ಬೆಂಗಳೂರು: ಸೆಪ್ಟೆಂಬರ್ 18. ಇದು ಡಾ. ವಿಷ್ಣುವರ್ಧನ ಅವರ ಅಭಿಮಾನಿಗಳ ಪಾಲಿಗೆ ಹರ್ಷದ ದಿನ. ಯಾಕೆಂದರೆ, ಇಂದು (ಸೆ.18) ವಿಷ್ಣುವರ್ಧನ್ ಅವರ ಜನ್ಮದಿನ. ಹೀಗಾಗಿ ಅವರ ಸಂಭ್ರಮಕ್ಕೆ ಪಾರವೇ ಇಲ್ಲ.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಡಾ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬವನ್ನು ಅವರ ಕುಟುಂಬ ವರ್ಗ, ಅಭಿಮಾನಿವರ್ಗ ಪ್ರೀತಿಯಿಂದ ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ನಡೆದಿದೆ.
ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಬಳಿಯಿರುವ ಪುಣ್ಯಭೂಮಿಯಲ್ಲಿ ವಿಷ್ಣುವರ್ಧನ್ ಸಮಾಧಿಯನ್ನು ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಲಾಗಿದ್ದು, ರಾಜ್ಯದ ವಿವಿಧ ಭಾಗದಿಂದ ಆಗಮಿಸಲಿರುವ ಅಭಿಮಾನಿಗಳು ದರ್ಶನ ಪಡೆಯಲು ಅವಕಾಶ ನೀಡಲಾಗುತ್ತದೆ.
ಚಂದನವನದ ತಾರೆಯರು ಸಾಮಾಜಿಕ ಜಾಲತಾಣಗಳಲ್ಲಿ ದಾದಾನನ್ನು ಸ್ಮರಿಸಲಾರಂಭಿಸಿದ್ದಾರೆ.
ಈ ಹುಟ್ಟುಹಬ್ಬದ ಸಂಭ್ರಮದಲ್ಲಿ ದಾದಾ ಅವರ ಹಲವು ಸಾಧನೆ ಮತ್ತು ಹೆಗ್ಗಳಿಕೆಯ ಇಣುಕು ನೋಟ.
1) ಡಾ. ವಿಷ್ಣುವರ್ಧನ್ ಅಭಿನಯದ ಮೊದಲ ಮತ್ತು ಕೊನೆಯ ಸೋಲೋ ಹಾಡುಗಳನ್ನು ಹಾಡಿರುವುದು ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಎನ್ನುವುದು ವಿಶೇಷ. ಮೊದಲ ಹಾಡು ‘ನಾಗರಹಾವು’ ಚಿತ್ರದ ‘ಹಾವಿನ ದ್ವೇಷ ಹನ್ನೆರೆಡು ವರ್ಷ …’ ಆದರೆ, ಕೊನೆಯ ಹಾಡು ‘ಆಪ್ತರಕ್ಷಕ’ ಚಿತ್ರದ ‘ಚಾಮುಂಡಿ ತಾಯಿ ಆಣೆ ನಾನೆಂದು ನಿಮ್ಮೋನೇ …’ ಆಗಿತ್ತು.
2) ಭಾರತೀಯ ಚಿತ್ರರಂಗಕ್ಕೆ 100 ವರ್ಷ ಸಂದ ಸಂದರ್ಭದಲ್ಲಿ, ಅಂಚೆ ಇಲಾಖೆಯು 50 ಕಲಾವಿದರು ಮತ್ತು ತಂತ್ರಜ್ಞರ ಸ್ಮರಣಾರ್ಥ ಸ್ಟಾಂಪ್ಗಳನ್ನು ಬಿಡುಗಡೆ ಮಾಡಿತ್ತು.
ಕನ್ನಡ ಚಿತ್ರರಂಗದಿಂದ ಈ ಗೌರವ ಪಡೆದ ಏಕೈಕ ನಟರೆಂದರೆ, ಅದು ಡಾ. ವಿಷ್ಣುವರ್ಧನ್. ಇದೀಗ ವಿಷ್ಣುವರ್ಧನ್ ಅವರ 70ನೇ ವರ್ಷದ ಹುಟ್ಟುಹಬ್ಬದ ನೆನಪಲ್ಲಿ ಅಂಚೆ ಇಲಾಖೆಯು ವಿಶೇಷ ಲಕೋಟೆಯನ್ನು ಹೊರತಂದಿದ್ದು, ಇಂದು ಸಂಜೆ ಬಿಡುಗಡೆ ಮಾಡಲಾಗುತ್ತಿದೆ.
3) ಕನ್ನಡ ಚಿತ್ರರಂಗದ ಮೊದಲ ಪ್ಯಾನ್ ಇಂಡಿಯಾ ನಟ ಎಂದರೆ ಅದು ಡಾ. ವಿಷ್ಣುವರ್ಧನ್. ಅಷ್ಟೇ ಅಲ್ಲ, ಕನ್ನಡದ ಮೊದಲ ಪಂಚಭಾಷಾ ನಟ ಅವರು. ಹಿಂದಿಯಲ್ಲಿ ನಾಲ್ಕು ಚಿತ್ರಗಳಲ್ಲಿ ನಟಿಸಿದ ಏಕೈಕ ನಟ ಎಂಬ ಹೆಗ್ಗಳಿಕೆಯೂ ಡಾ. ವಿಷ್ಣುವರ್ಧನ್ ಅವರ ಹೆಸರಿನಲ್ಲಿದೆ.
