ದೊಡ್ಡಬಳ್ಳಾಪುರ: ನಗರಸಭೆಯಲ್ಲಿ ಕಂದಾಯ ವಸೂಲಾತಿ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ನಗರದ ನೈರ್ಮಲ್ಯ ಹದಗೆಡುತ್ತಿದೆ. 2.5 ವರ್ಷಗಳಿಂದ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದೇ ಜಡ್ಡುಗಟ್ಟಿದ್ದಾರೆ. ಕೆಲವು ಅಧಿಕಾರಿ, ನೌಕರರಂತೂ ಲಂಚ ಪಡೆಯದೇ ಕೆಲಸ ಮಾಡುತ್ತಿಲ್ಲ. ನಗರಸಭೆಯ ಬಗ್ಗೆ ನಾಗರಿಕರು ಹೀನಾಯವಾಗಿ ನೋಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ನಗರಸಭಾ ಸದಸ್ಯರು ಅಧಿಕಾರಿಗಳನ್ನು ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು.
ನಗರಸಭೆ ಚುನಾವಣೆಯ ನಂತರ ನಗರಸಭಾ ಕಾರ್ಯಾಲಯದಲ್ಲಿ ನಗರಸಭೆ ಅಧ್ಯಕ್ಷೆ ಎಸ್.ಸುಧಾರಾಣಿ ಲಕ್ಷ್ಮೀನಾರಾಯಣ್ ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಸದಸ್ಯರು, ಶಾಸಕ ಟಿ.ವೆಂಕಟರಮಣಯ್ಯ ಅವರ ಸಮ್ಮುಖದಲ್ಲಿ ನಗರಸಭೆ ಆಡಳಿತ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಹಿರಿಯ ಸದಸ್ಯ ಟಿ.ಎನ್.ಪ್ರಭುದೇವ್ ಮಾತನಾಡಿ, ನಗರದಲ್ಲಿ ನೈರ್ಮಲ್ಯ ಹದಗೆಟ್ಟಿದೆ. ನಗರಸಭೆಗೆ ಸ್ವಯಂ ಘೋಷಣೆ ತೆರಿಗೆ, ವಾಣಿಜ್ಯ ಮಳಿಗೆಗಳ ತೆರಿಗೆ, ಪರವಾನಗಿ ನವೀಕರಣ ಮೊದಲಾದ ಮೂಲಗಳಿಂದ ಸುಮಾರು 6 ಕೋಟಿ ತೆರಿಗೆ ವಸೂಲಾಗಬೇಕಿದೆ. ಆದರೆ ಇನ್ನೆರಡು ತಿಂಗಳಲ್ಲಿ ಆರ್ಥಿಕ ವರ್ಷ ಮುಗಿಯುತ್ತಾ ಬಂದರೂ ಇನ್ನೂ ತೆರಿಗೆ ವಸೂಲಾತಿಯಾಗುತ್ತಿಲ್ಲ. ವಾಣಿಜ್ಯ ಕಟ್ಟಡಗಳ ತೆರಿಗೆ ವಸೂಲಾತಿಗಳ ಬಗ್ಗೆ ಸೂಕ್ತ ವ್ಯವಸ್ತೆ ಇಲ್ಲ. ತೆರಿಗೆ ವಸೂಲಾತಿ ಸಮರ್ಪಕವಾಗಿ ನಡೆಯಲು ಏಕ ಗವಾಕ್ಷಿ ವ್ಯವಸ್ಥೆ ತರಬೇಕು. ವಿದ್ಯುತ್ ಪರವಾನಗಿ ಪಡೆಯುವವರಿಗೆ ಈಗ ನಗರಸಭೆಯಿಂದ ನಿರಪೇಕ್ಷಣಾ ಪತ್ರ ಸಹ ನೀಡಲು ಅವಕಾಶವಿಲ್ಲದಂತಾಗಿದೆ. ನಗರಸಭೆಯ ಆದಾಯದ ಮೂಲಗಳಿಗೆ ಒತ್ತು ನೀಡಬೇಕಿದೆ ಎಂದರು. ಇದಕ್ಕೆ ಸದಸ್ಯ ಎಸ್.ಎ.ಭಾಸ್ಕರ್ ದನಿಗೂಡಿಸಿದರು.
