ದೊಡ್ಡಬಳ್ಳಾಪುರ: ಶ್ರೀಮಂತರು ಹಾಗೂ ಬಡವರ ಮಧ್ಯೆ ಅಂತರ ಕಡಿಮೆ ಮಾಡಬೇಕಿದ್ದು, ಉಳ್ಳವರು ಇಲ್ಲದವರಿಗೆ ನೀಡಬೇಕಿದೆ.ದೇಶದ ಪ್ರಗತಿಗೆ ತೆರಿಗೆ ಪದ್ದತಿಯ ಪಾತ್ರ ಮಹತ್ವದ್ದಾಗಿದ್ದು, ಇಲ್ಲವಾದಲ್ಲಿ ಯಾವುದೇ ರಾಜಕಾರಣವೂ ಸಫಲವಾಗುವುದಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ನಗರದ ಬಸವ ಭವನದಲ್ಲಿ ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘದ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ವತಿಯಿಂದ ನಡೆದ ರಾಷ್ಟ್ರೀಯ ತೆರಿಗೆ ಸಲಹೆಗಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತೆರಿಗೆ ಪದ್ದತಿ ಹೊಸದಲ್ಲ. ಇದು ಶತಮಾನಗಳಿಂದಲೂ ಇದೆ. ಬಿಜ್ಜಳನ ಕಾಲದಲ್ಲಿ ಉತ್ತಮ ಅರ್ಥ ಸಚಿವರಾಗಿದ್ದ ಬಸವಣ್ಣನವರು. ಹಣ ಹೇಗೆ ವಿನಿಯೋಗಿಸಬೇಕು ಎನ್ನುವುದನ್ನು ತಿಳಿಸಿದ್ದರು. ಗಾಂಧೀಜಿ ಶೇ.70 ತೆರಿಗೆ ಹಾಕಿದರೂ ಸಹ ನನ್ನ ವಿರೋಧವಿಲ್ಲ ಎಂದಿದ್ದರು. ತೆರಿಗೆ ಪದ್ದತಿ ಮಾಡಿರುವುದೇ ಉಳ್ಲ್ಳವರು ಮತ್ತು ಇಲ್ಲದವರ ನಡುವಿನ ಅಂತರ ಕಡಿಮೆ ಮಾಡುವುದೇ ಆಗಿದೆ.ತೆರಿಗೆ ಬಲವಂತಾಗಿರಬಾದರು. ಕೆಲವು ಬಾರಿ ಅಮಾಯಕರಿಗೂ ತೆರಿಗೆ ಹೊರೆಯಾಗಬಹುದಾಗಿದೆ. ದೇಶದ ತೆರಿಗೆ ವ್ಯವಸ್ಥೆ ಸದೃಢವಾಗದಿದ್ದರೆ ಯಾವುದೇ ಯೋಜನೆಗಳು ಕಾರ್ಯಗತವಾಗುವುದಿಲ್ಲ. ಎಲ್ಲರೂ ತೆರಿಗೆ ಕಟ್ಟುವಂತಾದರೆ ತೆರಿಗೆಯ ಹಂತಗಳನ್ನು ಕಡಿಮೆ ಮಾಡಬಹುದಾಗಿದೆ ಎಂದರು.