4) ಡಾ. ವಿಷ್ಣುವರ್ಧನ್ ಅಭಿನಯದ ಮೊದಲ ಚಿತ್ರ ‘ವಂಶವೃಕ್ಷ’ ತೆಲುಗಿಗೆ ರಿಮೇಕ್ ಆಗಿತ್ತು. ಅವರ ಕೊನೆಯ ಚಿತ್ರ ‘ಆಪ್ತರಕ್ಷಕ’ ಸಹ ತೆಲುಗಿಗೆ ರಿಮೇಕ್ ಆಗಿತ್ತು. ಈ ಮಧ್ಯೆ, ‘ನಾಗರಹಾವು’, ‘ಭೂತಯ್ಯನ ಮಗ ಅಯ್ಯು’, ‘ಜಿಮ್ಮಿಗಲ್ಲು’, ‘ಬಂಧನ’, ‘ದೇವ’ ಸೇರಿ ಹಲವು ಚಿತ್ರಗಳು ಬೇರೆಬೇರೆ ಭಾಷೆಗಳಿಗೆ ರಿಮೇಕ್ ಆಗಿವೆ.
5) ವಿಷ್ಣುವರ್ಧನ್ 200 ಚಿತ್ರಗಳಲ್ಲಿ ನಟಿಸುವುದರ ಜತೆಗೆ, ಶಂಕರ್ ನಾಗ್ ನಿರ್ದೇಶನದ ‘ಮಾಲ್ಗುಡಿ ಡೇಸ್’ ಧಾರಾವಾಹಿಯಲ್ಲೂ ನಟಿಸಿದ್ದರು. ಈ ಧಾರಾವಾಹಿಯ ‘ಫಾರ್ಟಿಫೈವ್ ಎ ಮಂಥ್’ ಎಂಬ ಕಥೆಯಲ್ಲಿ ಅವರು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
6) ಅನಂತ್ ನಾಗ್ ಅಭಿನಯದ ‘ಗಣೇಶ ಐ ಲವ್ ಯೂ’ ಚಿತ್ರಕ್ಕೆ ಕಥೆ ಬರೆದವರು ವಿಷ್ಣುವರ್ಧನ್ ಎಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. ವಿಷ್ಣುವರ್ಧನ್ ಅವರು ಹೇಳಿದ ಕಥೆಗೆ, ಚಿತ್ರಕಥೆ ರಚಿಸಿ ನಿರ್ದೇಶನ ಮಾಡಿದ್ದರು ಫಣಿ ರಾಮಚಂದ್ರ.
7) ವಿಷ್ಣುವರ್ಧನ್ ಕೊನೆಯದಾಗಿ ನಟಿಸಿದ್ದು ‘ಆಪ್ತರಕ್ಷಕ’ ಚಿತ್ರದಲ್ಲಿ. ಆ ನಂತರ ಬಿಡುಗಡೆಯಾದ ‘ನಾಗರಹಾವು’ ಚಿತ್ರದಲ್ಲಿ ವಿಷ್ಣು ಅವರ ಪಾತ್ರವನ್ನು ಗ್ರಾಫಿಕ್ಸ್ ಮೂಲಕ ಸೃಷ್ಟಿಸಲಾಗಿತ್ತು. ಬಹುಶಃ ಭಾರತೀಯ ಚಿತ್ರರಂಗದಲ್ಲಿ ಗ್ರಾಫಿಕ್ಸ್ ಮೂಲಕ ಸೃಷ್ಟಿಸಲಾದ ಮೊದಲ ಪಾತ್ರ ವಿಷ್ಣುವರ್ಧನ್ ಅವರದ್ದು ಎಂಬುದು ವಿಶೇಷ.
8) ವಿಷ್ಣುವರ್ಧನ್ ಅವರ ನೆನಪಲ್ಲಿ ರಾಜ್ಯಾದ್ಯಂತ ಹಲವು ರಸ್ತೆಗಳಿಗೆ ಅವರ ಹೆಸರನ್ನು ಇಡಲಾಗಿದ್ದು, ಈ ಪೈಕಿ ಬನಶಂಕರಿಯಿಂದ ಕೆಂಗೇರಿಯವರೆಗಿನ 14 ಕಿಲೋಮೀಟರ್ ರಸ್ತೆಯನ್ನು ಡಾ. ವಿಷ್ಣುವರ್ಧನ್ ರಸ್ತೆ ಎಂದು ನಾಮಕರಣ ಮಾಡಲಾಗಿದೆ. ಇಡೀ ಏಷ್ಯಾದಲ್ಲೇ, ಒಬ್ಬ ನಟನ ಹೆಸರಿನಲ್ಲಿರುವ ಅತೀ ಉದ್ದದ ರಸ್ತೆ ಎಂಬ ಹೆಗ್ಗಳಿಕೆಗೆ ಈ ರಸ್ತೆಗಿದೆ.
9) ಡಾ. ರಾಜಕುಮಾರ್ ನಂತರ ರಾಜ್ಯ ಸರ್ಕಾರದಿಂದ ಅತೀ ಹೆಚ್ಚು ಬಾರಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದವರೆಂದರೆ ಅದು ವಿಷ್ಣುವರ್ಧನ್. ‘ನಾಗರಹಾವು’, ‘ಹೊಂಬಿಸಿಲು’, ‘ಬಂಧನ’, ‘ಲಯನ್ ಜಗಪತಿ ರಾವ್’, ‘ಲಾಲಿ’, ‘ವೀರಪ್ಪನಾಯ್ಕ’ ಮತ್ತು ‘ಆಪ್ತರಕ್ಷಕ’ ಚಿತ್ರಗಳ ಅಭಿನಯಕ್ಕಾಗಿ ಏಳು ಬಾರಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..