ದೊಡ್ಡಬಳ್ಳಾಪುರ: ಕನ್ನಡಪರ ಸಂಘಟನೆಗಳ ಹಾಗೂ ಕನ್ನಡಾಭಿಮಾನಿಗಳ ಸಲಹೆ ಸೂಚನೆಯಂತೆ ಈ ಬಾರಿ ಕರ್ನಾಟಕ ರಾಜ್ಯೋತ್ಸವವನ್ನು ನ.1ರಂದು ವಿಶಿಷ್ಟವಾಗಿ ಆಚರಿಸಲಾಗುತ್ತಿದ್ದು, ನಗರದಲ್ಲಷ್ಟೇ ಅಲ್ಲದೇ ಹೋಬಳಿವಾರು ಗ್ರಾಮೀಣ ಪ್ರದೇಶದಲ್ಲಿಯೂ ಆಚರಣೆ ಮಾಡಲು ಸಿದ್ದತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ತಿಳಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನ.1ರಂದು ಆಚರಿಸಲಾಗುವ ಕರ್ನಾಟಕ ರಾಜ್ಯೋತ್ಸವ ಕುರಿತಂತೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಲ್ಲಿಯೂ ಜಿಲ್ಲಾ ಕಾರ್ಯಕ್ರಮ ಆಗಲಿ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರ ದೊಡ್ಡಬಳ್ಳಾಪುರದಲ್ಲಿಯೇ ಆಗಬೇಕಿರುವುದು ನ್ಯಾಯ ಸಮ್ಮತ. ಆದರೆ ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರದ ನಡುವೆ ಜಿಲ್ಲಾ ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಎರಡೂ ತಾಲೂಕುಗಳಿಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ಇಲ್ಲಿನ ಜನತೆ ಸುಮ್ಮನಿದ್ದಾರೆ. ಕಂದಾಯ ಭೂಮಿ ದೇವನಹಳ್ಳಿಗೆ ಸೇರಿದೆ ಅಂದ ಮಾತ್ರಕ್ಕೆ ಅದು ಜಿಲ್ಲಾ ಕೇಂದ್ರವಲ್ಲ. ಈ ಬಗ್ಗೆ ದೇವನಹಳ್ಳಿ ಶಾಸಕರು ಹೇಳಿಕೆ ನೀಡುತ್ತಿರುವುದು ಖಂಡಿನೀಯ. ಇನ್ನು ಮುಂದೆ ಪ್ರತಿ ರಾಷ್ಟ್ರೀಯ ಹಬ್ಬಗಳು ಸಹ ಒಂದೊಂದು ಬಾರಿ ಒಂದೊಂದು ತಾಲೂಕಿನಲ್ಲಿ ಮಾಡುವ ಮೂಲಕ ಜಿಲ್ಲಾ ಕೇಂದ್ರ ಎಲ್ಲರಿಗೂ ಸೇರಿದ್ದು ಎನ್ನುವುದನ್ನು ನಿರೂಪಿಸಬೇಕಿದೆ. ಜಿಲ್ಲಾ ಕೇಂದ್ರದ ಬಗ್ಗೆ ಅನಗತ್ಯ ಗೊಂದಲ ಮೂಡಿಸಿದೆ ಕನ್ನಡಪರ ಸಂಘಟನೆಗಳು ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಸಭೆಯಲ್ಲಿ ನೆರೆದಿದ್ದ ಬಹಳಷ್ಟು ಸಂಘಟನೆಗಳ ಮುಖಂಡರು ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ರಾಜ್ಯೋತ್ಸವದ ವೇಳೆ ನೀಡುವ ಕನ್ನಡ ಕಟ್ಟಾಳು ಪ್ರಶಸ್ತಿಯನ್ನು ಅರ್ಹರಿಗೆ ನೀಡಬೇಕು. ಇದರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರನ್ನು ಗುರುತಿಸಿ ಸನ್ಮಾನಿಸಬೇಕು. ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರಬೇಕಿದ್ದು, ಯಾವುದೇ ಶಿಫಾರಸ್ಸು ಮಾಡಿ ಆಯ್ಕೆ ಸಮಿತಿಯ ತೀರ್ಮಾನಕ್ಕೆ ವಿರೋಧವಾಗಿ ಹೆಸರುಗಳನ್ನು ಸೇರಿಸಬಾರದು. ಕಾರ್ಯಕ್ರಮದಲ್ಲಿನ ಸನ್ಮಾನಿತರನ್ನು ಗೌರವಯುತವಾಗಿ ನಡೆಸಿಕೊಂಡು, ಸನ್ಮಾನವನ್ನು ಸೂಕ್ತ ರೀತಿಯಲ್ಲಿ ಮಾಡಬೇಕು. ಪ್ರತಿ ಶಾಲಾ ಕಾಲೇಜುಗಳಲ್ಲಿಯೂ ಕರ್ನಾಟಕ ರಾಜ್ಯೋತ್ಸವ ಆಚರಿಸಲು ಶಿಕ್ಷಣ ಇಲಾಖೆ ಸೂಚನೆ ನೀಡಬೇಕು.
