ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಗಾಳಿ ಬೀಸುತ್ತಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ತಿಳಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶದ ಕುರಿತು ಹರಿತಲೇಖನಿಯೊಂದಿಗೆ ಮಾತನಾಡಿರುವ ಅವರು, ಇಂದು ತಾಲೂಕಿನಲ್ಲಿ ನಡೆದ ಮತ ಎಣಿಕೆಯಲ್ಲಿ ದರ್ಗಾಜೋಗಹಳ್ಳಿ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ 24 ಸ್ಥಾನಕ್ಕೆ 13 ಸ್ಥಾನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು, ಅರಳುಮಲ್ಲಿಗೆ ಗ್ರಾಮಪಂಚಾಯಿತಿಯ 18 ಸ್ಥಾನಕ್ಕೆ 15 ಮಂದಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ ಅಂತೆಯೇ ರಾಜ್ಯದಲ್ಲಿಯೂ ಸಹ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಸ್ಥಾನ ಪಡೆದಿದ್ದಾರೆ.
ಬಿಜೆಪಿ ಸರ್ಕಾರದ ಆಡಳಿತದ ವೈಫಲ್ಯ, ಸುಳ್ಳು ಭರವಸೆಗಳಿಗೆ ಜನರ ಉತ್ತರ ಈ ಫಲಿತಾಂಶವಾಗಿದೆ. ಬರೀ ಸುಳ್ಳು ಮಾತು, ಹಣವೊಂದೆ ಚುನಾವಣೆಯಲ್ಲಿ ಗೆಲ್ಲಲು ಸಾಕಾಗಲ್ಲ. ಜನರ ಪರವಾಗಿ ಕೆಲಸ ಮಾಡಬೇಕು, ಪ್ರಾಮಾಣಿಕ ಆಡಳಿತ ಕೊಡಬೇಕು. ಆಗ ಜನ ಮತ ನೀಡುತ್ತಾರೆ.
ಈ ಫಲಿತಾಂಶದಿಂದ ಬಿಜೆಪಿಯ ವಿರುದ್ಧ ಜನಾಭಿಪ್ರಾಯ ಇದೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಜನ ಭಾವಿಸಿರುವುದು ಕಾಣುತ್ತದೆ.
ಈ ಫಲಿತಾಂಶ ಮುಂದಿನ ಚುನಾವಣೆಗಳ ದಿಕ್ಸೂಚಿ. ಇದರಿಂದ ಜನರ ಒಲವು ಯಾರ ಕಡೆಗಿದೆ ಎಂದು ತಿಳಿಯುತ್ತೆ ಎಂಬುದು ನನ್ನ ಅಭಿಪ್ರಾಯ. ರಾಜ್ಯ ಬಿಜೆಪಿ ಸರ್ಕಾರದ ದುರಾಡಳಿತದಿಂದ ಜನ ರೋಸಿ ಹೋಗಿದ್ದಾರೆ. ಭ್ರಷ್ಟಾಚಾರ ಮಿತಿಮೀರಿದೆ, ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಇದರಿಂದ ಜನರ ನಿರೀಕ್ಷೆ ಹುಸಿಯಾಗಿದೆ. ಹೀಗಾಗಿ ಕಾಂಗ್ರೆಸ್ ಪರವಾದ ಗಾಳಿ ಬೀಸುತ್ತಿದೆ.
ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಬೆಂಬಲಿಸಿ, ಮತ ನೀಡಿದ ಎಲ್ಲಾ ಮತದಾರರಿಗೆ ಮತ್ತು ಅಭ್ಯರ್ಥಿಗಳ ಪರವಾಗಿ ದುಡಿದ ಎಲ್ಲಾ ನಾಯಕರು, ಕಾರ್ಯಕರ್ತರಿಗೆ ವೈಯಕ್ತಿಕವಾಗಿ ಮತ್ತು ಪಕ್ಷದ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….