ದೊಡ್ಡಬಳ್ಳಾಪುರ: ಸೆ.30ರಿಂದ ಗ್ರಾಮಪಂಚಾಯಿತಿ ಮಟ್ಟದಲ್ಲಿ ಆಯೋಜಿಸಲಾಗಿರುವ ಗ್ರಾಮಸಭೆಗಳಲ್ಲಿ ಭಾಗವಹಿಸಿ, ಇಲಾಖೆವಾರು ಸರ್ಕಾರದ ಯೋಜನೆಗಳನ್ನು ಕರ ಪತ್ರದ ಮೂಲಕ ಸಾರ್ವಜನಿಕರಿಗೆ ತಿಳಿಸಲು ಅಧಿಕಾರಿಗಳು ಸಿದ್ದರಾಗಬೇಕೆಂದು ಶಾಸಕ ಟಿ.ವೆಂಕಟರಮಣಯ್ಯ ಸೂಚಿಸಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
ಕೋವಿಡ್-19 ಸೋಂಕಿನ ಕಾರಣ ಗ್ರಾಮಸಭೆ ಆಯೋಜನೆ ವಿಳಂಬವಾಗಿದೆ. ಸೆ.30 ರಿಂದ ಗ್ರಾಮಸಭೆಗಳನ್ನು ಆರಂಭಿಸಲಾಗುತ್ತಿದ್ದು, ಸರ್ಕಾರದ ಸೌಲಭ್ಯಗಳನ್ನು ತಿಳಿಸುವುದು ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ತಿಳಿಯಲು ಅನುಕೂಲವಾಗಲಿದೆ ಎಂದರು.
ಈ ವೇಳೆ ಅಧಿಕಾರಿಗಳು ಇಲಾಖೆವಾರು ಯೋಜನೆಗಳ ಅನುಷ್ಠಾನಗಳ ಕುರಿತು ಮಾಹಿತಿ ನೀಡಿದರು.
ನಂತರ ಮಾತಾನಾಡಿದ ಶಾಸಕ ಟಿ.ವೆಂಕಟರಮಣಯ್ಯ, ಪಡಿತರ ವಿತರಣೆಗೆ ಸಾಲುಗಟ್ಟಿ ನಿಲ್ಲಬೇಕಾದ ಅನಿರ್ವಾರ್ಯತೆ ತಪ್ಪಿಸಲು ಹಚ್ಚುವರಿ ಡಿಪೋ ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಆಹಾರ ಇಲಾಖೆ ಶಿರಸ್ತೆಧಾರ್ ರಮೇಶ್ ಅವರಿಗೆ ತಿಳಿಸಿದ ಅವರು, ಸರ್ಕಾರ ಅನರ್ಹರೆಂಬ ಕಾರಣ ನೀಡಿ ತಾಲೂಕಿನಲ್ಲಿ 786 ಮಂದಿಯ ಪಡಿತರ ಚೀಟಿ ರದ್ದು ಪಡಿಸಿರುವುದು ಕೋವಿಡ್ ಸಂದರ್ಭದಲ್ಲಿ ಬಡ ಜನರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಮುಂದಿನ ಪ್ರಕ್ರಿಯೆ ಬಂದಲ್ಲಿ ಕ್ರಮಕ್ಕೆ ಮುಂದಾಗದೆ ಮಾಹಿತಿ ನೀಡಿ ಹಿರಿಯ ಆಧಿಕಾರಿಗಳೊಂದಿಗೆ ಮಾತನಾಡಲಾಗುವುದೆಂದರು.
ಸರ್ಕಾರಿ ಶಾಲೆಗಳಿಗೆ ದಾಖಲಾತಿ ಹೆಚ್ಚಾಗುತ್ತಿದ್ದು, ಶುಲ್ಕ ಬಾಕಿ ಕಟ್ಟದ ಕಾರಣ ಟಿಸಿ ನೀಡುತ್ತಿಲ್ಲವೆಂದು ಪೋಷಕರು ದೂರುತ್ತಿದ್ದಾರೆ. ಈ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕೆಂದರು.
ವಿಶೇಷ ಆಂದೋಲನ: ಸರ್ಕಾರಿ ಶಾಲೆಗಳು ಕಾರ್ಯ ನಿರ್ವಹಿಸುತ್ತಿರುವ ಜಮೀನು ವಿವಾದ ಪರಿಹರಿಸಲು ವಿಶೇಷ ಆಂದೋಲನ ನಡೆಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದ ಅವರು, ತಾಲೂಕಿನಲ್ಲಿ ಸುಮಾರು 10 ರಿಂದ 12 ಸಾವಿರ ಮಂದಿಯ ಪೆನ್ಷನ್ ತೊಂದರೆಯಾಗಿರುವ ಕುರಿತು ದೂರುಗಳು ಬಂದಿವೆ. ಅಂಚೆ ಕಚೇರಿ ಸಿಬ್ಬಂದಿಗಳು ಹಣ ಬಂದಿಲ್ಲ ಎನ್ನುತ್ತಾರೆ, ಕಂದಾಯ ಇಲಾಖೆ ಹಣ ಬಿಡುಗಡೆಯಾಗಿದೆ ಎನ್ನುತ್ತಾರೆ. ಮತ್ತೇಕೆ ಪೆನ್ಷನ್ ಹಣ ಫಲಾನುಭವಿಗಳಿಗೆ ತಲುಪುತ್ತಿಲ್ಲ ಈ ಕುರಿತು ಕೂಡಲೆ ಗಮನ ಹರಿಸಬೇಕಿದೆ ಎಂದರು.
