ದೊಡ್ಡಬಳ್ಳಾಪುರ: ತಾಲೂಕಿನ ಎಂಎಸ್ ಜಿಪಿ ಘಟಕಕ್ಕೆ ಬಿಬಿಎಂಪಿ ತ್ಯಾಜ್ಯ ನಿಲ್ಲಿಸದಿದ್ದರೆ ಪ್ರತಿಭಟನೆಯ ಮುಂದಾಳತ್ವ ವಹಿಸಬೇಕಾಗುವುದೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ತಾಲೂಕಿನ ಚಿಗರೇನಹಳ್ಳಿಯ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತ್ಯಾಜ್ಯ ನಿರ್ವಹಣೆ ಘಟಕವನ್ನು ನಿಲ್ಲಿಸುವಂತೆ ನವ ಬೆಂಗಳೂರು ಹೋರಾಟ ಸಮಿತಿ ಹಾಗೂ ಭಕ್ತರಹಳ್ಳಿ ಗ್ರಾಮ ಪಂಚಾಯತಿವತಿಯಿಂದ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಧರಣಿ ನಿರತರೊಂದಿಗೆ ಮಾಹಿತಿ ಪಡೆದು ಬಿಬಿಎಂಪಿ ಅಧಿಕಾರಿಗಳಿಗೆ ಕರೆ ಮಾಡಿ ಎಚ್ಚರಿಕೆ ನೀಡಿದರು.
8 ವರ್ಷಗಳಿಂದ ಸುರಿಯುತ್ತಿರುವ ಬಿಬಿಎಂಪಿ ತ್ಯಾಜ್ಯದಿಂದ ಈ ವ್ಯಾಪ್ತಿಯ ಜನತೆ ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಎಂಎಸ್ ಜಿಪಿ ತ್ಯಾಜ್ಯ ಘಟಕದ ಗುತ್ತಿಗೆದಾರ ಯಾವುದೇ ರೀತಿಯಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ ಅಂತರ್ ಜಲ ಕಲುಷಿತಗೊಂಡಿದ್ದು, ಕೊರಟಗೆರೆ ತಾಲೂಕಿನ ಮಾವತ್ತೂರು ಕೆರೆಯ ನೀರು ಸಹ ಹಾಳಾಗಿದೆ. ತ್ವರಿತವಾಗಿ 8 ರಿಂದ 10 ದಿನಗಳ ಒಳಗಾಗಿ ತ್ಯಾಜ್ಯಗಳ ಲಾರಿ ಬರುವುದನ್ನು ನಿಲ್ಲಿಸಬೇಕಿದೆ ಇಲ್ಲವಾದಲ್ಲಿ ಧರಣಿಯ ಮುಂದಾಳತ್ವ ವಹಿಸಿ ಜನರನ್ನು ಸೇರಿಸಬೇಕಾಗುವುದು. ಡಿ.11ರ ನಂತರ ಒಂದು ದಿನ ಪೂರ್ತಿ ಈ ತ್ಯಾಜ್ಯ ಘಟಕದಿಂದ ಉಂಟಾಗುವ ಗ್ರಾಮಗಳಲ್ಲಿ ಸ್ಥಳ ಪರಿಶೀಲನೆಗೆ ಪ್ರವಾಸ ಕೈಗೊಂಡು ಸಮಸ್ಯೆಗೆ ಪರಿಹಾರ ದೊರಕಿಸಲು ಈ ಹೋರಾಟಕ್ಕೆ ಬೆಂಬಲ ನೀಡುತ್ತೇನೆ ಎಂದರು.
ಜಿಲ್ಲಾಧಿಕಾರಿ ಆದೇಶಕ್ಕೆ ಆಕ್ಷೇಪ: ಧರಣಿಯನ್ನು ಹತ್ತಿಕ್ಕಲು ಜಿಲ್ಲಾಧಿಕಾರಿ ಕೋವಿಡ್ ಮಾರ್ಗಸೂಚಿಯಲ್ಲಿ ಪ್ರತಿಭಟನೆ ನಡೆಸದಂತೆ ಆದೇಶ ಹೊರಡಿಸಿರುವುದು ಸರಿಯಲ್ಲ. ಚುನಾವಣೆ ನಡೆಯುತ್ತಿದೆ ರಾಜಕಾರಣಿಗಳಾದ ನಾವುಗಳೆ ಎರಡು, ಮೂರು ಸಾವಿರ ಜನರ ಸೇರಿಸಿ ಸಭೆ ನಡೆಸುತ್ತಿದ್ದೇವೆ. ಅದಕ್ಕೆ ಅನ್ವಯ ಆಗದ ಕೋವಿಡ್ ನಿಯಮ ಜನಸಾಮಾನ್ಯರು ಜೀವನಕ್ಕಾಗಿ ಶಾಂತಿಯುತವಾಗಿ ನಡೆಸುತ್ತಿರುವ ಧರಣಿಗೆ ಅನ್ವಯ ಮಾಡುವುದು ಸಲ್ಲದು ಎಂದರು.