ಸದಸ್ಯ ಎಂ.ಜಿ.ಶ್ರೀನಿವಾಸ್ ಮಾತನಾಡಿ, ನಗರಸಭೆಯಲ್ಲಿ ವಿವಿಧ ಕಾಮಗಾರಿಗಳ, ವಾಹನಗಳ ನಿರ್ವಹಣೆಗಾಗಿ ಖರ್ಚು ಮಾಡುವ ಹಣದ ಬಗ್ಗೆ ಕಾಲಕಾಲಕ್ಕೆ ಸರಿಯಾದ ಲೆಕ್ಕ ಪತ್ರಗಳನ್ನು ನಿರ್ವಹಣೆ ಮಾಡುತ್ತಿಲ್ಲ. ಹಲವಾರು ಸಿಬ್ಬಂದಿ ನಗರಸಭೆಯಲ್ಲಿಯೇ ಹಲವಾರು ವರ್ಷಗಳಿಂದ ಬೇರೂರಿದ್ದಾರೆ. ಖಾತೆ ಬದಲಾವಣೆ ಮೊದಲಾದ ಕೆಲಸಗಳು ಎಲ್ಲಾ ದಾಖಲಾತಿಗಳು ಸರಿಯಾಗಿದ್ದರೂ, ನಗರಸಭೆ ಸದಸ್ಯರು ಹಾಗೂ ಜನಸಾಮಾನ್ಯರು ಬಂದರೆ ವಿನಾಕಾರಣ ವಿಳಂಬ ಆಗುತ್ತದೆ. ಆದರೆ ಮಧ್ಯವರ್ತಿಗಳ ಮೂಲಕ ಲಂಚ ನೀಡಿದರೆ ಬೇಗ ಕೆಲಸವಾಗುತ್ತದೆ. ಅಧಿಕಾರಿಗಳ ಈ ವರ್ತನೆಯಿಂದ ನಗರಸಭಾ ಸದಸ್ಯರು ಸಹ ನಗೆಪಾಟಲಾಗುವ ಸ್ಥಿತಿ ಬಂದಿದೆ. ಹೆಚ್ಚು ಕಾಲದಿಂದ ಇಲ್ಲಿರುವ ಅಧಿಕಾರಿಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಿ, ನಗರಸಭೆಯಲ್ಲಿ ಹೊಸ ವ್ಯವಸ್ಥೆ ತರಬೇಕಿದೆ. ನಮ್ಮ ಊರು ನಮ್ಮ ಜನಸ್ನೇಹಿ ನಗರಸಭೆ ಧ್ಯೇಯ ಇಟ್ಟುಕೊಂಡು ನಗರಸಭೆ ಸದಸ್ಯರೊಂದಿಗೆ ಅಧಿಕಾರಿಗಳು ಸೇರಿ ಒಟ್ಟಾಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯ ಎಂದರು.
ಇದಕ್ಕೆ ಸದಸ್ಯ ನಾಗರಾಜ್ ದನಿಗೂಡಿಸಿ, ನಗರಸಭೆಯಲ್ಲಿ ಸದಸ್ಯರೇ ಹಣ ನೀಡಿ ಕೆಲಸ ಮಾಡಿಸಿಕೊಳ್ಳುವ ಸ್ಥಿತಿ ಇದೆ ಎಂದರು.
ಘನತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ. ವಾಣಿಜ್ಯ ಕಟ್ಟಡಗಳ ತೆರಿಗೆ ಸರಿಯಾಗಿ ವಸೂಲಾಗುತ್ತಿಲ್ಲ. ಪರವಾನಗಿ ನೀಡುವಾಗಿ ಎಲ್ಲಾ ನಿಬಂಧನೆಗಳನ್ನು ಪಾಲಿಸುವ ಕುರಿತು ಸೂಚನೆ ನೀಡಬೇಕು. ಶೆಡ್‍ಗಳ ನಿರ್ಮಾಣ ಮಾಡಿಕೊಂಡು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂದು ಸದಸ್ಯ ಮಲ್ಲೇಶ್ ಹೇಳಿದರು. ಸದಸ್ಯೆ ಆದಿಲಕ್ಷ್ಮೀ ಇದಕ್ಕೆ ದನಿಗೂಡಿಸಿದರು.
ನಗರದಲ್ಲಿ ಬೀದಿದೀಪಗಳ ನಿರ್ವಹಣೆಯಾಗುತ್ತಿಲ್ಲ. ನಿಷೇಧಿತ ಪ್ಲಾಸ್ಟಿಕ್ ಬಳಕೆ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ. ನಗರಸಭೆ ಸಿಬ್ಬಂದಿ ಕೊರತೆಯಿರುವ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಬೇಕಿದೆ. ಆಶ್ರಯ ಯೋಜನೆಯಲ್ಲಿ 5,300 ರೂ ಕಟ್ಟಿ ನೋಂದಾವಣಿ ಮಾಡಿಕೊಳ್ಳದೇ ಇರುವವರಿಗೂ ಸಹ ಮನೆಗಳನ್ನು ನೀಡಲಾಗಿದೆ ಎಂದು ಸದಸ್ಯ ರವಿಕುಮಾರ್ ದೂರಿದರು.
