ದೊಡ್ಡಬಳ್ಳಾಪುರ: ರಾಗಿ ಖರೀದಿಗೆ ಇರುವ ಗರಿಷ್ಟ ಎಕರೆಗೆ 20 ಕ್ವಿಂಟಾಲ್ ಮಿತಿಯನ್ನು ತೆಗೆದುಹಾಕುವ ಕುರಿತು ಜ.15ರ ನಂತರ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವ ಉಮೇಶ್ ಕತ್ತಿ ರೈತ ಮುಖಂಡರಿಗೆ ಭರವಸೆ ನೀಡಿರುವ ಹಿನ್ನಲೆಯಲ್ಲಿ ನಗರದ ಎಪಿಎಂಸಿ ಆವರಣದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ಖರೀದಿಗೆ ಇರುವ ಮಿತಿಯನ್ನು ತೆಗೆದುಹಾಕುವಂತೆ ಒತ್ತಾಯಿಸಿ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನಡೆಸುತ್ತಿದ್ದ ಪ್ರತಿಭಟನೆಗೆ ತಾತ್ಕಾಲಿಕ ವಿರಾಮ ಬಿದ್ದಿದೆ.
ಕೇಂದ್ರದ ಆವರಣದಲ್ಲಿ ಈ ಕುರಿತು ಸುದ್ಧಿಗೋಷ್ಟಿಯಲ್ಲಿ ಮಾಹಿತಿ ನೀಡಿದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಮುಖಂಡರು, ಬೆಂಬಲ ಬೆಲೆ ಯೋಜನೆಯಲ್ಲಿ ರಾಗಿ ಖರೀದಿಗೆ ಇರುವ ಗರಿಷ್ಟ ಎಕರೆಗೆ 20 ಕ್ವಿಂಟಾಲ್ ಮಿತಿಯನ್ನು ತೆಗೆದುಹಾಕುವ ಕುರಿತು 10 ದಿನಗಳಿಂದ ರಾಗಿ ಖರೀದಿ ಕೇಂದ್ರದ ಆವರಣದಲ್ಲಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಈ ಬಗ್ಗೆ ಜಿಲ್ಲಾಕಾರಿಗಳಿಗೂ ದೂರು ನೀಡಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಇಡೀ ರಾಜ್ಯದಲ್ಲಿ ಬೆಂಬಲ ಬೆಲೆಯಲ್ಲಿ ಖರೀದಿ ಮಾಡುವ ಕೃಷಿ ಉತ್ಪನ್ನಗಳ ಖರೀದಿ ಮಿತಿ ತೆಗೆದು ಹಾಕುವ ಕುರಿತಂತೆ ಮುಖ್ಯಮಂತ್ರಿಗಳ ಗಮನಕ್ಕೆ ತರಲು ಜ.10ರಂದು ರಾಜ್ಯ ರೈತ ಮುಖಂಡರ ನಿಯೋಗದೊಂದಿಗೆ ತೆರಳಲಾಗಿತ್ತು. ಸಾಹಿತಿ ಚಂಪಾ ಅವರ ನಿಧನದಿಂದಾಗಿ ಹಾಗೂ ಮುಖ್ಯಮಂತ್ರಿಗಳ ತುರ್ತು ಕಾರ್ಯ ನಿಮಿತ್ತ ಭೇಟಿ ಸಾಧ್ಯವಾಗಲಿಲ್ಲ. ಈ ಹಿನ್ನಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವ ಉಮೇಶ್ ಕತ್ತಿ ಅವರಿಗೆ ಮನವಿ ಸಲ್ಲಿಸಿ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ. ಸಚಿವರು ಜ.15ರ ನಂತರ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವ ಆಶ್ವಾಸನೆ ನೀಡಿದ್ದಾರೆ. ಆದ್ದರಿಂದ ತಾತ್ಕಾಲಿಕವಾಗಿ ಧರಣಿ ಹಿಂತೆಗೆದುಕೊಳ್ಳಲಾಗಿದೆ. ಒಂದು ವೇಳೆ ಜ.20ರೊಳಗೆ ಯಾವುದೇ ತೀರ್ಮಾನ ಕೈಗೊಳ್ಳದಿದ್ದಲ್ಲಿ ರಾಗಿ ಬೆಳೆಯುವ ಜಿಲ್ಲೆಗಳ ರೈತರಿಗೆ ಮೂಟೆಗಳನ್ನು ಹೊತ್ತು ವಿಧಾನ ಸೌಧ ಚಲೋ ಚಳವಳಿ ನಡೆಸಬೇಕಾಗುತ್ತದೆ ಎಂದರು.
ಕೇಂದ್ರ ಸರ್ಕಾರ 14 ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆಯಲ್ಲಿ ಖರೀದಿ ಮಾಡುತ್ತಿದೆ. ರೈತರಿಗೆ ಕನಿಷ್ಟ ಬೆಂಬಲ ಬೆಲೆ ಎಂದು ನಿಗದಿಪಡಿಸುವುದೇ ಅವೈಜ್ಞಾನಿಕ. ಬೆಂಬಲ ಬೆಲೆಯಲ್ಲಿ ಇಲ್ಲಸಲ್ಲದ ಮಾನದಂಡ ನಿಗದಿ ಪಡಿಸಿ ರೈತರ ಶೋಷಣೆ ಮಾಡುವುದು ಸರ್ಕಾರಗಳಿಗೆ ಶೋಭೆಯಲ್ಲ. ರೈತರಿಗೆ ಸ್ವಾಮಿನಾಥನ್ ವರದಿಯಂತೆ ಬೆಲೆ ನಿಗದಿ ಮಾಡಬೇಕಿದೆ. ಆವರ್ತ ನಿಧಿ ಸ್ಥಾಪಿಸಿ, ಬೆಲೆಗಳು ಕನಿಷ್ಟವಾಗದಂತೆ ಸರ್ಕಾರ ಕ್ರಮವಹಿಸಬೇಕಿದೆ. ಪ್ರೂಟ್ ತಂತ್ರಾಂಶದಲ್ಲಿ ತಿದ್ದುಪಡಿಯಾಗುವುದಿಲ್ಲ. ಇದರಲ್ಲಿಯೂ ತಾಂತ್ರಿಕ ದೋಷಗಳಿದ್ದು, ಇದನ್ನು ಕೂಡಲೇ ಸರಿಪಡಿಸಬೇಕು ಪ್ರತಿ ಹೋಬಳಿಯಲ್ಲಿಯೂ ರಾಗಿ ಖರೀದಿ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಬೇಕು ಎಂದು ಮುಖಂಡರು ಒತ್ತಾಯಿಸಿದರು.
ಈ ವೇಳೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮುಖಂಡರು ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….