ದೊಡ್ಡಬಳ್ಳಾಪುರ: ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಮಳೆಯಾಗುತ್ತಿರುವಂತೆ ತಾಲ್ಲೂಕಿನಲ್ಲೂ ಶುಕ್ರವಾರವು ಸಹ ಮಳೆ ಹಾಗೂ ಶೀತಲ ಗಾಳಿ ಮುಂದುವರೆದಿದ್ದು ಜನಜೀವನ ಅಸ್ತವ್ಯಸ್ಥವಾಗಿತ್ತು.
ಮೂರು ದಿನಗಳಿಂದಲು ತುಂತುರು ಮಳೆ ಬೀಳುತ್ತಲೇ ಇರುವುದರ ಜೊತೆಗೆ ಗಾಳಿಯು ಬೀಸುತ್ತಿರುವುದರಿಂದ ಕೊಯ್ಲಿಗೆ ಬಂದಿದ್ದ ರಾಗಿ ಸಂಪೂರ್ಣವಾಗಿ ನೆಲಕ್ಕೆ ಉರುಳಿಬಿದ್ದಿದೆ. ಸತತ ಮಳೆಯು ಬೀಳುತ್ತಿರುವುದರಿಂದ ರಾಗಿ ತೆನೆಯಲ್ಲೇ ಮೊಳಕೆಯೊಡಯಲು ಪ್ರಾರಂಭವಾಗಿವೆ. ಇನ್ನು ಎರಡು ಅಥವಾ ಅದಕ್ಕಿಂತಲು ಹೆಚ್ಚು ದಿನ ಮಳೆ ಮುಂದುವರೆದರೆ ರಾಗಿ ಬೆಳೆ ರೈತರ ಕೈತಪ್ಪಲಿದೆ. ರಾಗಿ ತೆನೆ ಇರಲಿ, ಹುಲ್ಲು ಸಹ ದೊರೆಯದಾಗಲಿದೆ ಎಂದು ಆಲಹಳ್ಳಿ ಗ್ರಾಮದ ರಾಗಿ ಬೆಳೆಗಾರ ಮಂಜುನಾಥ್ ತಿಳಿಸಿದ್ದಾರೆ.
ಐದಾರು ವರ್ಷಗಳಿಂದ ರಾಗಿ ಕೊಯ್ಲಿಗೆ ಯಂತ್ರಗಳನ್ನೇ ಅವಲಂಭಿಸಿರುವುದರಿಂದ ಮಳೆ,ಗಾಳಿಗೆ ರಾಗಿ ಹೊಲಗಳು ಸಂಪೂರ್ಣವಾಗಿ ಮಲಗಿವೆ. ಹೀಗಾಗಿ ಯಂತ್ರಗಳ ಮೂಲಕ ಕೊಯ್ಲು ಮಾಡುವುದು ಕಷ್ಟವಾಗಿದೆ. ಯಂತ್ರಗಳನ್ನು ಬಳಸಿದರೆ ಅರ್ದ ಭಾಗದ ಬೆಳೆಯು ಸಹ ಕೈಗೆ ಬರುವ ನಂಬಿಕೆ ಇಲ್ಲ ಎನ್ನುತ್ತಾರೆ ರೈತರು.
ತಾಲ್ಲೂಕಿನಲ್ಲಿ ಗುರುವಾರಕ್ಕಿಂತಲು ಶುಕ್ರವಾರ ಬೆಳಗ್ಗಿನಿಂದಲೇ ಶೀತಲಗಾಳಿ ಹೆಚ್ಚಾಗಿದ್ದರಿಂದ ಬೆಚ್ಚಿಬಿದ್ದಿರುವ ಪೋಷಕರು ಶಾಲೆಗಳಿಗೆ ಶುಕ್ರವಾರ ಮಕ್ಕಳನ್ನು ಕಳುಹಿಸಲು ಹಿಂದೇಟುಹಾಕಿದ್ದರಿಂದ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡಿಮೆಯಾಗಿತ್ತು.
ನಗರದ ಮಾರುಕಟ್ಟೆ ಪ್ರದೇಶ ಹಾಗೂ ಬಸ್ ನಿಲ್ದಾಣದಲ್ಲಿ ಜನ ಸಂಚಾರವು ವಿರಳವಾಗಿತ್ತು.
ಮಳೆ ಹಿನ್ನೆಲೆಯಲ್ಲಿ ತರಕಾರಿ ಮಾರುಕಟ್ಟೆಯತ್ತ ಗ್ರಾಹಕರು ಸುಳಿಯದೇ ಇದ್ದುದ್ದರಿಂದ ವ್ಯಾಪಾರವಹಿವಾಟು ಸಹ ಕಡಿಮೆಯಾಗಿದೆ ಎಂದು ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿನ ತರಕಾರಿ ವ್ಯಾಪಾರಿ ಸುರೇಶ್ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…