ಬೆಂ ಗ್ರಾ.ಜಿಲ್ಲೆ: ಜಿಲ್ಲೆಯಲ್ಲಿರುವ ರಸ್ತೆಗಳ ಸ್ಥಿತಿ ಹದಗೆಟ್ಟಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ಸಂಭವಿಸುತ್ತಿದ್ದು, ಈ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲಿಸಿ, ಸುಧಾರಿತ ರಸ್ತೆಗಳನ್ನಾಗಿ ಮಾಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸೂಚಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹದಗೆಟ್ಟಿರುವ ರಸ್ತೆಗಳ ದುರಸ್ತಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ತಿಳಿಸಿದರು.
ಟೋಲ್‌ಗಳಲ್ಲಿ ವಿಐಪಿ ವಾಹನಗಳು ಚಲಿಸುವ ಮಾರ್ಗಗಳಿಗೆ ಸ್ಥಳಾವಕಾಶ ಮಾಡಿಕೊಡಿ ಎಂದರಲ್ಲದೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ದುರಸ್ತೀಕರಣ, ರಸ್ತೆ ದೀಪಗಳ ಸರಿಯಾದ ಅಳವಡಿಕೆ, ರಸ್ತೆ ಬದಿಯ ಅನಗತ್ಯ ಅಂಗಡಿ ಮುಂಗಟ್ಟಗಳ ತೆರವು, ಸೂಕ್ತ ಏಕಮುಖ(ಒನ್ ವೇ) ರಸ್ತೆಗಳ ರಚನೆ, ರೋಡ್ ಮಾರ್ಕಿಂಗ್ ಹಾಗೂ ಮುಂತಾದ ಸಮಸ್ಯೆಗಳ ಕುರಿತಂತೆ ಸಾರಿಗೆ, ಲೋಕೋಪಯೋಗಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದರು.
ರಸ್ತೆಗಳಲ್ಲಿ ಬೈಕ್ ವೀಲಿಂಗ್ ಮಾಡುವ ವ್ಯಕ್ತಿಗಳನ್ನು ಗುರುತಿಸಲು ಸಿಸಿಟಿವಿ ಅಳವಡಿಸಿ ಹಾಗೂ ಅಂತಹವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದರಲ್ಲದೆ, ಹೊಸಕೋಟೆ ವಲಯದಲ್ಲಿ ಈಗಾಗಲೇ ಸಿಸಿಟಿವಿ ಅಳವಡಿಸಲಾಗಿದ್ದು, ಉಳಿದ ತಾಲ್ಲೂಕುಗಳಲ್ಲಿಯೂ ಸಿಸಿಟಿವಿ ಅಳವಡಿಸಲು ಸೂಚಿಸಿದರು.
ರಸ್ತೆಯ ಸಿಗ್ನಲ್‌ಗಳಲ್ಲಿ ಕಂಡುಬರುವ ಬ್ಲಿಂಕರ್ಸ್‌ಗಳ ತೀವ್ರತೆಯನ್ನು ಕಡಿಮೆಗೊಳಿಸಲು ರೇಡಿಯಂಗಳನ್ನು ಅಳವಡಿಸಬೇಕು ಹಾಗೂ ಟ್ರಕ್ ಟರ್ಮಿನಲ್ ನಿರ್ಮಿಸಿ, ಅವೈಜ್ಞಾನಿಕ ರಸ್ತೆ ಹಂಪ್ಸ್‌ಗಳನ್ನು ತೆರವುಗೊಳಿಸಲು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣ ಅವರು ಮಾತನಾಡಿ ರಸ್ತೆ ಅಪಘಾತ ಸಂಭವಿಸಿದರೆ ಅವರ ಸಾವಿನಿಂದ ಇಡೀ ಕುಟುಂಬದವರೇ ನೋವು ಅನುಭವಿಸಬೇಕಾಗುತ್ತದೆ, ಅಪಘಾತದಿಂದ ಅಂಗವಿಕಲನಾದರೆ ಅವರನ್ನು ನೋಡಿಕೊಳ್ಳುವ ಹೊಣೆ ಕುಟುಂಬದವರಿಗೆ ಬಹಳ ಕಠಿಣವಾಗಿರುತ್ತದೆ ಎಂದರು.
ನೆಲಮಂಗಲದಲ್ಲಿ ಈಗಾಗಲೇ ರಸ್ತೆ ಗುಂಡಿಗಳನ್ನು ಗುರುತಿಸಿದ್ದು, ಅವುಗಳ ಸುಸ್ಥಿತಿಗೆ ಕ್ರಮವಹಿಸಿ, ತಾತ್ಕಾಲಿಕ ವ್ಯವಸ್ಥೆಗಳಿಗಿಂತ ಶಾಶ್ವತ ಪರಿಹಾರದ ಕಡೆ ಗಮನವಹಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರಲ್ಲದೆ, ರಸ್ತೆಯ ಸುರಕ್ಷಿತ ನಿಯಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ವಿಜಯಾ.ಈ.ರವಿಕುಮಾರ್ ಅವರು ಮಾತನಾಡಿ, ಶಾಲೆಗಳು ಪ್ರಾರಂಭವಾಗುತ್ತಿದ್ದು, ಶಾಲೆಗಳ ಸುತ್ತಮುತ್ತಲಿನ ಅವೈಜ್ಞಾನಿಕ ಹಂಪ್ಸ್‌ಗಳನ್ನು ತೆರವುಗೊಳಿಸಿ ಹಾಗೂ ಶಾಲಾ-ಕಾಲೇಜುಗಳಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಕುರಿತಂತೆ ಕಾರ್ಯಗಾರಗಳನ್ನು ನಡೆಸುವ ಮೂಲಕ ಅರಿವು ಮೂಡಿಸಬೇಕೆಂದರು.
ಸಭೆಯಲ್ಲಿ ದೊಡ್ಡಬಳ್ಳಾಪುರ ಡಿವೈಎಸ್ಪಿ ನಟರಾಜ್, ನೆಲಮಂಗಲ ಡಿವೈಎಸ್ಪಿ ಜಗದೀಶ್, ನಗರ ಮತ್ತು ಗ್ರಾಮಾಂತರ ಯೋಜನಾ ಉಪ ನಿರ್ದೇಶಕ ಬಿ.ಆರ್.ಹರ್ಷ, ನೆಲಮಂಗಲ ಪಿಡಬ್ಲ್ಯೂಡಿ ಅಧಿಕಾರಿ ನಟರಾಜ್, ಕಾರ್ಯಪಾಲಕ ಅಭಿಯಂತರ ಯತೀಶ್‌ರಾಜ್, ಕೋಲಾರದ ಎಲ್.ಇ.ಎ. ಅಸೋಸಿಯೇಟ್ ಸೌತ್ ಪ್ರೈವೇಟ್ ಲಿಮಿಟೆಡ್ ಸಂದೀಪ್ ಕುಮಾರ್, ಎನ್.ಹೆಚ್.ಎ.ಐ. ಯೋಜನಾ ನಿರ್ದೇಶಕ ಶ್ರೀನಿವಾಸ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……