ದೊಡ್ಡಬಳ್ಳಾಪುರ: ತಾಲ್ಲೂಕಿನ ಚಿಗರೇನಹಳ್ಳಿಯಲ್ಲಿನ ಎಂಎಸ್ಜಿಪಿ ಕಸ ವಿಲೇವಾರಿ ಘಟಕಕ್ಕೆ ಬಿಬಿಎಂಪಿ ವ್ಯಾಪ್ತಿಯಿಂದ ಬರುತ್ತಿರುವ ಲಾರಿಗಳನ್ನು ತಡೆದು ಸ್ಥಳೀಯ ಗ್ರಾಮಸ್ಥರು ಗುರುವಾರ ಧರಣಿ ಆರಂಭಿಸಿರುವುದರಿಂದ ಕಸ ತುಂಬಿದ ಲಾರಿಗಳು ದಾಬಸ್ಪೇಟೆ- ದೊಡ್ಡಬಳ್ಳಾಪುರ ಹೆದ್ದಾರಿಯುದ್ದಕ್ಕು ಸಾಲುಗಟ್ಟಿನಿಂತಿವೆ.
ಧರಣಿ ನಿರತ ಸ್ಥಳಕ್ಕೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರವಿಕುಮಾರ್ ಭೇಟಿ ನೀಡಿ ನಡೆಸಿದ ಮಾತುಕತೆಗೆ ಧರಣಿ ನಿರತರು ಮನ್ನಣೆ ನೀಡದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಬರಿಗೈಯಲ್ಲಿ ಹಿಂದಿರುಗಿದ್ದಾರೆ.
ಈ ಹಿಂದೆ ಎಂಎಸ್ ಜಿಪಿ ಘಟಕದಲ್ಲಿನ ಅವೈಜ್ಞಾನಿಕ ಕಸ ವಿಲೇವಾರಿ ವಿರುದ್ಧ ಧರಣಿ ನಡೆಸಿದ್ದ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ನೀಡಿದ್ದ ಎಲ್ಲಾ ಭರವಸೆಗಳು ಸುಳ್ಳಾಗಿವೆ. ಬೆಂಗಳೂರು ನಗರದಲ್ಲಿ ಕಸದ ರಾಶಿ ಹೆಚ್ಚಾದಾಗ ಹೋರಾಟಗಾರರ ಎಲ್ಲಾ ಮಾತುಗಳನ್ನು ಕೇಳಿ ಭರವಸೆ ನೀಡುವ ಅಧಿಕಾರಿ ಮತ್ತೆ ಮರೆಯುತ್ತ ಅದೇ ಹಳೇ ಚಾಳಿ ಮುಂದುವರೆಸಿ ಕಸದ ರಾಶಿ ತಂದು ಹಾಕುತ್ತಿರುವುದು ಮುಂದುವರೆದೇ ಇದೆ. ಹೀಗಾಗಿ ಬಿಬಿಎಂಪಿ ವ್ಯಾಪ್ತಿಯಿಂದ ಇಲ್ಲಿನ ಕಸ ವಿಲೇವಾರಿ ಘಟಕಕ್ಕೆ ಲಾರಿಗಳು ಕಸ ತಂದು ಸುರಿಯುವುದನ್ನು ನಿಲ್ಲಿಸದ ಹೊರತು ನಮ್ಮ ಧರಣಿಯನ್ನು ಹಿಂದಕ್ಕೆ ಪಡೆಯುವ ಅಥವಾ ಅಧಿಕಾರಿಗಳೊಂದಿಗೆ ಯಾವುದೇ ರೀತಿಯ ಮಾತುಕತೆ ನಡೆಸಲು ಸಿದ್ದರಿಲ್ಲ ಎಂದು ಧರಣಿಯಲ್ಲಿ ಭಾಗವಹಿಸಿರುವ ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಲಿಂಗಯ್ಯ, ಸಕ್ಕರೆಗೊಲ್ಲಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಗೀತಾ ಗೋವಿಂದರಾಜು, ನವ ಬೆಂಗಳೂರು ಹೋರಾಟ ಸಮಿತಿ ಗೌರವಾಧ್ಯಕ್ಷ ಕೆ.ವಿ.ಸತ್ಯಪ್ರಕಾಶ್ ತಿಳಿಸಿದರು.
ಧರಣಿ ಆರಂಭಕ್ಕು ಮುನ್ನ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾಡಳಿತದ ಎಲ್ಲಾ ಹಂತದ ಅಧಿಕಾರಿಗಳಿಗು ಇಲ್ಲಿನ ಕಸದ ಸಮಸ್ಯೆ ಕುರಿತು ಮನವಿಗಳನ್ನು ಸಲ್ಲಿಸಲಾಗಿತ್ತು. ಆದರೆ ನಮ್ಮ ಯಾವುದೇ ಮನವಿಗೂ ಸ್ಪಂಧಿಸದ ಅಧಿಕಾರಿಗಳು ಕಸದ ಲಾರಿಗಳನ್ನು ತಡೆದು ಧರಣಿ ಆರಂಭಿಸುತ್ತಿದ್ದಂತೆ ಹೋರಾಟಗಾರರಿಗೆ ಸುಳ್ಳು ಭರವಸೆಗಳನ್ನು ನೀಡಿ ಹೋರಾಟದ ದಿಕ್ಕುತಪ್ಪಿಸುವ ಹುನ್ನಾರನಡೆಸುತ್ತಿದ್ದಾರೆ. ನಮ್ಮ ಬದುಕಿನ ಅಳಿವು ಉಳಿವಿಗಾಗಿ ನಡೆಸುತ್ತಿರುವ ಹೋರಾಟವನ್ನು ಹತ್ತಿಕ್ಕು ಪ್ರಯತ್ನ ಮಾಡಿದರೆ ಅದಕ್ಕೆ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬಿಬಿಎಂಪಿ ಅಥವಾ ಜಿಲ್ಲಾಡಳಿತದೊಂದಿಗೆ ನಡೆಸಿರುವ ಎಲ್ಲಾ ಮಾತುಕತೆಗಳು ಸುಳ್ಳಾಗಿರುವ ಹಿನ್ನೆಲೆಯಲ್ಲಿ ಈಗ ನಮ್ಮ ಏಕೈಕ ಬೇಡಿಕೆ ಕಸ ಇಲ್ಲಿಗೆ ಬರುವುದು ನಿಲ್ಲಬೇಕು ಎನ್ನುವುದು ಮಾತ್ರ ಎಂದರು.
ಧರಣಿಯಲ್ಲಿ ಎಂಎಸ್ಜಿಪಿ ಕಸ ವಿಲೇವಾರಿ ಘಟಕದ ಸುತ್ತಮುತ್ತಲಿನ ಗ್ರಾಮ ಪಂಚಾಯಿತಿ ಸದಸ್ಯರಾದ ಗಂಗಹನುಮಯ್ಯ, ಕೃಷ್ಣಮೂರ್ತಿ, ಹನುಮಂತೇಗೌಡ, ಶ್ರೀಲತಾ, ಪ್ರತಿಮಾಉಮೇಶ್, ರವಿಕುಮಾರ್, ರಾಜಣ್ಣ, ರಾಮಲಕ್ಷ್ಮಮ್ಮ, ಪ್ರಸನ್ನ ಸೇರಿದಂತೆ ಗ್ರಾಮಸ್ಥರು ಧರಣಿಯಲ್ಲಿ ಭಾಗವಹಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……