ದೊಡ್ಡಬಳ್ಳಾಪುರ: ಉತ್ತರ ಪ್ರದೇಶದಲ್ಲಿ ಹಕ್ಕೊತ್ತಾಯಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತ ಸಮುದಾಯದ ಮೇಲೆ ನಡೆದಿರುವ ಹತ್ಯೆ ಘಟನೆಯನ್ನು ಖಂಡಿಸಿ, ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ವಿವಿಧ ಸಂಘಟನೆಗಳಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಉತ್ತರ ಪ್ರದೇಶದಲ್ಲಿ ಹಕ್ಕೊತ್ತಾಯಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಸಚಿವರ ಬೆಂಗಾವಲಿನ ವಾಹನಗಳನ್ನು ಚಲಾಯಿಸಿ, ಎಂಟು ಜನರ ಬರ್ಬರ ಹತ್ಯೆ ನಡೆಸಲಾದ ಕುಕೃತ್ಯ ತೀವ್ರ ಖಂಡನೀಯವಾಗಿದೆ. ದೇಶದಾದ್ಯಂತ ಬೆಳೆಯುತ್ತಿರುವ ಚಳವಳಿಯನ್ನು ಮುರಿಯುವ ಸಂಚಾಗಿದೆ. ನೆನ್ನೆ ಉತ್ತರ ಪ್ರದೇಶದ ಒಕ್ಕೂಟ ಸರಕಾರದ ಗೃಹ ಖಾತೆಯ ರಾಜ್ಯ ಸಚಿವರಾದ ಅಜಯ್ ಮಿಶ್ರ ಹಾಗೂ ಆತನ ಮಗ ಮತ್ತು ಸಂಬಂಗಳು ದುಷ್ಕೃತ್ಯದಲ್ಲಿ ಪಾಲ್ಗೊಂಡು ಗುಂಡಾಗಳಂತೆ ವರ್ತಿಸಿದ್ದಾರೆ.
ಇಂತಹದೊಂದು ಅಮಾನುಷ ಮತ್ತು ತೀವ್ರ ಸ್ವರೂಪದ ಅಕಾರ ದುರುಪಯೋಗದ ಘಟನೆಗಳನ್ನು ಪ್ರಧಾನ ಮಂತ್ರಿಗಳು ಖಂಡಿಸದೇ ಇರುವುದು ಅನುಮಾನಗಳಿಗೆ ಕಾರಣವಾಗಿದೆ. ಇಂತಹ ಯಾವುದೇ ದೌರ್ಜನ್ಯ ಹಾಗೂ ಅಧಿಕಾರದ ದುರುಪಯೋಗದ ಮೂಲಕ ರೈತ ಚಳವಳಿಯನ್ನು ಮುರಿಯಲಾಗದೆಂಬುದು ಕಳೆದೆರೆಡು ವರ್ಷಗಳಿಂದ ದೇಶದಾದ್ಯಂತ ಮತ್ತು ದೆಹಲಿ ಗಡಿಗಳ ಸುತ್ತ ಮುತ್ತ ಕಳೆದ ಹತ್ತು ತಿಂಗಳುಗಳಿಂದ ದಶಲಕ್ಷಾಂತರ ಕುಟುಂಬಗಳು ನಡೆಸುತ್ತಿರುವ ಐತಿಹಾಸಿಕ ಚಳುವಳಿಯೆ ಸಾಕ್ಷಿಯಾಗಿದೆಯೆಂದು ಎಚ್ಚರಿಸುತ್ತದೆ.
ದೇಶದಲ್ಲಿ ರೈತರ ಚಳವಳಿಗಳನ್ನು ಹತ್ತಿಕ್ಕುವ ಕಾರ್ಯವಾಗುತ್ತಿರುವುದಕ್ಕೆ ಉತ್ತರಪ್ರದೇಶದ ಘಟನೆ ನಿದರ್ಶನವಾಗಿದೆ. ಇಂತಹ ಕೃತ್ಯಗಳು ಮರುಕಳಿಸದಂತೆ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕಿದೆ ಎಂದರು.
ಒಕ್ಕೂಟ ಸರಕಾರದ ಗೃಹ ಖಾತೆಯ ರಾಜ್ಯ ಸಚಿವರಾದ ಅಜಯ ಮಿಶ್ರರವರನ್ನು ಈ ಕೂಡಲೇ ಮಂತ್ರಿ ಸ್ಥಾನದಿಂದ ವಜಾ ಮಾಡಬೇಕು. ಸಚಿವ ಅಜಯ ಮಿಶ್ರ ಹಾಗೂ ಆತನ ಮಗ ಆಶಿಶ್ ಮಿಶ್ರ ಮೋನು ಆತನ ಗುಂಡಾ ಪಡೆಯನ್ನು ತಕ್ಷಣವೇ ಬಂಧಿಸಬೇಕು ಮತ್ತು ಕೊಲೆ ಪಾತಕ ಪ್ರಕರಣವೆಂದು ಮೊಕದ್ದಮೆಗಳನ್ನು ಹೂಡಬೇಕು. ಈ ಒಟ್ಟು ಪ್ರಕರಣವನ್ನು ಸರ್ವೋಚ್ಛ ನ್ಯಾಯಾಲಯದ ಸುರ್ಪಧಿಯಲ್ಲಿ ಉನ್ನತ ನ್ಯಾಯಾಂಗ ತನಿಖೆಗೆ ಕ್ರಮವಹಿಸಬೇಕು.
ಹರ್ಯಾಣ ಮುಖ್ಯಮಂತ್ರಿಯನ್ನು, ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಲು ಅಗತ್ಯ ಕ್ರಮವಹಿಸಬೇಕು. ಈ ದುಷ್ಕೃತ್ಯದಲ್ಲಿ ಹುತಾತ್ಮರಾದ ರೈತ ಕುಟುಂಬಗಳಿಗೆ ತಲಾ ಒಂದು ಕೋಟಿ ರೂಗಳ ಪರಿಹಾರವನ್ನು ನೀಡಬೇಕು ಮತ್ತು ತೀವ್ರವಾಗಿ ಗಾಯಗೊಂಡವರಿಗೂ ಅಗತ್ಯ ಉಚಿತ ಚಿಕಿತ್ಸೆ ಹಾಗೂ ಸೂಕ್ತ ಪರಿಹಾರವನ್ನು ನೀಡಬೇಕು ಎನ್ನುವ ಹಕ್ಕೊತ್ತಾಯಗಳನ್ನು ಪ್ರತಿಭಟನೆಯಲ್ಲಿ ಮಂಡಿಸಲಾಯಿತು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…….