ದೊಡ್ಡಬಳ್ಳಾಪುರ: ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್‍ಗೆ ಬೆಂಬಲಿಸಿ, ‘ಸಂಯುಕ್ತ ಹೋರಾಟ-ಕರ್ನಾಟಕ’ ನೇತೃತ್ವದಲ್ಲಿ (ರೈತ, ದಲಿತ, ಕಾರ್ಮಿಕ, ಕನ್ನಡಪರ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿ) ಕರೆ ನೀಡಿದ್ದ ದೊಡ್ಡಬಳ್ಳಾಪುರ ಬಂದ್ ಶಾಂತಿಯುತವಾಗಿ ನಡೆಯಿತು.
ನಗರದಲ್ಲಿ ಬೆಳಗಿನಿಂದಲೇ ಬಂದ್ ಬೆಂಬಲಿಸಿ ಸಂಘಟನೆಗಳು ರಸ್ತೆಗಿಳಿದವಾದರೂ ಅಂಗಡಿ ಮುಂಗಟ್ಟುಗಳು ಎಂದಿನಿಂತಂತ ವ್ಯಾಪಾರಗಳು ನಡೆದವು. ಎಪಿಎಂಸಿ ಕೆಲ ಕಾಲ ಬಂದ್ ಆಗಿತ್ತು. ಸಾರಿಗೆ ಸಂಸ್ಥೆ ಹಾಗೂ ಬಿಎಂಟಿಸಿ ಬಸ್ ಸಂಚಾರ ಎಂದಿನಂತೆ ಆರಂಭವಾಯಿತು. ಈ ವೇಳೆ ಬಸ್ ಸಂಚಾರ ಕೈಗೊಳ್ಳದಂತೆ ಬಂದ್‍ಗೆ ಬೆಂಬಲಿಸುವಂತೆ, ಸಾರಿಗೆ ಇಲಾಖೆಯ ಸಿಬ್ಬಂದಿಗೆ ಪ್ರತಿಭಟನಾಕಾರರು ಮನವಿ ಮಾಡಿದರು. ಆದರೆ ಬಸ್ ಸಂಚಾರ ಎಂದಿನಂತೆ ಸಂಚರಿಸಿತು. ನಂತರ ಬ್ಯಾಕ್ ರ್ಯಾಲಿಯಲ್ಲಿ ತೆರಳಿದ ವಿವಿಧ ಸಂಘಟನೆಗಳ ಮುಖಂಡರು ನಗರದಲ್ಲಿ ತೆರೆದಿದ್ದ ಹೋಟೆಲ್ ಹಾಗೂ ಕೆಲವು ಅಂಗಡಿಗಳನ್ನು ಮುಚ್ಚುವಂತೆ ಮನವಿ ಮಾಡಿದರು.
ತಾಲೂಕಿನ ಎಲ್ಲಾ ಬ್ಯಾಂಕ್‍ಗಳು ಹಾಗೂ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಕೈಗಾರಿಕಾ ಪ್ರದೇಶದಲ್ಲಿ ಕಾರ್ಖಾನೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ನೇಕಾರಿಕೆ ಉದ್ಯಮ ಸಹ ಎಂದಿನಂತೆ ಸಾಗಿತು.
ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಪ್ರತಿಭಟನಾ ಮೆರವಣಿಗೆ: ನಗರದ ನೆಲದಾಂಜನೇಯಸ್ವಾಮಿ ದೇವಾಲಯದ ಡಾ.ರಾಜ್‍ಕುಮಾರ್ ವೃತ್ತದ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ತೆರಳಿ, ಮನವಿ ಸಲ್ಲಿಸಲಾಯಿತು. ಪ್ರತಿಭಟನಾ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ದ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಟಿ.ವೆಂಕಟರಮಣಯ್ಯ, ಎಪಿಎಂಸಿ ಕಾಯ್ದೆ ತಿದ್ದುಪಡಿ ಜಾರಿಗೆ ಕಾಂಗ್ರೆಸ್ ಪಕ್ಷದ ವಿರೋಧವಿದೆ. ಕೃಷಿ ಕಾಯ್ದೆಗಳು ರೈತರಿಗೆ ಮಾರಕವಾಗಿವೆ. ಇನ್ನು ಪೆಟ್ರೋಲ್ – ಡೀಸೆಲ್, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನ ಸಾಮಾನ್ಯರ ಬದುಕನ್ನು ದುಸ್ತರವಾಗಿಸಿವೆ ಎಂದರು.
ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಹಲವು ಎಪಿಎಂಸಿಗಳು ಮುಚ್ಚುವ ಸ್ಥಿತಿಗೆ ತಲುಪಿವೆ. ಹರಿಯಾಣ ಮತ್ತು ಪಂಜಾಬ್‍ಗಳಲ್ಲಿ ಶೇ.90ರಷ್ಟು ಕೃಷಿ ಉತ್ಪನ್ನಗಳನ್ನು ಸರ್ಕಾರ ಬೆಂಬಲ ಬೆಲೆ ನೀಡಿ ಖರೀದಿಸಲಿದೆ. ಕೃಷಿ ಕಾಯ್ದೆಗಳ ತಿದ್ದುಪಡಿಯಿಂದ ಇದಕ್ಕೆ ಮಾರಕವಾಗಲಿದೆ ಖಾಸಗೀಕರಣದಿಂದ ಸಾಮಾಜಿಕ ಅಸಮಾನತೆ ಹೆಚ್ಚಾಗಲಿದ್ದು, ಸಂವಿಧಾನದ ಆಶಯಕ್ಕೆ ದಕ್ಕೆಯಾಗಲಿದೆ. ವಿದ್ಯುತ್ ಖಾಸಗೀಕರಣದಿಂದ ಜನರ ಬದುಕು ದುಸ್ತರವಾಗಲಿದೆ. ಪ್ರಿಪೈಡ್ ವಿದ್ಯುತ್ ಮೀಟರ್ ಅಳವಡಿಕೆ ನಾವು ವಿರೋಧಿಸಲೇಬೇಕು. ಜಿಎಸ್‍ಟಿಯಿಂದ ರಾಜ್ಯಗಳು ಸ್ವಾಯತ್ತತಗೆ ದಕ್ಕೆ ಆಗಲಿದೆ. ಮೋದಿ ಆಪ್ತ ಅದಾನಿ ಇಂದು ದೇಶದ ದೊಡ್ಡ ಶ್ರೀಮಂತರಾಗಿದ್ದಾರೆ. ಈ ಹಿಂದೆ ಯುಪಿಎ ಸರ್ಕಾರವಿದ್ದಾಗ ಜಿಎಸ್‍ಟಿ,ಆಧಾರ್ ಕಾರ್ಡ್ ಸೇರಿದಂತೆ ಪ್ರತಿಯೊಂದನ್ನೂ ವಿರೋಧಿಸುತ್ತಿದ್ದ ಮೋದಿ ಅವರು ಇಂದು ಅದಕ್ಕೂ ಮೀರಿದ ರೈತ ವಿರೋಧಿ ಕಾನೂನನ್ನು ಜಾರಿಗೆ ತರುತ್ತಿದ್ದಾರೆ.
ಕಾರ್ಪೋರೇಟ್ ಕಂಪನಿಗಳ ಪರವಾಗಿ ಕಾರ್ಮಿಕ ಕಾಯ್ದೆಗೆ ತಿದ್ದುಪಡಿಗಳನ್ನು ತಂದು ನಾಲ್ಕು ಕಾರ್ಮಿಕ ಸಂಹಿತೆಗಳಾಗಿ ಮಾರ್ಪಡಿಸಿರುವ ಕ್ರಮವನ್ನು ಕೈ ಬಿಡಬೇಕು.
ಕಾರ್ಪೊರೇಟ್ ಕಂಪನಿಗಳ ಕೈಗೆ ಕೃಷಿ ಸಿಕ್ಕರೆ ಏನಾಗುತ್ತದೆ ಎನ್ನುವ ನಿದರ್ಶನ ನಮ್ಮ ಕಣ್ಣ ಮುಂದಿದ್ದು, ಕಳಪೆ ಬೀಜದಿಂದ ಹೂ ಕೋಸು ಬೆಳೆ ನಾಶವಾಗಿದೆ. ಕೃಷಿ ಭೂಮಿ, ಕೃಷಿ ಉತ್ಪಾದನೆ, ಕೃಷಿ ಮಾರುಕಟ್ಟೆ ಇತ್ಯಾದಿ ಕ್ಷೇತ್ರಗಳನ್ನು ಕಾರ್ಪೊರೇಟ್ ಕಂಪನಿಗಳಿಗೆ ವಹಿಸುವುದರಲ್ಲಿ ಸರ್ಕಾರಗಳು ಮುಂದಾಗಿದ್ದು, ರೈತರ ವಿರೋಧಿ ಕೃಷಿ ನೀತಿಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ವಿವಿಧ ಪಕ್ಷಗಳ, ಸಂಘಟನೆಗಳ ಮುಖಂಡರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……