ಬೆಂಗಳೂರು: ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಪ್ರಾದೇಶಿಕ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆ ನ್ಯಾವಿಕ್ (NaVIC) ನ ಜಾಗತಿಕ ಬಳಕೆಗೆ ಒತ್ತು ನೀಡುವಂತೆ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಇಂದು ಇಸ್ರೋಗೆ ಸೂಚಿಸಿದ್ದಾರೆ.
ಯು ಆರ್ ರಾವ್ ಉಪಗ್ರಹ ಕೇಂದ್ರದ ವಿಜ್ಞಾನಿಗಳು ಮತ್ತು ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿಯವರು, ನ್ಯಾವಿಕ್ ಅನ್ನು ಸ್ಥಾಪಿಸಿ, ಕಾರ್ಯಗತಗೊಳಿಸಿದ್ದಕ್ಕಾಗಿ ಇಸ್ರೋವನ್ನು ಶ್ಲಾಘಿಸಿದರು. ಇದೊಂದು ಗಮನಾರ್ಹ ಸಾಧನೆ ಎಂದು ಬಣ್ಣಿಸಿದರು. ವ್ಯಾಪ್ತಿಯ ಪ್ರದೇಶಗಳು, ಸೇವೆಗಳು ಮತ್ತು ರಾಷ್ಟ್ರೀಯ ಅವಶ್ಯಕತೆಗಳನ್ನು ಪೂರೈಸಲು ಅದರ ಪರಿಣಾಮಕಾರಿ ಬಳಕೆಗೆ ಸಂಬಂಧಿಸಿದಂತೆ ನ್ಯಾವಿಕ್ ವ್ಯವಸ್ಥೆಯ ವಿಸ್ತರಣೆಯನ್ನು ಇಸ್ರೋ ಸಕ್ರಿಯವಾಗಿ ಮುಂದುವರಿಸಬೇಕು ಎಂದು ಅವರು ಹೇಳಿದರು.
ಬಾಹ್ಯಾಕಾಶ ಕ್ಷೇತ್ರದಲ್ಲಿ ಜಾಗತಿಕವಾಗಿ ತನ್ನ ಹೆಜ್ಜೆಗುರುತನ್ನು ವಿಸ್ತರಿಸಲು ಭಾರತವು ಅಗಾಧ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದ ಶ್ರೀ ನಾಯ್ಡು, ಭಾರತವನ್ನು ಸಂಪೂರ್ಣವಾಗಿ ಸ್ವಾವಲಂಬಿಯನ್ನಾಗಿ ಮಾಡಲು ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಜಾಗತಿಕ ನಾಯಕನಾಗಲು ದೊಡ್ಡ ರೀತಿಯಲ್ಲಿ ಕೊಡುಗೆ ನೀಡುವಂತೆ ಇತ್ತೀಚೆಗೆ ಪ್ರಾರಂಭಿಸಲಾದ ಭಾರತೀಯ ಬಾಹ್ಯಾಕಾಶ ಸಂಘಟನೆಗೆ ಅವರು ಕರೆಕೊಟ್ಟರು.
ಬಾಹ್ಯಾಕಾಶ ಸಂಬಂಧಿ ಚಟುವಟಿಕೆಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡುವ ಮೂಲಕ ಭಾರತದ ಖಾಸಗಿ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡುವಲ್ಲಿ ಇಸ್ರೋ ವಹಿಸಿರುವ ನಾಯಕತ್ವದ ಪಾತ್ರವನ್ನು ಅವರು ಶ್ಲಾಘಿಸಿದರು. “ಅನೇಕ ವರ್ಷಗಳಿಂದ ಜ್ಞಾನದ ನೆಲೆ ಮತ್ತು ಬಾಹ್ಯಾಕಾಶ ಸ್ವತ್ತುಗಳನ್ನು ನಿರ್ಮಿಸುವಲ್ಲಿ ಇಸ್ರೋ ಹೊಂದಿರುವ ಅಭೂತಪೂರ್ವ ದಾಖಲೆಯನ್ನು ಖಾಸಗಿ ಪಾಲುದಾರರ ಭಾಗವಹಿಸುವಿಕೆಯೊಂದಿಗೆ ರಾಷ್ಟ್ರಕ್ಕೆ ಹೆಚ್ಚಿನ ಪ್ರಯೋಜನಗಳನ್ನು ನೀಡಲು ಬಳಸಿಕೊಳ್ಳುವ ಖಾತ್ರಿಯಿದೆ” ಎಂದು ಅವರು ಹೇಳಿದರು.