ಮಾನವ ಕುಲಕ್ಕೆ ಕಂಟಕ: ಅವೈಜ್ಞಾನಿಕ ತ್ಯಾಜ್ಯದಿಂದಾಗಿ ಎತ್ತಿನಹೊಳೆ ಯೋಜನೆಗೆ ತೊಂದರೆಯಾಗುವ ಜೊತೆಗೆ ಮಾವತ್ತೂರು ಕೆರೆ ನೀರು ಸಂಪೂರ್ಣ ಕಲುಷಿತವಾಗಿದೆ. ಈ ವ್ಯಾಪ್ತಿಯ ನಾಲ್ಕು ಗ್ರಾಮಪಂಚಾಯಿತಿ ಗ್ರಾಮಗಳ ಅಂತರ್ಜಲ ಸಂಪೂರ್ಣ ಕಲುಷಿತವಾಗಿದ್ದು, ಸಾಸಲು ಹೋಬಳಿಯ ಮಾನವ ಕುಲಕ್ಕೆ ಕಂಟಕವಾಗಲಿದೆ ಎಂದು ತಾಪಂ ಮಾಜಿ ಅಧ್ಯಕ್ಷ ಎಚ್.ಎಸ್ ಅಶ್ವಥ್ ನಾರಾಯಣ ಕುಮಾರ್ ಅವರು ಕುಮಾರಸ್ವಾಮಿ ಅವರಿಗೆ ವಿವರಿಸಿದರು.
ನವ ಬೆಂಗಳೂರು ಹೋರಾಟ ಸಮಿತಿಯ ಗೌರವ ಅಧ್ಯಕ್ಷ ಸಾರಥಿ ಸತ್ಯಪ್ರಕಾಶ್ ಮಾತನಾಡಿ, ಸಿದ್ದರಾಮಯ್ಯ ಸರ್ಕಾರದಲ್ಲಿ ಈ ಘಟಕವನ್ನು ಒಂದು ವರ್ಷದ ಕಾಲವಧಿ ಕೇಳಿದ್ದರು. ಆದರೆ ಇದುವರೆಗೂ ನಿಲ್ಲಿಸಿಲ್ಲ. ತ್ಯಾಜ್ಯ ವಿಲೇವಾರಿಯಿಂದ ತೊಂದರೆಗೆ ಒಳಗಾಗಿರುವ ಗ್ರಾಮಗಳ ಅಭಿವೃದ್ಧಿಗೆ 53 ಕೋಟಿ ರೂ ನೀಡಿದ್ದು, ಯಾವುದೇ ಅನುದಾನ ಬಳಕೆಯಾಗಿಲ್ಲ. ಈ ನಿಟ್ಟಿನಲ್ಲಿ ತನಿಖೆಯಾಗಬೇಕಿದೆ.
ನಾಲ್ಕು ಗ್ರಾಮಪಂಚಾಯಿತಿ ಸದಸ್ಯರು ಧರಣಿಯಲ್ಲಿ ಭಾಗವಹಿಸಿದ್ದು, ತ್ಯಾಜ್ಯವನ್ನು ನಿಲ್ಲಿಸದಿದ್ದರೆ ವಿಧಾನಪರಿಷತ್ ಚುನಾವಣೆ ಬಹಿಷ್ಕಾರದ ನಿರ್ಣಯ ಕೈಗೊಂಡಿದ್ದಾರೆ ಎಂದು ಕುಮಾರಸ್ವಾಮಿ ಅವರಿಗೆ ಮಾಹಿತಿ ನೀಡಿದರು.
ಈ ವೇಳೆ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ, ಜೆಡಿಎಸ್ ಮುಖಂಡರಾದ ಹರೀಶ್ ಗೌಡ, ಸುನಿಲ್ ಕುಮಾರ್, ಲಕ್ಷ್ಮೀಪತಿ, ಕುಂಟನಹಳ್ಳಿ ಮಂಜುನಾಥ್ ಸೇರಿದಂತೆ ಹಲವು ಮುಖಂಡರು ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….