ದೊಡ್ಡಬಳ್ಳಾಪುರ: ಮೂರು ಕೃಷಿ ಕಾಯ್ದೆಗಳು, ವಿದ್ಯುತ್ ಮಸೂದೆ ರದ್ದತಿಗಾಗಿ, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು’ ಜಾರಿಗಾಗಿ, ಅಡುಗೆ ಅನಿಲ, ಡಿಸೇಲ್, ಪೆಟ್ರೋಲ್ ಇತ್ಯಾದಿ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಸಿ, ಸೆ.27 ರಂದು ನಡೆಯಲಿರುವ ಭಾರತ್ ಬಂದ್ ಅನ್ನು ಎಲ್ಲ ಸಾರ್ವಜನಿಕರು ಬೆಂಬಲಿಸುವಂತೆ ಮನವಿ ಮಾಡುವ ಸಲುವಾಗಿ ವಿವಿಧ ರೈತ,ದಲಿತ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು ನಗರದ ವಿವಿದೆಡೆಗಳಲ್ಲಿ ಪ್ರಚಾರ ನಡೆಸಿದರು.
ನಗರದ ಎಪಿಎಂಸಿ ಮಾರುಕಟ್ಟೆ, ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಸಾರ್ವಜನಿಕರಿಗೆ ಕರಪತ್ರಗಳನ್ನು ಹಂಚಿ, ಆಟೋ ಮೂಲಕ ಪ್ರಚಾರ ಮಾಡುತ್ತಾ, ಬಂದ್ ಬೆಂಬಲಿಸುವಂತೆ ರೈತ ಮುಖಂಡರು ಮನವಿ ಮಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಪೋರೇಟ್ ಕಂಪನಿಗಳ ಪರವಾಗಿ ಕಾರ್ಮಿಕ ಕಾಯ್ದೆಗೆ ತಿದ್ದುಪಡಿಗಳನ್ನು ತಂದು ನಾಲ್ಕು ಕಾರ್ಮಿಕ ಸಂಹಿತೆಗಳಾಗಿ ಮಾರ್ಪಡಿಸಿರುವ ಕ್ರಮವನ್ನು ಕೈ ಬಿಡಬೇಕು. ಕಾರ್ಪೊರೇಟ್ ಕಂಪನಿಗಳಿಗೆ ಲಾಭ ಮಾಡಲು ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್ ಇತ್ಯಾದಿ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಮೂಲಕ ಕೇಂದ್ರ ಸರ್ಕಾರ ನಡೆಸಿರುವ ಹಗಲು ದರೋಡೆ ನಿಲ್ಲಬೇಕೆಂದು ಒತ್ತಾಯಿಸಲಾಗುತ್ತಿದೆ.
ಕೃಷಿ ಭೂಮಿ, ಕೃಷಿ ಉತ್ಪಾದನೆ, ಕೃಷಿ ಮಾರುಕಟ್ಟೆ ಇತ್ಯಾದಿ ಕ್ಷೇತ್ರಗಳನ್ನು ಕಾರ್ಪೊರೇಟ್ ಕಂಪನಿಗಳಿಗೆ ವಹಿಸುವುದರಲ್ಲಿ ಕೇಂದ್ರ ಸರ್ಕಾರವನ್ನು ಹಿಂದಿಕ್ಕಿ ರಾಜ್ಯ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗುತ್ತಿದೆ. ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಹಲವು ಎಪಿಎಂಸಿಗಳು ಮುಚ್ಚುವ ಸ್ಥಿತಿಗೆ ತಲುಪಿವೆ. ಇದಲ್ಲದೆ ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿಯಿಂದ ಹೈನುಗಾರಿಕೆಯಲ್ಲಿ ತೊಡಗಿರುವ ರೈತರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ದಲಿತರು, ಬಡವರ ಆಹಾರದ ಹಕ್ಕಿನ ಮೇಲೆ ದಾಳಿ ನಡೆಸಲಾಗುತ್ತಿದೆ ಮಾತ್ರವಲ್ಲ ಈ ಕಾಯ್ದೆಯನ್ನು ಉಪಯೋಗಿಸಿ ಕೋಮು ರಾಜಕಾರಣವನ್ನು ಮಾಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಸೆಪ್ಟಂಬರ್ 27 ರಂದು ನಡೆಯಲಿರುವ ‘ಭಾರತ ಬಂದ್’ ನ್ನು ಅಭೂತ ಪೂರ್ವವಾಗಿ ‘ಕರ್ನಾಟಕ ಬಂದ್’ ಮಾಡುವುದರ ಮೂಲಕ ರೈತ ವಿರೋ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಗಂಭೀರವಾದ ಎಚ್ಚರಿಕೆಯ ಸಂದೇಶವನ್ನು ನೀಡಬೇಕೆಂದು ರಾಜ್ಯದ ಸಮಸ್ತ ರೈತರು, ದಲಿತರು, ಕಾರ್ಮಿಕರು, ವಿದ್ಯಾರ್ಥಿ, ಯವಜನ, ಮಹಿಳೆಯರು, ಕನ್ನಡ ಪರ ಸಂಘಟನೆಗಳು, ವರ್ತಕರು, ನಾಗರಿಕ ಬಂಧುಗಳಲ್ಲಿ ಸಂಯುಕ್ತ ಹೋರಾಟ-ಕರ್ನಾಟಕದಿಂದ ಕರಪತ್ರಗಳನ್ನು ಹಂಚಿ ಪ್ರಚಾರ ಮಾಡುವ ಮೂಲಕ ವಿನಂತಿ ಮಾಡಲಾಗುತ್ತಿದೆ ಎಂದು ರೈತ ಮುಖಂಡರು ತಿಳಿಸಿದರು.
ಸಂಯುಕ್ತ ಹೋರಾಟ – ಕರ್ನಾಟಕದಡಿಯಲ್ಲಿ ನಡೆಯಲಿರುವ ಹೋರಾಟಕ್ಕೆ ಕರ್ನಾಟಕ ರಾಜ್ಯ ರೈತ ಸಂಘ-ಕರ್ನಾಟಕ ಪ್ರಾಂತ ರೈತ ಸಂಘ ಕಾಂಗ್ರೆಸ್ , ಜೆ.ಡಿ.ಎಸ್ ಮತ್ತು ಸಿ.ಪಿ.ಐ(ಎಂ) ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……