ಇಸ್ರೋವನ್ನು ರಾಷ್ಟ್ರದ ಹೆಮ್ಮೆ ಎಂದು ಬಣ್ಣಿಸಿದ ಉಪ ರಾಷ್ಟ್ರಪತಿಯವರು, ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿನ ಅತ್ಯುತ್ತಮ ಸಾಧನೆಗಳಿಗಾಗಿ ಸಂಸ್ಥೆಯು ಜಾಗತಿಕವಾಗಿ ಗೌರವ ಪಡೆದಿದೆ ಎಂದು ಹೇಳಿದರು. “ವಿವಿಧ ಉದ್ದೇಶಗಳಿಗಾಗಿ 100 ಕ್ಕೂ ಹೆಚ್ಚು ಅತ್ಯಾಧುನಿಕ ಉಪಗ್ರಹಗಳನ್ನು ನಿರ್ಮಿಸುವ ಮೂಲಕ ಮತ್ತು ಪಿಎಸ್‌ಎಲ್‌ವಿ ಮತ್ತು ಜಿಎಸ್‌ಎಲ್‌ವಿಯಂತಹ ಉಡಾವಣಾ ವಾಹನ ವ್ಯವಸ್ಥೆಗಳನ್ನು ಸ್ಥಾಪಿಸುವ ಮೂಲಕ ಇಸ್ರೋ ರಾಷ್ಟ್ರದ ಪ್ರಗತಿಗೆ ಅಮೂಲ್ಯ ಕೊಡುಗೆ ನೀಡಿದೆ” ಎಂದು ಅವರು ಹೇಳಿದರು.
ಕಾರ್ಯಾಚರಣೆಯ ಉಪಗ್ರಹಗಳು, ವೈಜ್ಞಾನಿಕ ಕಾರ್ಯಾಚರಣೆಗಳು, ಪರಿಶೋಧನಾ ಕಾರ್ಯಾಚರಣೆಗಳು ಮತ್ತು ತೀವ್ರ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ಒದಗಿಸುವ ತನ್ನ ಧ್ಯೇಯವನ್ನು ಪಟ್ಟುಬಿಡದೆ ಅನುಸರಿಸುತ್ತಿರುವ ಯುಆರ್ ರಾವ್ ಉಪಗ್ರಹ ಕೇಂದ್ರವನ್ನು ಶ್ಲಾಘಿಸಿದ ಅವರು, ಇಸ್ರೋದ 53 ಕಾರ್ಯಾಚರಣಾ ಉಪಗ್ರಹಗಳು ವಿಶೇಷವಾಗಿ ದೂರಸಂಪರ್ಕ, ಪ್ರಸಾರ, ಹವಾಮಾನ, ದೂರ ಸಂವೇದಿ, ನ್ಯಾವಿಗೇಷನ್ ಮತ್ತು ಬಾಹ್ಯಾಕಾಶ ವಿಜ್ಞಾನದಂತಹ ಕ್ಷೇತ್ರಗಳಲ್ಲಿ ರಾಷ್ಟ್ರಕ್ಕೆ ಅಮೂಲ್ಯವಾದ ಸೇವೆಗಳನ್ನು ಒದಗಿಸುತ್ತಿವೆ ಎಂದರು.
ಉಪಗ್ರಹ ಆಧಾರಿತ ದೂರ ಸಂವೇದಿ ಸೇವೆಗಳ ಕ್ಷೇತ್ರದಲ್ಲಿ ಭಾರತವು ವಿಶ್ವದಲ್ಲಿ ಮುಂಚೂಣಿಯಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿದ ಅವರು, ಕೃಷಿ, ಅರಣ್ಯ, ಸಾಗರಶಾಸ್ತ್ರ, ಮೂಲಸೌಕರ್ಯ ಯೋಜನೆ, ಇಂಧನ ಮತ್ತು ಪರಿಸರ, ಜಲ ಸಂಪನ್ಮೂಲ ಮತ್ತು ಅಭಿವೃದ್ಧಿ ಯೋಜನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದಕ್ಷತೆಯನ್ನು ಹೆಚ್ಚಿಸಲು ಮತ್ತು ಅಭಿವೃದ್ಧಿಯ ಅಗತ್ಯಗಳನ್ನು ಪೂರೈಸಲು ದೂರ ಸಂವೇದಿ ಉಪಗ್ರಹ ಡೇಟಾ ಮತ್ತು ಚಿತ್ರಗಳು ಅನಿವಾರ್ಯ ಸಾಧನಗಳಾಗಿವೆ ಎಂದರು.