ತೆರಿಗೆ ಸಲಹೆಗಾರರೇ ತನಿಖೆ ಮತ್ತು ಸಮಾಲೋಚಕರಾಗುವುದು ಸರಿಯಲ್ಲ. ನಿರ್ಧಾರ ಸಹ ಒಬ್ಬರೇ ಮಾಡುವುದು ಸರಿಯಲ್ಲ. ನಿಮ್ಮ ಸಲಹೆ ಇದ್ದು, ಅಕಾರಿಗಳು ಕ್ರಮ ಕೈಗೊಳ್ಳಲಿ. ಈಗಾಗಲೇ ತೆರಿಗೆದಾರರು ನೇರವಾಗಿ ತೆರಿಗೆ ಪಾವತಿಸುವಂತೆ ತೆರಿಗೆ ಸರಳೀಕರಣ ಮಾಡಲಾಗುತ್ತಿದೆ. ಆದರೂ ಸಹ ತೆರಿಗೆ ಸಲಹೆಗಾರರ ಅಗತ್ಯತೆ ಇದೆ. ಯಾವುದೇ ಸರ್ಕಾರಗಳು ವ್ಯವಸ್ಥಿತವಾಗಿ ನಡೆಯಬೇಕಾದರೆ ತೆರಿಗೆ ಸಂಗ್ರಹಣೆ ಕಾರ್ಯ ಪ್ರಮುಖವಾಗಿದೆ. ಈ ದಿಸೆಯಲ್ಲಿ ತೆರಿಗೆ ಸಲಹೆಗಾರರ ಪಾತ್ರ ಮಹತ್ವದ್ದಾಗಿದ್ದು, ದೇಶದಲ್ಲಿ ಹೆಚ್ಚಿನ ಮಂದಿ ತೆರಿಗೆ ಕಟ್ಟುವವರಾದರೆ ತೆರಿಗೆಯ ಪ್ರಮಾಣ ಸಹ ಕಡಿಮೆ ಮಾಡಬಹುದಾಗಿದೆ. ಕಾಲಕ್ಕನುಗುಣವಾಗಿ ಬದಲಾಗುವ ತೆರಿಗೆ ವ್ಯವಸ್ಥೆ ಕಾನೂನುಗಳು ಆಳ ಆಧ್ಯಯನ ತೆರಿಗೆ ಸಲಹೆಗಾರರಿಗೆ ಇರಬೇಕು. ಸಾಮಾಜಿಕ ಕಳಕಳಿಯಿಂದ ತೆರಿಗೆದಾರರಿಗೆ ಅಗತ್ಯ ಮಾಹಿತಿ ನೀಡಿ ತೆರಿಗೆ ಸೋರಿಕೆಯಾಗದಂತೆ ನೋಡಿಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.
ಪರಿಣಿತರು ಲೆಕ್ಕಪರಿಶೋಧಕರಾಗಿರಬೇಕಿದೆ; ಬಾಂಬೆ ಟ್ರಸ್ಟ್ ಕಾಯ್ದೆ ಉಳಿಸಿಕೊಂಡಿಲ್ಲದಿರುವುದು ದುರುದೃಷ್ಟಕರವಾಗಿದೆ. ಈ ಬಗ್ಗೆ ತಮಗಾಗಿರುವ ತೊಂದರೆ ಬಗ್ಗೆ ನಮ್ಮ ಸಹಮತವಿದೆ. ಕಾನೂನು ಮಂತ್ರಿಯಾಗಿ, ರಾಜ್ಯಕ್ಕೆ ಟ್ರಸ್ಟ್ ಕಾಯ್ದೆಯ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಆದರೆ ಸಂಘ ಸಂಸ್ಥೆಗಳ ಲೆಕ್ಕಪತ್ಪರಿಶೋಧನೆ ತೆರಿಗೆ ಸಲಹೆಗಾರರೇ ಮಾಡುವುದು ಸಮ್ಮತವಲ್ಲ ಎಂದು ನಮ್ಮ ಭಾವನೆ. ಸಂಘಸಂಸ್ಥೆಗಳ ಲೆಕ್ಕ ಪರಿಶೋಧನೆ ಪರಿಣಿತರೇ ಮಾಡುವುದು ಸೂಕ್ತವಾಗಿದೆ. ಪ್ರತಿದಿನವೂ ಕಲಿಕೆಯ ದಿನವಾಗಬೇಕಿದ್ದು, ತೆರಿಗೆ ಸಲಹೆಗಾರರಿಗೂ ಅನ್ವಯಿಸುತ್ತದೆ. ಅಮಾಯಕರಿಗೆ ತೆರಿಗೆ ಬಗ್ಗೆ ಗೊತ್ತಿಲ್ಲದೇ ದಂಡ ಕಟ್ಟುವ ಸಂದರ್ಭಗಳು ಎದುರಾಗಿದ್ದು, ಇಂತಹವರನ್ನು ನೀವು ರಕ್ಷಿಸಬೇಕಿದೆ. ಟ್ರಸ್ಟ್ ಕಾಯ್ದೆಗೆ ತಿದ್ದುಪಡಿ, ಸರಕು ಸೇವಾ ತೆರಿಗೆಯಲ್ಲಿ (ಜಿಎಸ್‍ಟಿ) ಕೆಲವು ಮಾರಾಟ ವಸ್ತುಗಳ ತೆರಿಗೆ ಬಗ್ಗೆ ರಾಜ್ಯಗಳಿಗೆ ಇರುವ ಗೊಂದಲಗಳ ಕುರಿತು ಚರ್ಚೆಗಳು ನಡೆಯುತ್ತಿದ್ದು, ಶೀಘ್ರವೇ ಸಮಸ್ಯೆಗಳು ಬಗೆಹರಿಯಲಿವೆ ಎಂದರು.
