ಬೆಂಗಳೂರು: ಜನ ನಿರ್ಲಕ್ಷ್ಯ ವಹಿಸಿದರೆ ಮುಂಬೈ, ದೆಹಲಿ, ಪಶ್ಚಿಮ ಬಂಗಾಳದ ರೀತಿ ಲಾಕ್ ಡೌನ್ ಮಾಡಬೇಕಾಗುತ್ತದೆ ಎಂದು ಸಚಿವ ಆರ್. ಅಶೋಕ್ ಪರೋಕ್ಷವಾಗಿ ಲಾಕ್ ಡೌನ್ ಬಗ್ಗೆ ಸುಳಿವು ನೀಡಿದ್ದಾರೆ.
ಸಿಎಂ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಮೂರನೇ ಅಲೆ ಬಗ್ಗೆ ಸಿಎಂ ಮತ್ತೊಮ್ಮೆ ಸಭೆ ಮಾಡುತ್ತಾರೆ. ಮೂರನೇ ಅಲೆ ಬರುತ್ತದೆ ಎಂಬ ವಾತಾವರಣ ನಿರ್ಮಾಣವಾಗಿದೆ. ಬೆಂಗಳೂರನ್ನು ರೆಡ್ ಜೋನ್ ಎಂದು ಕೇಂದ್ರ ಸರ್ಕಾರ ಹೇಳಿದೆ. ಹೀಗಾಗಿ ಸಿಎಂ ಮತ್ತೊಮ್ಮೆ ಸಭೆ ಕರೆದು ಕಠಿಣ ನಿಯಮಗಳ ಬಗ್ಗೆ ನಿರ್ಧಾರ ಮಾಡಬಹುದು. ತಜ್ಞರ ಸಮಿತಿ ನೀಡುವ ಸಲಹೆಗಳನ್ನು ಯಥಾವತ್ತಾಗಿ ಜಾರಿಮಾಡಲಾಗುತ್ತದೆ ಎಂದರು.
ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್, ಜೆಡಿಎಸ್ ನವರು ಏನು ಮಾಡುತ್ತಾರೆನ್ನುವುದು ನಮಗೆ ಇಂಪಾರ್ಟೆಂಟ್ ಅಲ್ಲ. ನಮಗೆ ಇರುವವರು ರಾಜ್ಯದ ಆರೂವರೆ ಕೋಟಿ ಜನರ ಜೀವ ಕಾಪಾಡುವುದು. ನಮಗೆ ಯಾವುದೇ ರ್ಯಾಲಿ, ಸಭೆ ಬಗ್ಗೆ ತಲೆಯಲ್ಲಿಲ್ಲ. ಹೀಗಾಗಿ ಜನವರಿ 4 ಅಥವಾ 5 ರಂದು ಸಭೆ ಮಾಡಿ ಕೊವೀಡ್ ತಡೆಗೆ ಬಿಗಿ ಟಫ್ ರೂಲ್ಸ್ ಜಾರಿ ಮಾಡುತ್ತೇವೆ ಎಂದರು.
ಮತ್ತೊಂದೆಡೆ ದೇಶದಲ್ಲಿ ಕರೊನಾ ಸೋಂಕು ವ್ಯಾಪಕವಾಗಿ ಹೆಚ್ಚುತ್ತಿರುವುದರಿಂದ ರಾಜ್ಯದಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದ್ದು, ಸಾರ್ವಜನಿಕರು ಸಹಕಾರ ಕೊಟ್ಟರೆ ಲಾಕ್‌ಡೌನ್ ಅಗತ್ಯ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿ ವಿಮಾಣ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂಬೈ ಮಾದರಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲು ನಾಳೆ ಅಥವಾ ನಾಡಿದ್ದು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಬೆಂಗಳೂರಿನಲ್ಲಿ ಸಭೆ ನಡೆಸಿ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ಈಗಿರುವ ನೈಟ್ ಕರ್ಪ್ಯೂ ಮುಂದುವರಿಸುವ ಬಗ್ಗೆಯೂ ಚರ್ಚಿಸಲಾಗುವುದು ಎಂದು ಮಾಹಿತಿ ನೀಡಿದರು.
ಕಳೆದ ಒಂದು ವಾರದಲ್ಲಿ ಇಡೀ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ವಿಶೇಷವಾಗಿ ಮಹಾರಾಷ್ಟ್ರದ ಮುಂಬೈನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ವ್ಯಾಪಿಸುತ್ತಿದೆ. ಕೋವಿಡ್ ಯಾವ ರೀತಿ ಹರಡುತ್ತಿದೆ ಎಂಬುದನ್ನು ಗಮನಿಸುತ್ತಿದ್ದೇವೆ. ಬೆಂಗಳೂರಿನಲ್ಲೂ ದೊಡ್ಡ ಪ್ರಮಾಣದಲ್ಲಿ ಸೋಂಕು ಹರಡುತ್ತಿದೆ. ಸಚಿವ ಆರ್. ಅಶೋಕ ಲಾಕ್‌ಡೌನ್ ಬಗ್ಗೆ ಮಾತನಾಡಿದ್ದಾರೆ. ನಮ್ಮ ನಿಲುವು ಬಹಳ ಸ್ಪಷ್ಟ ಇದೆ. ಹಿಂದೆಲ್ಲ ಲಾಕ್‌ಡೌನ್ ಆಗಿತ್ತು. ಅದು ಆಗಬಾರದು ಅಂತ ಈಗ ಕಟ್ಟುನಿಟ್ಟಿನ ತೀರ್ಮಾನ ಕೈಗೊಂಡಿದ್ದೇವೆ. ಆರ್. ಅಶೋಕ ಹೇಳಿದ ಅರ್ಥವೇ ಅದು. ಜನರು ಅದಕ್ಕೆ ಸಹಕಾರ ಕೊಟ್ಟರೆ ಲಾಕ್‌ಡೌನ್ ಆಗುವುದಿಲ್ಲ ಎಂದರು.
ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗುತ್ತಿವೆ. ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಲಾಗುತ್ತಿದೆ. ಮಹಾರಾಷ್ಟ್ರದ ಮುಂಬೈನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಪತ್ತೆ ಆಗುತ್ತಿವೆ. ಮಹಾರಾಷ್ಟ್ರದಿಂದ ಬೆಳಗಾವಿ ಗಡಿ ಪ್ರವೇಶಿಸುವ ಪ್ರದೇಶಗಳಲ್ಲಿ ನಿಗಾ ಇಡಲಾಗಿದೆ. ಗಡಿಯಲ್ಲಿ ಕಟ್ಟಚ್ಚರ ವಹಿಸಲು ಸೂಚನೆ ನೀಡಲಾಗಿದೆ. ಕರ್ನಾಟಕಕ್ಕೆ ಬರುವವರಿಗೆ ಎರಡು ಡೋಸ್ ಲಸಿಕೆ ಮತ್ತು ಹಾಗೂ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ. ಅಂಥವರಿಗೆ ಮಾತ್ರ ಪ್ರವೇಶ ಇರಲಿದೆ ಎಂದು ಸಿಎಂ ತಿಳಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….