ಬೆಂ.ಗ್ರಾ.ಜಿಲ್ಲೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರಾಸಾಯನಿಕ ಅನಿಲಗಳ ಸರಬರಾಜು ಮಾಡುವ ಸಂದರ್ಭದಲ್ಲಿ ಮುನ್ನೆಚ್ಚರಿಕೆಯ ಕ್ರಮಗಳನ್ನು ಅಗತ್ಯವಾಗಿ ಕೈಗೊಳ್ಳುವುದರ ಮೂಲಕ ಆಕಸ್ಮಿಕ ಅನಾಹುತಗಳು ಸಂಭವಿಸದಂತೆ ತಡೆಗಟ್ಟಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.
ಕಾರ್ಖಾನೆಗಳ ಅನಿಲ ಸರಬರಾಜು ಮಾಡುವ ಕಾರ್ಮಿಕರಿಗೆ ಸಾಗಾಣಿಕೆ ವೇಳೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತ ತರಬೇತಿಗಳನ್ನು ನೀಡುವ ಮೂಲಕ ಅವರಿಗೆ ಅರಿವು ಮೂಡಿಸಬೇಕೆಂದರು.
ಜಿಲ್ಲೆಯಲ್ಲಿರುವ ಅಪಾಯಕಾರಿ ಅನಿಲ ಕಾರ್ಖಾನೆಗಳನ್ನು ಗುರುತಿಸಿ, ವ್ಯವಸ್ಥಿತವಾದ ಜಾಗಕ್ಕೆ ಸ್ಥಳಾಂತರಿಸಬೇಕೆಂದರಲ್ಲದೆ, ರಾಸಾಯನಿಕ ಅನಿಲ ಕಾರ್ಖಾನೆಗಳ ಸುತ್ತಮುತ್ತ ವಾಸಿಸುವ ಜನರ ಹಾಗೂ ಪ್ರಾಣಿಗಳ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮ ಕುರಿತು ಸಮೀಕ್ಷೆ ನಡೆಸಿ, ವರದಿ ಸಲ್ಲಿಸುವಂತೆ ತಿಳಿಸಿದರು.
ದೇವನಗೊಂದಿ ಎಂ.ಎ.ಹೆಚ್ ಕಾರ್ಖಾನೆ ಮತ್ತು ದೇವಲಾಪುರ ಶಾಲೆಯ ಮಧ್ಯದಲ್ಲಿನ ರಸ್ತೆ ದುರಸ್ತಿ ಬಗ್ಗೆ ಪಿಡಬ್ಲ್ಯೂಡಿ ಅಧಿಕಾರಿಗಳು ಗಮನ ಹರಿಸಬೇಕು ಎಂದರಲ್ಲದೆ, ಅಗ್ನಿಶಾಮಕ ಶಾಖೆಯನ್ನು ದೇವನಗೊಂದಿ ವಲಯದಲ್ಲಿ ಸ್ಥಾಪಿಸಲು ಹಾಗೂ ಅಪಾಯಕಾರಿ ಕಾರ್ಖಾನೆಗಳ ಸುತ್ತ-ಮುತ್ತ 2 ಕಿ.ಮೀ ಪ್ರದೇಶವನ್ನು ನಿಷೇಧಿತ ವಲಯ ಎಂದು ಘೋಷಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಅಪಾಯಕಾರಿ ರಾಸಾಯನಿಕಗಳನ್ನು ಸರಬರಾಜು ಮಾಡುವ ಸಿಬ್ಬಂದಿಗಳಿಗೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬೇಕು. ಇದರೊಂದಿಗೆ ರಾಸಾಯನಿಕಗಳ ಸಾಗಾಣಿಕೆಯ ವಾಹನಗಳು ಅಪಘಾತಕ್ಕೆ ಒಳಗಾದ ಸಂದರ್ಭದಲ್ಲಿ ಸಾರ್ವಜನಿಕರು ಹತ್ತಿರ ಹೋಗದಂತೆ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
ನಗರ ಪ್ರದೇಶದಲ್ಲಿರುವ ಅಪಾಯಕಾರಿ ಕಾರ್ಖಾನೆಗಳನ್ನು ಸ್ಥಳಾಂತರಿಸುವ ಕುರಿತು ಪಟ್ಟಿ ಮಾಡಿ, ವರದಿ ನೀಡಲು ತಿಳಿಸಿದರು. ಅಲ್ಲದೆ, ನೆಲಮಂಗಲದಲ್ಲಿರುವ ಎಂ.ಎ.ಹೆಚ್ ಕಾರ್ಖಾನೆಗಳಲ್ಲಿ ಆನ್-ಸೈಟ್ ಅಣುಕು ಪ್ರದರ್ಶನ ನಡೆಸದಿರುವ ಕಾರ್ಖಾನೆಗಳ ಪರವಾನಗಿಯನ್ನು ರದ್ದುಗೊಳಿಸುವಂತೆ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವಿಜಯಾ.ಈ.ರವಿಕುಮಾರ್, ಉಪ ವಿಭಾಗಾಧಿಕಾರಿ ಅರುಳ್ ಕುಮಾರ್, ಡಿವೈಎಸ್ಪಿ ಟಿ.ರಂಗಪ್ಪ, ಡೆಪ್ಯೂಟಿ ಡೈರೆಕ್ಟರ್ ಆಫ್ ಫ್ಯಾಕ್ಟರಿಸ್ ನ ನರಸಿಂಹ ಮೂರ್ತಿ, ಜಿಲ್ಲಾ ವಿಪತ್ತು ನಿರ್ವಹಣಾ ತಜ್ಞೆ ಡಾ. ವಿನುತಾ.ಡಿ.ಎನ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಭವ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜಿಲ್ಲಾ ಅಂತರ್ಜಲ ಹಿರಿಯ ಭೂ ವಿಜ್ಞಾನಿ ಡಾ. ಪಲ್ಲವಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಪ್ಪೇಸ್ವಾಮಿ, ಜಿಲ್ಲಾ ನಗರಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ಸುಮಾ, ತಹಶೀಲ್ದಾರ್ ಗಳು ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……