ಬೆಂ.ಗ್ರಾ.ಜಲ್ಲೆ: ಜಿಲ್ಲೆಯಲ್ಲಿರುವ ಹಿರಿಯ ನಾಗರಿಕರ ಆರೋಗ್ಯ ತಪಾಸಣೆ ನಡೆಸಿ, ರಕ್ತದೊತ್ತಡ, ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವವ ಹಿರಿಯ ನಾಗರಿಕರ ಮನೆ ಬಾಗಿಲಿಗೆ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಉಚಿತವಾಗಿ ಮಾತ್ರೆಗಳನ್ನು ತಲುಪಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ “ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ”ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಪಿ, ಶುಗರ್ ನಂತಹ ಕಾಯಿಲೆಗಳನ್ನು ಗುಣಪಡಿಸುವ ಮಾತ್ರೆಗಳನ್ನು ಕೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಉಚಿತವಾಗಿ ಮನೆಗೆ ತಲುಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಪ್ರತಿ ತಾಲ್ಲೂಕಿನಲ್ಲಿ ತಲಾ 20 ಮಂದಿ ಹಿರಿಯ ನಾಗರಿಕರನ್ನು ಗುರುತಿಸಿ, ಅವರಿಗೆ ಕಂಪ್ಯೂಟರ್ ತರಬೇತಿಯನ್ನು ನೀಡುವ ಮೂಲಕ ಡಿಜಿಟಲ್ ಸಾಕ್ಷರತೆಗೆ ಒತ್ತು ನೀಡಲಾಗುವುದು ಎಂದರಲ್ಲದೆ, ತರಬೇತಿ ಪಡೆದವರಿಗೆ ಟ್ಯಾಬ್ ನೀಡಲಾಗುವುದರಿಂದ ಇದು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಹಿರಿಯ ನಾಗರಿಕರಿಗೆ ಅನುಕೂಲವಾಗುವಂತೆ ಬ್ಯಾಂಕ್ ಗಳಲ್ಲಿ ಪ್ರತ್ಯೇಕ ಸಾಲುಗಳನ್ನು ಮೀಸಲಿಡುವಂತೆ ಹಾಗೂ ಹಿರಿಯರಿಗೆ ಪ್ರಥಮ ಆದ್ಯತೆ ನೀಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ತಿಳಿಸಿದ ಅವರು, ಜಿಲ್ಲಾ ಮಟ್ಟದಲ್ಲಿರುವ ಹಿರಿಯ ನಾಗರಿಕರ ಸಹಾಯವಾಣಿಯಂತೆ ತಾಲ್ಲೂಕು ಮಟ್ಟದಲ್ಲಿಯೂ ಸಹಾಯವಾಣಿ ಸ್ಥಾಪಿಸಿ, ಅವರ ಕುಂದು ಕೊರತೆಗಳನ್ನು ಆಲಿಸಬೇಕು ಹಾಗೂ ಪರಿಹಾರ ನೀಡುವಂತೆ ಸೂಚಿಸಿದರು.
ತಾಲ್ಲೂಕು ಮಟ್ಟದಲ್ಲಿ ಪ್ರತಿ ತಿಂಗಳು ಅಂಗವಿಕಲರ ಅದಾಲತ್ ಗಳನ್ನು ನಡೆಸುವ ಮೂಲಕ ತಳ ಮಟ್ಟದಲ್ಲಿಯೇ ಅವರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರಲ್ಲದೆ, ಹಿರಿಯ ನಾಗರಿಕರು ಸದಾ ಕಾಲ ಹುಮ್ಮಸ್ಸು, ಚೈತನ್ಯದಾಯಕವಾಗಿ ಜೀವನ ನಡೆಸಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹಿರಿಯ ನಾಗರಿಕರಿನ್ನು ವೃದ್ಧಾಶ್ರಮಗಳಿಗೆ ಬಿಡುವ ಪದ್ಧತಿ ಹೆಚ್ಚುತ್ತಿರುವುದು ಅತ್ಯಂತ ಕಳವಳಕಾರಿಯಾದ ಸಂಗತಿಯಾಗಿದ್ದು, ಮಕ್ಕಳು ತಮ್ಮ ಪೋಷಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಿ ಆರೈಕೆ ಮಾಡಬೇಕು ಎಂದು ತಿಳಿಸಿದರು.
ಯುವಕರು ನಗರ ಜೀವನಕ್ಕೆ ಮಾರುಹೋಗಿ ತಮ್ಮ ಸಂಬಂಧಗಳನ್ನು ಕಡಿತಗೊಳಿಸುತ್ತಿದ್ದಾರೆ ಎಂದರಲ್ಲದೆ, ವಿಭಕ್ತ ಕುಟುಂಬದಿಂದಾಗಿ ಹಿರಿಯ ನಾಗರಿಕರು ಹೆಚ್ಚು ಸಮಸ್ಯೆಗಳನ್ನು ಅನುಭವಿಸುತ್ತಿರುವುದರಿಂದ ಅವಿಭಕ್ತ ಕುಟುಂಬಗಳು ಹೆಚ್ಚಾಗಬೇಕು ಹಾಗೂ ಮಕ್ಕಳು ಹಿರಿಯರಿಗೆ ಹೆಚ್ಚಿನ ಪ್ರೀತಿ ಮತ್ತು ಗೌರವ ನೀಡುವ ಮೂಲಕ ಆಸರೆಯಾಗಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ, ವಿಜೇತರಾದ ಹಿರಿಯ ನಾಗರಿಕರಿಗೆ ಬಹುಮಾನ ನೀಡಲಾಯಿತು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ವಿಜಯಾ.ಈ.ರವಿಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಅನಿತಾಲಕ್ಷ್ಮೀ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ, ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ಶ್ರೀವಾಣಿ ಕೋನಾರೆಡ್ಡಿ ಸೇರಿದಂತೆ ಹಿರಿಯ ನಾಗರಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……