ತಿರುವನಂತಪುರಂ: ಗಲಾಟೆ ಮಾಡಿ ತರಗತಿಯಲ್ಲಿ ಅಡಚಣೆ ಉಂಟು ಮಾಡುತ್ತಿದ್ದ ವಿದ್ಯಾರ್ಥಿಯ ಮೇಲೆ ಪೆನ್ ಎಸೆದಿದ್ದ ಶಿಕ್ಷಕಿ, ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪೆನ್ ನೇರವಾಗಿ ವಿದ್ಯಾರ್ಥಿಯ ಕಣ್ಣಿಗೆ ಬಿದ್ದು ದೃಷ್ಟಿ ದೋಷ ಕಳೆದುಕೊಂಡಿದ್ದಕ್ಕೆ ಶಿಕ್ಷಕಿಗೆ ಒಂದು ವರ್ಷ ಕಾರಾಗೃಹ ಶಿಕ್ಷೆ ಮತ್ತು ಮೂರು ಲಕ್ಷ ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಕೇರಳದ ತಿರುವನಂತಪುರಂ ಪೊಕ್ಸೊ ನ್ಯಾಯಾಲಯ ಈ ಆದೇಶವನ್ನು ಹೊರಡಿಸಿದೆ. ಆರೋಪಿ ಶಿಕ್ಷಕಿಯನ್ನು ತುಂಗಂಪರಾ ನಿವಾಸಿ ಶೆರಿಫ್ ಶಹಜಹಾನ್ ಎಂದು ಗುರುತಿಸಲಾಗಿದೆ. ಬೆಟ್ಟದ ತಪ್ಪಲಿನಲ್ಲಿರುವ ಕಂದಾಲ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದಾರೆ. ಪೊಕ್ಸೊ ಕೋರ್ಟ್ ಜಡ್ಜ್ ಕೆ.ವಿ. ರಾಜನೀಶ್ ತೀರ್ಪು ಪ್ರಕಟಿಸಿದ್ದು, ಶಿಕ್ಷಕಿಗೆ ಒಂದು ವರ್ಷ ಕಾರಾಗೃಹ ಶಿಕ್ಷೆ ಮತ್ತು ಮೂರು ಲಕ್ಷ ರೂ. ದಂಡ ವಿಧಿಸಿದೆ. ಒಂದು ದಂಡ ಕೊಡದೇ ಹೋದರೆ, ಹೆಚ್ಚುವರಿ ಮೂರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
2005 ಜನವರಿ 18ರಂದು ನಡೆದ ಘಟನೆ ಸಂಬಂಧಿಸಿದಂತೆ ತೀರ್ಪು ಇಂದು ಪ್ರಕಟವಾಗಿದೆ. ಅರೆಬಿಕ್ ಕ್ಲಾಸ್ ತೆಗೆದುಕೊಂಡಿದ್ದ ವೇಳೆ ವಿದ್ಯಾರ್ಥಿಯೊಬ್ಬ ತನ್ನ ಸ್ನೇಹಿತರೊಂದಿಗೆ ಮಾತನಾಡುವುದನ್ನು ಶಿಕ್ಷಕಿ ಗಮನಿಸಿದ್ದರು. ತರಗತಿಗೆ ತೊಂದರೆಯಾಗಿದ್ದರಿಂದ ಪಕ್ಕದಲ್ಲೇ ಟೇಬಲ್ ಮೇಲಿದ್ದ ಬಾಲ್ ಪೆನ್ ಅನ್ನು ಶಿಕ್ಷಕಿ ವಿದ್ಯಾರ್ಥಿಯ ಮೇಲೆ ಎಸೆದಿದ್ದರು. ಪೇನ್ ನೇರವಾಗಿ 8 ವರ್ಷದ ವಿದ್ಯಾರ್ಥಿಯ ಕಣ್ಣಿಗೆ ಚುಚ್ಚಿಕೊಂಡಿತ್ತು. ಇದರಿಂದಾಗಿ ವಿದ್ಯಾರ್ಥಿ ತನ್ನ ಸಂಪೂರ್ಣ ದೃಷ್ಟಿಯನ್ನು ಕಳೆದುಕೊಳ್ಳಬೇಕಾಯಿತು. ಮೂರು ಬಾರಿ ಆಪರೇಷನ್ ನಡೆದರೂ ವಿದ್ಯಾರ್ಥಿ ತನ್ನ ದೃಷ್ಟಿಯನ್ನು ಮರಳಿ ಪಡೆಯಲು ಸಾಧ್ಯವಾಗಿಲ್ಲ.
ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕಾದ ಶಿಕ್ಷಕರ ಈ ನಡವಳಿಕೆ ಸಾಮಾಜಿಕವಾಗಿ ಸ್ವೀಕಾರಾರ್ಹವಲ್ಲ ಎಂದು ನ್ಯಾಯಾಲಯ ಶಿಕ್ಷಕಿ ವಿರುದ್ಧ ತೀರ್ಪು ನೀಡುವ ವೇಳೆ ಅಭಿಪ್ರಾಯಪಟ್ಟಿದೆ ಎಂದು ವರದಿಯಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……