ವಿವಿಧ ಉಪಗ್ರಹಗಳ ಹವಾಮಾನ ಸಂಬಂಧಿ ದತ್ತಾಂಶವು ಅನಾವೃಷ್ಟಿ, ಅತಿವೃಷ್ಟಿ ಮತ್ತು ಚಂಡಮಾರುತಗಳು ಸೇರಿದಂತೆ ಹವಾಮಾನದ ಮುನ್ಸೂಚನೆಯನ್ನು ಸುಗಮಗೊಳಿಸುತ್ತದೆ ಎಂದು ಹೇಳಿದ ಉಪ ರಾಷ್ಟ್ರಪತಿಯವರು, ಇಸ್ರೋ ಅಗತ್ಯವಿರುವ ಡೇಟಾವನ್ನು ತಲುಪಿಸಲು ಸುಧಾರಿತ ಆನ್-ಬೋರ್ಡ್ ವ್ಯವಸ್ಥೆ ಕಲ್ಪಿಸುವುದನ್ನು ಮುಂದುವರಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. “ಇದು ಹವಾಮಾನ ಮುನ್ಸೂಚನೆಯನ್ನು ಇನ್ನಷ್ಟು ಸುಧಾರಿಸುತ್ತದೆ, ಇದು ರೈತರಿಗೆ ಸಹಾಯ ಮಾಡುತ್ತದೆ ಮತ್ತು ಮತ್ತು ನೈಸರ್ಗಿಕ ವಿಕೋಪಗಳನ್ನು ಉತ್ತಮವಾಗಿ ನಿರ್ವಹಿಸಲು ನಮಗೆ ಅನುವು ಮಾಡಿಕೊಡುತ್ತದೆ” ಎಂದು ಅವರು ಹೇಳಿದರು.
ಯು ಆರ್ ರಾವ್ ಉಪಗ್ರಹ ಕೇಂದ್ರವು ಮುಂದಿನ ಪೀಳಿಗೆಯ ಐಆರ್‌ಎನ್‌ಎಸ್‌ಎಸ್ ಉಪಗ್ರಹಗಳಾದ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಗಾಗಿ ಚಂದ್ರಯಾನ-3 ಮತ್ತು ಸೂರ್ಯನ ಬಗ್ಗೆ ಅಧ್ಯಯನ ಮಾಡಲು ಆದಿತ್ಯ-ಎಲ್ 1 ಮಿಷನ್ ಕುರಿತು ಕೆಲಸ ಮಾಡುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಯು ಆರ್ ರಾವ್ ಉಪಗ್ರಹ ಕೇಂದ್ರಕ್ಕೆ ತಮ್ಮ ಭೇಟಿಯು “ನಿಜವಾಗಿಯೂ ಸ್ಮರಣೀಯವಾದುದು” ಎಂದು ಉಪ ರಾಷ್ಟ್ರಪತಿಯವರು, ಶುಕ್ರ ಆರ್ಬಿಟರ್ ಮಿಷನ್ ಮತ್ತು ಮಂಗಳ ಗ್ರಹದ ಫಾಲೋ-ಆನ್ ಮಿಷನ್ ಅನ್ನು ಒಳಗೊಂಡಿರುವ ಅದರ ಭವಿಷ್ಯದ ಯೋಜನೆಗಳ ಬಗ್ಗೆ ಪ್ರಭಾವಿತರಾಗಿರುವುದಾಗಿ ತಿಳಿಸಿದರು.
ಕರ್ನಾಟಕ ರಾಜ್ಯಪಾಲರಾದ ಶ್ರೀ ತಾವರಚಂದ್ ಗೆಹ್ಲೋಟ್, ಇಸ್ರೋ ಅಧ್ಯಕ್ಷ ಡಾ ಕೆ ಶಿವನ್, ಯುಆರ್ ರಾವ್ ಉಪಗ್ರಹ ಕೇಂದ್ರದ (ಯುಎಸ್‌ಆರ್‌ಸಿ) ನಿರ್ದೇಶಕ ಶ್ರೀ ಶಂಕರನ್, ಇಸ್ರೋದ ವೈಜ್ಞಾನಿಕ ಕಾರ್ಯದರ್ಶಿ ಶ್ರೀ ಉಮಾಮಹೇಶ್ವರನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……