ದೊಡ್ಡಬಳ್ಳಾಪುರ: ಮೋಪರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ಬಾಶೆಟ್ಟಿಹಳ್ಳಿ ಪಶು ಚಿಕಿತ್ಸಾಲಯದ ಸಹಯೋಗದಲ್ಲಿ ಇಂದು ಕಂದು ರೋಗ ನಿಯಂತ್ರಣ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಬಾಶೆಟ್ಟಿಹಳ್ಳಿಯ ಪಶುಚಿಕಿತ್ಸಾಲಯ ವಿಭಾಗದ ಡಾ. ರಾಜೇಶ್ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಆಕಳು ಮತ್ತು ಎಮ್ಮೆಗಳ ಹೆಣ್ಣು ಕರುಗಳಿಗೆ ಕಂದು ರೋಗದ ಲಸಿಕೆ ಹಾಕಿಸಿ ಜಾನುವಾರುಗಳನ್ನು ರಕ್ಷಿಸಿ, ರೈತರಿಗೆ ಆರ್ಥಿಕ ನಷ್ಟ ಉಂಟು ಮಾಡುವ ಹಾಗೂ ಪ್ರಮುಖ ಪ್ರಾಣಿಜನ್ಯ ಮಾನವ ರೋಗವಾದ ಕಂದು ರೋಗದಿಂದ ರಾಜ್ಯವನ್ನು ಮುಕ್ತ ಮಾಡುವಲ್ಲಿ ಸಹಕರಿಸಿ ಎಂದು ಮನವಿ ಮಾಡಿದರು.
ಕಂದು ರೋಗವು ಎಮ್ಮೆ, ಕುರಿ, ಮೇಕೆ,ಹಂದಿ, ನಾಯಿ, ಒಂಟೆ ಮತ್ತು ಕುದುರೆ ಮುಂತಾದ ಪ್ರಾಣಿಗಳಲ್ಲಿ ಕಂಡುಬರುವ ಮಾರಕ ರೋಗವಾಗಿದೆ. ರೋಗದಿಂದ ಜಾನುವಾರುಗಳಲ್ಲಿ ಗರ್ಭಪಾತ, ಅನಾರೋಗ್ಯ, ಉತ್ಪಾದನೆಯಲ್ಲಿ ಕುಸಿತ ಹಾಗೂ ಬಂಜೆತನ ಉಂಟಾಗಿ ಪಶುಪಾಲಕರಿಗೆ ನಷ್ಟ ಉಂಟು ಮಾಡುತ್ತದೆ ಎಂದರು.
ಮೋಪರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಡಾ.ಎಂ.ಚಿಕ್ಕಣ್ಣ ಮಾತನಾಡಿ, ರಾಸುಗಳ ಗರ್ಭಪಾತವಾದ ಭ್ರೂಣ, ಮಾಂಸ, ಸ್ರಾವಗಳನ್ನು ದೂರ ಕೊಂಡೊಯ್ದು ಆಳವಾಗಿ ಹೂಳಬೇಕು ಅಥವಾ ಸುಡಬೇಕು ಸತ್ತ ರಾಸುಗಳನ್ನು ಆಳವಾಗಿ ಹೂಳಬೇಕು ಕೊಟ್ಟಿಗೆ ಹಾಗೂ ಗರ್ಭಪಾತವಾದ ಸ್ಥಳವನ್ನು ಸೊಂಕು ನಾಶಕ ದ್ರಾವಣದಿಂದ ಶುಚಿಗೊಳಿಸಬೇಕು. ರೋಗ ಮುಕ್ತವಾಗಿರುವ ಹಿಂಡಿನಿಂದಲೇ ಹಸುಗಳನ್ನು ಖರೀದಿಸಬೇಕು, ಹೊಸದಾಗಿ ಖರೀದಿಸಿದ ರಾಸುಗಳನ್ನು ಕನಿಷ್ಠ 30 ದಿನಗಳವರೆಗೆ ಉಳಿದ ರಾಸುಗಳಿಂದ ದೂರವಿರಬೇಕು.
ಕಂದು ರೋಗ ಇರಬಹುದೆಂದು ಸಂಶಯಿಸಿದ ಸಂದರ್ಭಗಳಲ್ಲಿ ಪ್ರಯೋಗಾಲಯಕ್ಕೆ ಮಾದರಿ ಕಳುಹಿಸಿ ರೋಗದ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಅಥವಾ ರೋಗ ಪತ್ತೆಗೆ ಕಾಲಕಾಲಕ್ಕೆ ಹಾಲಿನ ಪರೀಕ್ಷೆ ಮಾಡಿಸಬೇಕಿದೆ.ರೋಗಗ್ರಸ್ಥ ಜಾನುವಾರುಗಳ ಪಾಶ್ಚೀಕರಿಸಿದ ಹಾಲು ಮತ್ತು ಹಾಲಿನ ಉತ್ಪನ್ನಗಳ ಸೇವನೆಯಿಂದ ಮಾನವರಿಗೂ ಈ ರೋಗ ಹರಡುವ ಸಾಧ್ಯತೆ ಇರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕೃತಕ ಗರ್ಭಧಾರಣಾ ಸಿಬ್ಬಂದಿ ನಾಗೇಶ್, ಸಹಾಯಕ ಆನಂದ್, ಹಾಲು ಪರೀಕ್ಷಕ ಎಂ.ಶರಣ್ ರಾಜ್ ನಿರ್ದೇಶಕ ಎಂ.ಮಾರಪ್ಪ, ಹನುಮಂತಗೌಡ ಮತ್ತಿತರರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..