ಕಾಲುಬಾಯಿ ಜ್ವರಕ್ಕೆ ಲಸಿಕೆ ಪೂರೈಕೆ, ರೈತರಿಗೆ ಯೂರಿಯಾ ಕೊರತೆ ನೀಗಲು ಕ್ರಮ, ಹೆಣ್ಣು ಕರು ಗರ್ಭಧಾರಣೆಯ ಕುರಿತು ರೈತರಿಗೆ ಅರಿವು, ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿಗಳಲ್ಲಿನ ಕೋವಿಡ್ ಪರಿಕರಗಳ ಭದ್ರತೆಗೆ ಕ್ರಮ. ವಸತಿ ಶಾಲೆಗಳಲ್ಲಿ ಮಕ್ಕಳ ಸೇರಿಸಲು ಪ್ರಚಾರ ಕೈಗೊಳ್ಳುವುದು ಸೇರಿದಂತೆ ಹಲವು ವಿಚಾರಗಳ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಣ್ಣು, ಕಿವಿ ಇಲ್ಲದ ಸರ್ಕಾರ: ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಟಿ.ವೆಂಕಟರಮಣಯ್ಯ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುದಾನದ ಕೊರತೆಯಿಂದ ತಾಲೂಕಿನ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಜನತೆ ಮುಖ್ಯವಾಗಿ ಕೇಳುವುದು ಮೂಲಭೂತ ಸೌಲಭ್ಯವಾದ ಶಿಕ್ಷಣ, ಆರೋಗ್ಯ, ರಸ್ತೆ, ನೀರು ಆದರೆ ಬಿಜೆಪಿ ಸರ್ಕಾರ ಅನುದಾನ ನೀಡುತ್ತಿಲ್ಲ.
ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೋಬಳಿಗೊಂದು ವಸತಿ ಶಾಲೆ ಕಲ್ಪನೆಯನ್ನು ಸಾಕಾರ ಮಾಡದೆ ಹೆಚ್ಚಿನ ಮಕ್ಕಳು ಉತ್ತಮ ಶಿಕ್ಷಣ ಪಡೆಯುವುದನ್ನು ವಂಚಿಸಿದೆ. ಎಲ್ಲಾ ಇಲಾಖೆಯಲ್ಲಿನ ಅನುದಾನ ಕಡಿತಗೊಳಿಸಿದೆ. ವೃಷಭಾವತಿ ಸಂಸ್ಕರಣೆ ನೀರಿನ ಯೋಜನೆ ಹೆಚ್ಚುವರಿಯಾಗಿ ತುಮಕೂರು ಜಿಲ್ಲೆಯನ್ನು ಸೇರಿಸಿದೆ. ಅಲ್ಲಿ ಹೇಮಾವತಿ ನೀರು ಪೂರೈಕೆಯಾಗುತ್ತಿದ್ದರೂ ಯೋಜನೆಯ ವಿಳಂಬ ಮಾಡಲು ಶಡ್ಯಂತ್ರ ಮಾಡಿದೆ ಎಂದು ಆರೋಪಿಸಿದರು.
ಜಿಲ್ಲಾಸ್ಪತ್ರೆಗಾಗಿ ಪದೇಪದೇ ಮನವಿ ಮಾಡಿದರು ಸ್ಪಂದಿಸುತ್ತಿಲ್ಲ. 100 ಹಾಸಿಗೆಗಳ ತಾಲೂಕು ಆಸ್ಪತ್ರೆಗೆ 150 ಮಂದಿ ದಾಖಲಾಗುತ್ತಿದ್ದು, 50 ಹಾಸಿಗೆ ಕೊರೆತೆಯಾಗಿದೆ. ಈ ಕುರಿತು ಇಂದು ಸಭೆ ನಡೆಸಿ ಮೇಕ್ ಶಿಫ್ಟ್ ಆಸ್ಪತ್ರೆಯನ್ನು ಬಳಸಿಕೊಳ್ಳುವಂತೆ ಸೂಚಿಸಲಾಗಿದೆ. ಆದರೆ ಜನರೇಟರ್ ಕೊರತೆ ಇದ್ದು, ಎಕ್ಸ್‌ಪ್ರೆಸ್ ಲೈನ್ ಸಂಪರ್ಕ ನೀಡುವಂತೆ ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಇರುವ ಸೌಲಭ್ಯದಲ್ಲಿಯೇ ಹಲವು ವ್ಯವಸ್ಥೆ ಮಾಡಬೇಕಾದ ಅನಿರ್ವಾರ್ಯತೆಯನ್ನು ಬಿಜೆಪಿ ಸರ್ಕಾರ ಸೃಷ್ಟಿಸಿ, ಅಭಿವೃದ್ಧಿ ವಿಚಾರದಲ್ಲಿ ಕಿವಿ, ಕಣ್ಣು ಇಲ್ಲದಂತೆ ವರ್ತಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಭೆಯಲ್ಲಿ ತಾಪಂ ಇಒ ಟಿ.ಮುರುಡಯ್ಯ, ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸೋಮಶೇಖರ್, ಸಿಡಿಪಿಒ ಅನಿತಾಲಕ್ಷ್ಮೀ, ಕುಡಿಯುವ ನೀರು ಇಲಾಖೆಯ ಎಇಇ ಬಿ.ಕೆ.ಯೋಗೇಶ್, ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕಿ ಸುಶೀಲಮ್ಮ, ತಾಲೂಕು ಆರೋಗ್ಯಾಧಿಕಾರಿ ಡಾ.ಪರಮೇಶ್ವರ, ಬಿಇಒ ಶುಭಮಂಗಳ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……