ಬೆಂಗಳೂರು: ಇಡೀ ಭಾರತದ ಗಮನ ಸೆಳೆದಿರುವ ಪಶ್ಚಿಮ ಬಂಗಾಳದ ಭವಾನಿಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭಾರೀ ಅಂತರದ ಗೆಲವು ಸಾಧಿಸುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಭವಾನಿಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಮೀಪಿಸಿದ್ದು, ಇದೇ ಸೆ.30ರಂದು ಚುನುವಾಣೆ ನಿಗದಿಯಾಗಿದೆ. ಮತದಾನ ಅ.3ರರವರೆಗೆ ನಡೆಯಲಿದೆ. ಮಮತಾ ಬ್ಯಾನರ್ಜಿ ಸ್ಪರ್ಧೆ ನಡೆಸಿದ್ದು, ತಾವು ಮುಖ್ಯಮಂತ್ರಿಯಾಗಿ ಉಳಿಯಲು ಈ ಚುನಾವಣೆಯನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಕುಮಾರಸ್ವಾಮಿ.
ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಸ್ವತಃ ಆ ಪಕ್ಷದ ನಾಯಕ ರಾಜೀವ್ ಬ್ಯಾನರ್ಜಿ ಹೇಳಿರುವುದರಲ್ಲಿ ಅಚ್ಚರಿಯೇನು ಇಲ್ಲ. ಇದು ಅಪ್ಪಟ ಸತ್ಯ. ಮಮತಾ ಬ್ಯಾನರ್ಜಿ ಅವರು ಕೇವಲ ನಾಯಕಿಯಲ್ಲ, ಸಮಸ್ತ ಬಂಗಾಳಿಗರ ನಾಡಿಮಿಡಿತ. ಈ ಸತ್ಯವನ್ನು ಅರಿಯುವಲ್ಲಿ ಬಿಜೆಪಿ ಸೋತಿದೆ.
ಇತಿಹಾಸ ಸೃಷ್ಟಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮಮತಾ ಅವರು ಕಳೆದ ಏಪ್ರಿಲ್ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ 294 ವಿಧಾಸಭೆ ಕ್ಷೇತ್ರಗಳ ಪೈಕಿ 214 ಸ್ಥಾನಗಳನ್ನು ಜಯಿಸಿದ್ದರು. ಆಗಲೇ ಅವರು ಚರಿತ್ರೆ ಬರೆದಿದ್ದರು. ಈಗ ಹೊಸ ಚರಿತ್ರೆ ಸೃಷ್ಟಿಗೆ ಅಣಿಯಾಗಿದ್ದಾರೆ.
ಜನರ ಬಾವನೆಗಳನ್ನು, ಪ್ರಜಾಪ್ರಭುತ್ವ ಮೌಲ್ಯಗಳನ್ನು ರಾಜಕೀಯ ಪಕ್ಷಗಳು ಅರ್ಥ ಮಾಡಿಕೊಂಡು ಗೌರವಿಸಬೇಕು. 2021ರ ಚುನಾವಣೆಯಲ್ಲಿ ಬಂಗಾಳದ ಮಹಾಜನತೆ ಮಮತಾ ಅವರಿಗೆ ಸ್ಪಷ್ಟ ಜನಾದೇಶ ನೀಡಿದ್ದಾಗಿದೆ. ಈ ಉಪ ಚುನಾವಣೆಯಲ್ಲಿ ಯಾವ ಪಕ್ಷವೂ ಅವರ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಅವಿರೋಧ ಆಯ್ಕೆಗೆ ಸಹಕರಿಸಬೇಕಿತ್ತು ಎಂದಿದ್ದಾರೆ. (ಸಂಗ್ರಹ ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..