ದೊಡ್ಡಬಳ್ಳಾಪುರ: ತಾಲ್ಲೂಕಿನ ಚಿಗೇರನಹಳ್ಳಿಯ ಎಂಎಸ್ಜಿಪಿ ಕಸ ವಿಲೇವಾರಿ ಘಟಕದ ವಿರುದ್ದ ನವ ಬೆಂಗಳೂರು ಹೋರಾಟ ಸಮಿತಿಯು ಭಕ್ತರಹಳ್ಳಿ ಗ್ರಾಮ ಪಂಚಾಯತಿವತಿಯಿಂದ ನಡೆಸುತ್ತಿರುವ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಶುಕ್ರವಾರ ಇಡೀ ದಿನ ಬಿಬಿಎಂಪಿ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಧರಣಿನಿರತರೊಂದಿಗೆ ನಡೆಸಿದ ಎಲ್ಲಾ ಮಾತುಕತೆಗಳು ವಿಫಲವಾಗಿದ್ದು, ಬೆಂಗಳೂರಿನಿಂದ ಕಸ ತುಂಬಿದ ಯಾವುದೇ ಲಾರಿಗಳನ್ನು ಎಂಎಸ್ಜಿಪಿ ಕಸ ವಿಲೇವಾರಿ ಘಟಕ ಪ್ರವೇಶ ಮಾಡಲು ಅವಕಾಶ ನೀಡಿಲ್ಲ.
ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋನವಂಶಿ ಕೃಷ್ಣ ಅವರು ಧರಣಿ ನಿರತ ಗ್ರಾಮಸ್ಥರೊಂದಿಗೆ ಹಲವುವೇಳೆ ಸುತ್ತಿನ ಮಾತುಕತೆಗಳನ್ನು ನಡೆಸಿದರು ಸಹ ಕಸ ತುಂಬಿದ ಲಾರಿಗಳು ಇಲ್ಲಿಗೆ ಬರುವುದನ್ನು ನಿಲ್ಲಿಸುವವರೆಗೂ ಯಾವುದೇ ಕಾರಣಕ್ಕು ರಾತ್ರಿ ಹಗಲು ನಿರಂತರವಾಗಿ ನಡೆಸುತ್ತಿರುವ ಧರಣಿಯನ್ನು ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಅಧಿಕಾರಿಗಳಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.
ಧರಣಿ ನಿರತರೊಂದಿಗೆ ಕಸ ವಿಲೇವಾರಿ ಘಟಕದ ಸುತ್ತಮುತ್ತಲಿನ ಗ್ರಾಮಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸೇರಿಕೊಳ್ಳುತ್ತಿದ್ದಾರೆ.
ಚಿಗೇರನಹಳ್ಳಿ ಕಸ ವಿಲೇವಾರಿ ಘಕದ ಮುಖ್ಯ ರಸ್ತೆಯಲ್ಲಿಯೇ ಧರಣಿ ನಡೆಸುತ್ತಿರುವ ಗ್ರಾಮಸ್ಥರು ಅಡುಗೆಯನ್ನು ಸಹ ಸ್ಥಳದಲ್ಲೇ ಸಿದ್ದಮಾಡುತ್ತಿದ್ದಾರೆ. ಕಸ ವಿಲೇವಾರಿ ಘಕಕ್ಕೆ ಬೆಂಗಳೂರಿನಿಂದ ಕಸ ತುಂಬಿಕೊಂಡು ಬರುತ್ತಿರುವ ಲಾರಿಗಳು ದಾಬಸ್ ಪೇಟೆ ಸುತ್ತಲಿನ ಗ್ರಾಮಗಳ ಸಮೀಪದಲ್ಲೇ ನಿಲ್ಲಿಸಲಾಗಿದ್ದು ಕಸ ತುಂಬಿರುವ ಲಾರಿಗಳಿಂದ ಹೊರ ಬರುತ್ತಿರುವ ತ್ಯಾಜ್ಯ ನೀರು ದುರ್ನಾತ ಬೀರುತ್ತಿದ್ದು ಲಾರಿಗಳ ಸಮೀಪ ಮೂಗುಮುಚ್ಚಿಕೊಂಡು ಓಡಾಡುವಂತಾಗಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.
ಧರಣಿ ಹತ್ತಿಕ್ಕಲು ಅಧಿಕಾರಿಗಳ ಯತ್ನ: ಬಿಬಿಎಂಪಿ ವ್ಯಾಪ್ತಿಯಿಂದ ಕಸದ ಲಾರಿಗಳು ಬಾರದಂತೆ ಸ್ಥಳೀಯ ಗ್ರಾಮಸ್ಥರು ನಡೆಸುತ್ತಿರುವ ಧರಣಿಯನ್ನು ಹತ್ತಿಕ್ಕಲು ಅಧಿಕಾರಿಗಳು ಪೊಲೀಸರ ಮೂಲಕ ಹುನ್ನಾರ ನಡೆಸುತ್ತಿದ್ದಾರೆ ಎಂದು ಧರಣಿ ನಿರತರು ದೂರಿದ್ದಾರೆ.
ಶಾಂತಿಯುತವಾಗಿ ಗಾಂಧೀಜಿ, ಅಂಬೇಡ್ಕರ್ ಮಾರ್ಗದಲ್ಲಿ ನಡೆಸುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿಯೇ ಅಧಿಕಾರಿಗಳ ಸೂಚನೆಯಂತೆ ಪೊಲೀಸರು ಧರಣಿನಿರತರೊಂದಿಗೆ ವಾಗ್ವಾದ ನಡೆಸಿ ಪ್ರಚೋದಿಸುತ್ತಿದ್ದಾರೆ. ನಮ್ಮ ನ್ಯಾಯಯುತ ಬೇಡಿಕೆ ಈಡೇರಿಕೆಗಾಗಿ ನಡೆಸುತ್ತಿರುವ ಶಾಂತಿಯುತ ಧರಣಿಗೆ ಅಡ್ಡಿಬಂದರೆ ಅದಕ್ಕೆ ಪೊಲೀಸರೇ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಂಘಟನೆಗಳ ವಿರುದ್ಧ ಬೇಸರ: ತ್ಯಾಜ್ಯ ತಾಲೂಕಿಗೆ ಬರದಂತೆ ತಡೆಗಟ್ಟುವ ಸಲುವಾಗಿ ಗ್ರಾಮಸ್ಥರು ಧರಣಿ ನಡೆಸುತ್ತಿದ್ದರೆ. ತಾಲೂಕಿನಲ್ಲಿರುವ ಸಂಘಟನೆಗಳು ನೆರವಿಗೆ ಬಾರದೆ ಇರುವುದು ಹಳ್ಳಿಗರ ಬೇಸರಕ್ಕೆ ಕಾರಣವಾಗಿದ್ದು, ಸಂಘಟನೆಗಳಿಗೆ ಹಳ್ಳಿಗರ ಕಷ್ಟ ಅರ್ಥವಾಗದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……