ದೊಡ್ಡಬಳ್ಳಾಪುರ: ಭಾರತಕ್ಕೆ ಸದಾ ಕಿರುಕುಳ ನೀಡುತ್ತಿದ್ದ ನೆರೆ ರಾಷ್ಟ್ರಗಳ ಹಾವಳಿ ತಡೆ ಹಾಗೂ ದೇಶದ ಭದ್ರತೆಗೆ ಸೇನಾಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಪಾತ್ರ ಅಪಾರ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಎಂ.ಬಿ.ನವೀನ್ ಕುಮಾರ್ ತಿಳಿಸಿದರು.
ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ದೇಶದ ಸೇನಾ ಮುಖ್ಯಸ್ಥ ಸಿಡಿಎಸ್ ಜನರಲ್ ಬಿಪಿನ್ ರಾವತ್ ಹಾಗೂ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಭಾರತೀಯ ಸೈನ್ಯದ ವೀರ ಯೋಧರಿಗೆ ನಗರದ ಸೋಮೇಶ್ವರ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಸೇನಾ ಸಿಬ್ಬಂದಿಯ ಮೊದಲ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್ ದೇಶದ ರಕ್ಷಣೆಗಾಗಿ 4 ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು.
2020 ಜನವರಿಯಲ್ಲಿ ಸೇನಾ ಸಿಬ್ಬಂದಿಯ ಮುಖ್ಯಸ್ಥರಾಗಿ ಬಿಪಿನ್ ರಾವತ್ ನೇಮಕಗೊಂಡಿದ್ದರು. ಅದಕ್ಕೂ ಮುಂಚೆ ಭೂ ಸೇನೆಯ ಮುಖ್ಯಸ್ಥರಾಗಿದ್ದರು. ಅದಲ್ಲದೇ ಇತ್ತೀಚೆಗೆ ಆರಂಭವಾದ ಸೇನಾ ವ್ಯವಹಾರಗಳ ಇಲಾಖೆಯ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸುತ್ತಿದ್ದರು.
ಯುದ್ಧಭೂಮಿಯಲ್ಲಿ ಹೊಸ ವಿಧಾನಗಳ ಅನುಷ್ಠಾನ ಮೂರು ಪಡೆಯ ಮುಖ್ಯಸ್ಥರಾದ ಬಿಪಿನ್ ರಾವತ್ ಅವರ ದುರ್ಮರಣದಿಂದ ಇಡೀ ದೇಶವೇ ದಿಗ್ಭ್ರಮೆಗೆ ಒಳಗಾಗಿದೆ. ಘಟನೆ ಹೇಗಾಯ್ತು ಎನ್ನುವುದು ಮುಖ್ಯ ವಾಗಿರುವುದರಿಂದ ವಾಯುಪಡೆ ತನಿಖೆಯನ್ನು ಕೈಗೊಂಡಿದೆ. ರಾವತ್ ಅವರು ಸೈನ್ಯವನ್ನು ಮುಂಚೂಣಿಯಲ್ಲಿ ನಿಂತು ಮುನ್ನಡೆಸಿದರು. ಯುದ್ಧಭೂಮಿಯಲ್ಲಿ ಹೊಸ ವಿಧಾನಗಳನ್ನು ಕಂಡುಕೊಂಡು ಅನುಷ್ಠಾನವನ್ನೂ ಮಾಡಿದರು. ಭಾರತೀಯ ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ರವರ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟವಾಗಿದೆ.
ಬಿಪಿನ್ ರಾವತ್ ಅವರು ಮಾತ್ರವಲ್ಲದೆ ಅವರ ಇಡೀ ಕುಟುಂಬವೇ ಭಾರತೀಯ ಸೈನ್ಯಕ್ಕೆ ಸೇವೆ ಸಲ್ಲಿಸಿತ್ತು. ಬಿಪಿನ್ ರಾವತ್ ತಂದೆಯ ಲಕ್ಷ್ಮಣ ಸಿಂಗ್ ರಾವತ್ ಸಹ ಭಾರತೀಯ ಸೈನ್ಯದಲ್ಲಿ ಲೆಫ್ಟಿನೆಂಟ್ ಜನರಲ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಅಷ್ಟೇ ಅಲ್ಲದೇ ಬಿಪಿನ್ ರಾವತ್ ಅವರ ಚಿಕ್ಕಪ್ಪ ಹರಿನಂದನ್, ಭರತ್ ಸಿಂಗ್ ರಾವತ್ ಅವರು ಕೂಡ ಭಾರತೀಯ ಸೇನೆಯಲ್ಲಿ ಹವಾಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿ, ನಿವೃತ್ತಿಯಾಗಿದ್ದರು. ಅಲ್ಲದೇ ಅವರ ಮಕ್ಕಳು ಸಹ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
1987ರಲ್ಲಿ ಅರುಣಾಚಲ ಪ್ರದೇಶದ ಸುಮದೊರೋಂಗ್ ಚು ಕಣಿವೆಯಲ್ಲಿ ಚೀನಾ ಮತ್ತು ಭಾರತ ಸೇನೆ ಮುಖಾಮುಖಿಯಾದಾಗ ಬಿಪಿನ್ ರಾವತ್ ನೇತೃತ್ವದ ಬೆಟಾಲಿಯನ್ ಪ್ರಮುಖ ಪಾತ್ರ ವಹಿಸಿತ್ತು. 2015ರಲ್ಲಿ ಮಯನ್ಮಾರ್ನಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ಕ್ಷಿಪ್ರ ಕಾರ್ಯಾಚರಣೆಯಲ್ಲೂ ಬಿಪಿನ್ ರಾವತ್ ಅವರ ಪಾತ್ರವಿತ್ತು. ಕಾಂಗೋದಲ್ಲಿ ವಿಶ್ವಸಂಸ್ಥೆಯ ಪರವಾಗಿ ಹೋದ ಭಾರತೀಯ ಸೇನಾ ಪಡೆಯ ನೇತೃತ್ವವನ್ನು ಕೂಡ ರಾವತ್ ವಹಿಸಿದ್ದರು ಎಂದು ಸ್ಮರಿಸಿದರು.
ಈ ವೇಳೆ ನಿವೃತ್ತ ಶಿಕ್ಷಕ ಮಹಾಲಿಂಗಯ್ಯ, ಕರವೇ ಕನ್ನಡಿಗರ ಬಣದ ಸಂಸ್ಥಾಪಕ ಚಂದ್ರಶೇಖರ್, ನಿವೃತ್ತ ಪಿಡಿಒ ಮುನಿರಾಜ್, ಗುತ್ತಿಗೆಧಾರ ಆವಲಮೂರ್ತಿ, ಮುಖಂಡರಾದ ಪುಟ್ಟಬಸವರಾಜ್, ಕಂಟನಕುಂಟೆ ಬಾಬು, ಪ್ರಭಾಕರ್ ಸೇರಿದಂತೆ ಅನೇಕರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….