ವಾಣಿಜ್ಯ ಮಳಿಗೆ, ಸಾರ್ವಜನಿಕ ಫಲಕಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯವಾಗಬೇಕು. ನಗರಸಭೆಯಲ್ಲಿ ಕನ್ನಡ ಭಾಷೆಯ ಬಳಕೆಗೆ ಆದ್ಯತೆ ನೀಡಬೇಕು. ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡಪರ ವಾತಾವರಣ ನಿರ್ಮಿಸುವ ನಿಯಮಗಳು ಜಾರಿಯಾಗಬೇಕು. ಶಾಲೆಗಳಲ್ಲಿ ಕನ್ನಡಪರ ಕಾರ್ಯಕ್ರಮಗಳು ನಡೆಯಬೇಕು. ನಗರದ ಡಿ.ಕ್ರಾಸ್ ವೃತ್ತದಲ್ಲಿ ಡಾ.ರಾಜ್‍ಕುಮಾರ್ ವೃತ್ತ ಎಂದು ನಾಮಕರಣ ಮಾಡಿದ್ದ ವೃತ್ತವನ್ನು ಕೆಡವಲಾಗಿದ್ದು, ಈಗ ಅಲ್ಲಿ ಮತ್ತೆ ವೃತ್ತ ನಿರ್ಮಿಸಿ ಡಾ.ರಾಜ್‍ಕುಮಾರ್ ವೃತ್ತದ ಹೆಸರು ಮುಂದುವರೆಯಬೇಕು ಎನ್ನುವ ಅಭಿಪ್ರಾಯಗಳು ಸಭೆಯಲ್ಲಿ ವ್ಯಕ್ತವಾದವು.
ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಜಿಲ್ಲಾ ಕೇಂದ್ರದ ಬಗ್ಗೆ ಇರುವ ಗೊಂದಲ, ಜಿಲ್ಲಾಸ್ಪತ್ರೆ ನಿರ್ಮಾಣ, ತಾಲೂಕಿಗೆ ತ್ಯಾಜ್ಯ ಸಂಸ್ಕರಿಸಿದ ನೀರು ಮೊದಲಾಗಿ, ತಾಲೂಕಿನ ಜನರ ಪರವಾಗಿ ಸಂಬಂಧಪಟ್ಟವರನ್ನು ಒತ್ತಾಯಿಸುತ್ತಲೇ ಇದ್ದೇವೆ. ಮುಂದೆ ಜಿಲ್ಲಾ ಕಾರ್ಯಕ್ರಮವನ್ನು ದೊಡ್ಡಬಳ್ಳಾಪುರದಲ್ಲಿ ಹಮ್ಮಿಕೊಳ್ಳುವಂತೆ ಮನವಿ ಮಾಡಲಾಗುವುದು. ದೊಡ್ಡಬಳ್ಳಾಪುರ ಅಭಿವೃದ್ದಿ ಪರ ಯೋಜನೆಗಳ ಹೋರಾಟಕ್ಕೆ ನನ್ನ ಬೆಂಬಲವಿದೆ. ಪ್ರಶಸ್ತಿಯನ್ನು ಅರ್ಹರಿಗೆ ನೀಡಬೇಕಿದ್ದು, ಇದರಲ್ಲಿ ನನ್ನದು ಯಾವುದೇ ಹಸ್ತಕ್ಷೇಪವಿಲ್ಲ. ಹೋಬಳಿಗಳಲ್ಲಿ ಕಾರ್ಯಕ್ರಮ ಮಾಡಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಅರ್ಥಪೂರ್ಣ ಕಾರ್ಯಕ್ರಮಕ್ಕೆ ಎಲ್ಲಾ ಸಂಘಟನೆಗಳು ಹಾಗೂ ನಾಗರಿಕರ ಸಹಕಾರ ಅಗತ್ಯ ಎಂದರು.
ತಹಶೀಲ್ದಾರ್ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ಟಿ.ಎಸ್.ಶಿವರಾಜ್ ಮಾತನಾಡಿ, ಈ ಹಿಂದೆ ಬರ, ಕೋವಿಡ್ ಕಾರಣಗಳಿಂದ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಗುತ್ತಿತ್ತು. ಈ ಬಾರಿ ಅದಕ್ಕಿಂತ ಭಿನ್ನವಾಗಿ ಆಚರಿಸಬಹುದಾಗಿದೆ. ಆದರೆ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕಿದೆ. ಶಾಲಾ ಮಕ್ಕಳು ಭಾಗವಹಿಸಲು ಸಾಧ್ಯವಾಗದ ಕಾರಣ ರಾಜ್‍ಕುಮಾರ್ ಕಲಾಮಂದಿರದಲ್ಲಿಯೇ ಕಾರ್ಯಕ್ರಮ ಆಯೋಜಿಸುವುದು ಸೂಕ್ತ. ಶಿಷ್ಟಾಚಾರದಂತೆ ಸಮಾರಂಭದಲ್ಲಿ ಯಾವುದೇ ನ್ಯೂನತೆಗಳಾಗದಂತೆ, ತಮ್ಮೆಲ್ಲರ ಸಲಹೆಯಂತೆ ಆಚರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ವಿವರ: ಪುರಭವನದಲ್ಲಿ ರಾಜ್ಯೋತ್ಸವ ವೇದಿಕೆ ಕಾರ್ಯಕ್ರಮ, ತಾಲೂಕು ಕಚೇರಿ ಆವರಣದಲ್ಲಿ ಧ್ವಜಾರೋಹಣದೊಂದಿಗೆ ನಾಡಪರಂಪರೆಯನ್ನು ಸಾರುವ ಮೆರವಣಿಗೆ ಮೂಲಕ ಸಮಾರಂಭದ ವೇದಿಕೆ ತಲುಪುವ ಕುರಿತು ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮುರುಡಯ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……