ಶಾಸಕ ಟಿ.ವೆಂಕಟರಮಣಯ್ಯ ಸ್ಮರಣೆ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ಸರ್ಕಾರ ಹಾಗೂ ದೇಶದ ಪ್ರಜೆಗಳ ಮಧ್ಯೆ ಕೊಂಡಿಯಂತೆ ಇರುವ ತೆರಿಗೆ ಸಲಹೆಗಾರರು ಹಾಗೂ ಲೆಕ್ಕ ಪರಿಶೋಧಕರು ತಮ್ಮ ಹೊಣೆಗಾರಿಕೆಯನ್ನು ಕಾನೂನಿನ ಅಡಿಯಲ್ಲಿ ನಿರ್ವಹಿಸಬೇಕಿದೆ. ತೆರಿಗೆಯಿಂದಲೇ ಸರ್ಕಾರದ ಕೆಲಸಗಳು ನಡೆಯಬೇಕಿದ್ದು, ದೊಡ್ಡಬಳ್ಳಾಪುರ ತಾಲೂಕಿನಲ್ಲಿ 62ರಿಂದ 64 ಕೋಟಿ ರೂ ಜಿಎಸ್‍ಟಿ ಸಂಗ್ರಹವಾಗುತ್ತಿದೆ ಎಂದ ಅವರು ಕೋಲಾರ ಜಿಲ್ಲೆಗೆ ನೀಡಿದಂತೆ ತಾಲೂಕಿಗೆ ಶುದ್ದೀಕರಿಸಿದ ತ್ಯಾಜ್ಯ ನೀರು ಹರಿಸುವ ಯೋಜನೆಗೆ ಒತ್ತು ನೀಡಬೇಕಿದೆ ಎಂದು ಸಚಿವರಲ್ಲಿ ಮನವಿ ಮಾಡಿದರು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಚುನಾವಣಾ ನೀತಿ ಸಂಹಿತೆ ಇರುವುದರಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ರಾಜ್ಯ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಎಸ್.ನಂಜುಂಡಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.
ಚಾಮರಾಜನಗರದ ವೆಂಕಟೇಶ್ ಅವರಿಗೆ ವೃಕ್ಷಮಿತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಾಜ್ಯದ ಹಿರಿಯ ತೆರಿಗೆ ಸಲಹೆಗಾರರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ನಗರಸಭೆ ಅಧ್ಯಕ್ಷೆ ಸುಧಾ ಲಕ್ಷ್ಮೀನಾರಾಯಣ, ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚವರಿ ಆಯುಕ್ತರಾದ ಬಿ.ವಿ.ಮುರಳಿ ಕೃಷ್ಣ, ಎ.ವಿ.ಚೇತನ್, ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘದ ಕಾರ್ಯದರ್ಶಿ ವಿಷ್ಣುತೀರ್ಥ ಜಮಖಂಡಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಪಿ.ಲಕ್ಷ್ಮೀನಾರಾಯಣ, ಹಿರಿಯ ತೆರಿಗೆ ಸಲಹೆಗಾರರಾದ ಎಸ್.ಡಿ.ಪರ್ವತಯ್ಯ, ತೆರಿಗೆ ಸಲಹೆಗಾರರ ಸಂಘದ ಜಿಲ್ಲಾ ಕಾರ್ಯದರ್ಶಿ ಎಸ್.ವಿ.ಎನ್.ಪ್ರಸಾದ್, ಉಪಾಧ್ಯಕ್ಷ ನಾರಾಯಣಸ್ವಾಮಿ, ನಿರ್ದೇಶಕರಾದ ಎ.ಎನ್.ಜಗದೀಶ್ ಸೇರಿದಂತೆ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……