ಬೆಂಗಳೂರು: ಕಳೆದ ಹಲವು ದಿನಗಳಿಂದ ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇನ್ನೂ ಮೂರು / ನಾಲ್ಕು ದಿನಗಳ ಕಾಲ ಮಳೆ ಮುಂದುವರೆಯಲಿದ್ದು, ರಾಜ್ಯದ 16 ಜಿಲ್ಲೆಗಳಲ್ಲಿ ಯೆಲ್ಲೂ ಅಲರ್ಟ್ ಘೋಷಿಸಲಾಗಿದೆ.
ಅರಬ್ಬಿ ಸಮುದ್ರದ ಮೇಲ್ಮೈನಲ್ಲಿ ಎದ್ದಿರುವ ಸುಳಿಗಾಳಿ ಮತ್ತು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಮಳೆ ಅಬ್ಬರ ಹೆಚ್ಚಾಗಿದ್ದು, ಪ್ರವಾಹವಾಗುತ್ತಿದೆ.
ಇನ್ನು ರಾಜ್ಯದ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದೆ.
ಅಲ್ಲದೆ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ,ಬೆಳಗಾವಿ, ಬಾಗಲಕೋಟೆ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿಯೂ ಇನ್ನೆರಡು ದಿನ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿಯಲ್ಲಿ ಗಂಟೆಗೆ 40 ರಿಂದ 60 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರು ಮತ್ತು ಗ್ರಾಮಾಂತರದಲ್ಲಿ ಕಳೆದ ನಾಲ್ಕೈದು ದಿನಗಳಿಂದ ದಿನ ಪೂರ್ತಿ ಜಿಟಿಜಿಟಿ ಮಳೆ, ಶೀತಗಾಳಿ, ಚಳಿ ಮತ್ತು ಮೋಡ ಕವಿದ ವಾತಾವರಣ ಆವರಿಸಿದೆ. ಮಧ್ಯೆ ಮಧ್ಯೆ ಧಾರಕಾರ ಮಳೆ ಸುರಿಯುತ್ತಿದೆ. ಸೂರ್ಯನನ್ನೇ ಕಾಣಲಾಗರ ನಗರದ ಜನರು ಮೈಕೊರೆಯುವ ಚಳಿಯಲ್ಲಿ ತಮ್ಮ ನೌಕರಿಗೆ ತೆರಳುತ್ತಿದ್ದಾರೆ.
ಶಾಲೆಗಳಿಗೆ ರಜೆ: ಎಡೆಬಿಡದೆ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶಾಲೆಗಳಿಗೆ ನ.19 ಮತ್ತು 20 ರಂದು ರಜೆ ಘೋಷಿಸುವಂತೆ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಎಂ.ಜಯರಾಮರೆಡ್ಡಿ ಮೌಕಿಕವಾಗಿ ಸೂಚಿಸಿದ್ದಾರೆ. ಈ ರಜೆಯನ್ನು ಉಳಿದ ರಜೆ ದಿನಗಳಲ್ಲಿ ಸರಿ ದೂಗಿಸಿಕೊಳ್ಳುವಂತೆ ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……