ನಗರಸಭೆಯಿಂದ ಕಂದಾಯ ವಸೂಲು ಮಾಡಲು ಅಗತ್ಯ ಕ್ರಮ ವಹಿಸಲಾಗುತ್ತಿದ್ದು. 5 ಕೋಟಿ ರೂ ಹಣ ಸಂಗ್ರಹಣೆಯಾಗಿದೆ. ಕೋವಿಡ್ ಕಾರಣದಿಂದಾಗಿ ಕೆಲವು ಕೆಲಸಗಳು ಸ್ಥಗಿತಗೊಂಡಿವೆ ಎಂದು ಕಂದಾಯ ನಿರೀಕ್ಷಕರು ಉತ್ತರಿಸಿದರು.
ನಗರಸಭೆಯಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸದ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಸದಸ್ಯರ ದೂರುಗಳನ್ನು ಸರಿಪಡಿಸಲು ಕ್ರಮ ವಹಿಸಲಾಗುವುದು ಎಂದು ಪೌರಾಯುಕ್ತ ರಮೇಶ್.ಎಸ್ ಸುಣಗಾರ್ ಉತ್ತರಿಸಿದರು.
ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ನಗರಸಭೆಯ ಆದಾಯ ಮೂಲಗಳನ್ನು ಹೆಚ್ಚಿಸುವಲ್ಲಿ ನಗರಸಭೆ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕಿದ್ದು, ಕಂದಾಯ ವಸೂಲಿಗೆ ಕ್ರಮ ಕೈಗೊಳ್ಳಬೇಕಿದೆ. ಈ ಬಗ್ಗೆ ಕರಪತ್ರಗಳ ಮೂಲಕ ಜಾಗೃತಿ ಮೂಡಿಸಬೇಕಿದೆ. ಘನತ್ಯಾಜ್ಯ ವಿಲೇವಾರಿಗೆ ಒತ್ತು ನೀಡಬೇಕಿದ್ದು, ಪ್ಲಾಸ್ಟಿಕ್ ಬಳಕೆ ಮಾಡುವುದಕ್ಕಿಂತ ನಿಷೇಧಿತ ಪ್ಲಾಸ್ಟಿಕ್ ತಯಾರು ಮಾಡುವವರ ಮೇಲು ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಆಶ್ರಯ ಮನೆಗಳಿಗೆ ಹಕ್ಕುಪತ್ರಗಳನ್ನು ಅರ್ಹರಿಗೇ ನೀಡಲು ಕ್ರಮ ವಹಿಸಲಾಗಿದ್ದು, ಇದರಲ್ಲಿ ಅರ್ಹರಲ್ಲದವರ ಪಟ್ಟಿ ನೀಡಿದರೆ ಕ್ರಮ ವಹಿಸಲಾಗುವುದು. ಅಧಿಕಾರಿಗಳ ವರ್ಗಾವಣೆ ಬಗ್ಗೆ ಸದಸ್ಯರು, ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕಿದೆ ಎಂದರು.
ತ್ಯಾಜ್ಯ ಶುದ್ದೀಕರಣ ಘಟಕದ ಅವ್ಯವಸ್ಥೆ ಸರಿಪಡಿಸಿ: ಚಿಕ್ಕತುಮಕೂರಿನ ಬಳಿಯಿರುವ ನಗರಸಭೆಯ ಒಳಚರಂಡಿ ನೀರಿನ ತ್ಯಾಜ್ಯ ಶುದ್ದೀಕರಣ ಘಟಕದ ಅವ್ಯವಸ್ಥೆ ವಿರುದ್ದ ಸುತ್ತಮುತ್ತಲ ಗ್ರಾಮಸ್ಥರು ಪಾದಯಾತ್ರೆ ಮಾಡಲು ಸಜ್ಜಾಗುತ್ತಿದ್ದು, ನಗರಸಭೆ ಆಡಳಿತ ಈ ಬಗ್ಗೆ ಗಂಭೀರವಾಗಿ ಗಮನ ಹರಿಸಬೇಕಿದೆ. ನಗರಸಭೆಯ ಕಚೇರಿಯನ್ನು ಸಬ್ ರಿಜಿಸ್ಟ್ರಾರ್ ಕಚೇರಿಗೆ ಬಾಡಿಗೆ ನೀಡುವ ಕುರಿತು ಪ್ರಸ್ತಾವನೆ ಬಂದಿದ್ದು ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಂಡು ತಿಳಿಸಿ. ರೈಲ್ವೆ ಅಂಡರ್ ಫಾಸ್ ಬಗ್ಗೆ ಇರುವ ತಕರಾರನ್ನು ಬಗೆಹರಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು.
ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಎಸ್.ಸುಧಾರಾಣಿ ಲಕ್ಷ್ಮೀನಾರಾಯಣ್, ಉಪಾಧ್ಯಕ್ಷೆ ಫರ್ಹಾನಾ ತಾಜ್, ಪೌರಾಯುಕ್ತ ರಮೇಶ್.ಎಸ್ ಸುಣಗಾರ್ ಸೇರಿದಂತೆ ನಗರಸಭಾ ಸದಸ್ಯರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….