿಕ್ಷಕ ದೊರೆತು ಸೇವೆ ಆರಂಬಿಸಿದರು.
ಎರಡು ವರ್ಷಗಳ ಸೇವಾ ಅವಧಿಯಲ್ಲಿ ಮೂರು SSLC ಪರೀಕ್ಷೆ ಎದುರಾಗಿದ್ದು, ಇವರು ಮಾಡಿದ ಕನ್ನಡ ಹಾಗೂ ಸಮಾಜ ವಿಜ್ಞಾನದಲ್ಲಿ ಶೇ.100ರಷ್ಟು ಫಲಿತಾಂಶ ಪಡೆದಿದ್ದರೆ. ಒಟ್ಟಾರೆ ಫಲಿತಾಂಶ ಶೇ.99, ಶೇ.99.3 ಹಾಗೂ ಶೇ.98.7 ದೊರೆತಿತ್ತು ಎಂದು ನವೀನ್ ಕುಮಾರ್ ಹೆಮ್ಮೆಯಿಂದ ಹೇಳುತ್ತಾರೆ.
ರಾಷ್ಟ್ರೀಯ ಹಬ್ಬಗಳ ಆಚರಣೆ, ವಿದ್ಯಾರ್ಥಿಗಳೊಂದಿಗೆ ಸವಿಯುತ್ತಿದ್ದ ಊಟದ ರುಚಿ, ಪ್ರಬಂಧ ಸ್ಪರ್ದೆ, ಆಶು ಭಾಷಣ ಸ್ಪರ್ಧೆ, ಚರ್ಚಾ ಸ್ಪರ್ಧೆ ಮತ್ತಿತರ ಸ್ಪರ್ಧೆಗಳಿಗೆ ವಿದ್ಯಾರ್ಥಿಗಳನ್ನು ಜಿಲ್ಲೆ ಮತ್ತು ರಾಜ್ಯ ಮಟ್ಟಕ್ಕೆ ಅಣಿಗೊಳಿಸುತ್ತಿದ್ದದು, ಶಾಲೆಗೆ ನೀರಿನ ಸಂಪರ್ಕಕ್ಕೆ ಪೈಪ್ ಅಳವಡಿಸಲು ಮಕ್ಕಳೊಂದಿಗೆ ಭೂಮಿ ಅಗೆದು ಪೈಪ್ ಸಂಪರ್ಕ ಕಲ್ಪಿಸಿ ನೀರು ಬಂದಾಗ ಎಲ್ಲರೂ ಸಂಭ್ರಮಿಸಿದ್ದನ್ನು ಇಂದಿಗೂ ಸ್ಮರಿಸುತ್ತಿದ್ದಾರೆ.
32 ಬೆಟಾಲಿಯನ್ ಸ್ಕೌಟ್ ಮಾಸ್ಟರ್: ಶಿಕ್ಷಕ ವೃತ್ತಿಯಲ್ಲಿ ಸ್ಕೌಟ್, ಸೇವಾದಳ, ಸದ್ಭಾವನ ಕ್ಲಬ್ ಗಳಲ್ಲಿ ಕಾರ್ಯನಿರ್ವಹಿಸಿರುವ ಇವರು, ದೊಡ್ಡಬಳ್ಳಾಪುರದ ಬೆಸೆಂಟ್ ಪಾರ್ಕ್ ನಲ್ಲಿ ಹತ್ತು ದಿನಗಳನ್ನು ಕಳೆದು 32 ಬೆಟಾಲಿಯನ್ ಸ್ಕೌಟ್ ಮಾಸ್ಟರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.
ಬ್ಲಾಂಕೆಟ್ ಹಾಲ್ ನಲ್ಲಿ ಸನ್ಮಾನ: ವಿದ್ಯಾರ್ಥಿನಿ ನಮ್ರತಾ ಕನ್ನಡ ಭಾಷೆಯಲ್ಲಿ 125 ಕ್ಕೆ 125 ಅಂಕ ಗಳಿಸಿದ ಸಂದರ್ಭ ಬೆಂಗಳೂರಿನ ಬ್ಲಾಂಕೆಟ್ ಹಾಲ್ ನಲ್ಲಿ ನನಗೂ ಸನ್ಮಾನ ದೊರೆತಿತ್ತು. ಸುಮಾರು 750 ವಿದ್ಯಾರ್ಥಿಗಳ ನಿರಂತರ ಸಂಪರ್ಕ ಇಂದಿಗೂ ಇದ್ದು, ಶಿಕ್ಷಕರ ದಿನಾಚರಣೆಯ ಕಾರಣ ವಿದ್ಯಾರ್ಥಿಗಳು ಶುಭಕೋರಿದ್ದು ಹಳೆಯ ದಿನಗಳನ್ನು ನೆನಪಿಸಿವೆ ಎಂದರು.
ಕಾಕೋಳ್ ಮೇಷ್ಟ್ರೆಂಬ ಬಿರುದು: ಎರಡು ವರ್ಷದ ಶಿಕ್ಷಕ ವೃತ್ತಿಯಲ್ಲಿ ವಿದ್ಯಾರ್ಥಿಗಳ ನಿರಂತರ ಸಂಪರ್ಕ, ಶಾಲೆಗೆ ಬಾರದ ವಿದ್ಯಾರ್ಥಿಗಳ ಹುಡುಕಿಕೊಂಡು ಸೈಕಲ್ ನಲ್ಲಿ ಮನೆ ಮನೆ ತೆರಳುತ್ತಿದ್ದ ಕಾಕೋಳ್ ಮೇಷ್ಟ್ರು ಎಂದೆ ಗ್ರಾಮಸ್ಥರು ಹೆಸರು ನೀಡಿಬಿಟ್ಟಿದ್ದರು ಎಂದು ನಗುವ ಅವರು, ಇಂದಿಗೂ ಆ ವ್ಯಾಪ್ತಿಗೆ ಕರ್ತವ್ಯಕ್ಕೆ ತೆರಳಿದಾಗ ಕಾಕೋಳ್ ಮೇಸ್ಟ್ರು ಬಂದ್ರೂ ಎಂದೆ ಮಾತನಾಡುತ್ತಾರೆ ಎಂದು ಎರಡು ವರ್ಷದ ಶಿಕ್ಷಕ ವೃತ್ತಿಯನ್ನು ಸರ್ಕಲ್ ಇನ್ಸ್ಪೆಕ್ಟರ್ ಎಂ.ಬಿ.ನವೀನ್ ಕುಮಾರ್ ಸ್ಮರಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..