ದೊಡ್ಡಬಳ್ಳಾಪುರ: ಸಂಕ್ರಾಂತಿ ಹಬ್ಬಕ್ಕಾಗಿ ನಗರಕ್ಕೆ ಬಂದಿದೆ ರಾಶಿ ರಾಶಿ ಕಬ್ಬು. ಮತ್ತೊಂದೆಡೆ ಕಡಲೆಕಾಯಿ, ಅವರೆಕಾಯಿ, ಗೆಣಸು ಕೂಡ ಆಗಮಿಸುತ್ತಿದ್ದು, ಎಲ್ಲೆಡೆ ಸಂಕ್ರಾಂತಿಯ ಸುಗ್ಗಿ ಮನೆಮಾಡಿದೆ.
ಸಂಕ್ರಾಂತಿ ಹಬ್ಬಕ್ಕೆ ಎರಡು ದಿನ ಬಾಕಿ (ಜ.15)ಯಿರುವಾಗಲೇ ಖರೀದಿ ಆರಂಭವಾಗಿದೆ. ಒಂದೆಡೆ ಕಡಲೆಕಾಯಿ, ಗೆಣಸು, ಅವರೆಕಾಯಿಗಳ ಮಾರಾಟ. ಮತ್ತೊಂದೆಡೆ ಸಿದ್ಧ ಎಳ್ಳು-ಬೆಲ್ಲಗಳ ಘಮ, ಸಕ್ಕರೆ ಅಚ್ಚುಗಳ ಆಕರ್ಷಣೆ, ಎಳ್ಳು-ಬೆಲ್ಲ ತುಂಬಿಕೊಡುವ ಬಗೆ ಬಗೆಯ ಗಿಫ್ಟ್‍ಗಳು… ಖರೀದಿಯ ಸಂಭ್ರಮದ ಭರಾಟೆ ಆರಂಭವಾಗಿದೆ.
ಹಬ್ಬದ ಸಂಭ್ರಮಕ್ಕೆ ಈ ಬಾರಿ ಅವರೆಕಾಯಿ, ಕಡಲೆಕಾಯಿಯ ಆಗಮನದ ಭರಾಟೆ ಕೊಂಚ ಕಡಿಮೆಯಾದೆ. ಇವೆರಡೂ ಸ್ವಲ್ಪ ದುಬಾರಿಯಾಗಿವೆ. ಎಳ್ಳು-ಬೆಲ್ಲಗಳ ಮಿಶ್ರಣವೂ ಅಂಗಡಿಗಳಿಗೆ ಬಂದಿದೆ. ಶನಿವಾರ ಸಂಕ್ರಾಂತಿ ಹಬ್ಬವಿದೆ. ಈ ಬಾರಿ ಹಬ್ಬದ ಆಚರಣೆಗೆ ವೀಕೆಂಡ್ ಕರ್ಫ್ಯೂ ಅಡ್ಡಿಯಾಗಲಿದೆ. ಆದರೂ ಮನೆ- ಮನೆಗಳಲ್ಲಿ ಹಬ್ಬವನ್ನು ಆಚರಿಸಿಕೊಳ್ಳಲು ನಗರದ ಜನ ಸಜ್ಜಾಗಿದ್ದಾರೆ.
ಮಾರುಕಟ್ಟೆಗಳಿಗೆ ಲೋಡ್‍ಗಟ್ಟಲೆ ಕಬ್ಬು ಬಂದಿದೆ. ಹೇಳಿ ಕೇಳಿ ಸಂಕ್ರಾಂತಿ ಹಬ್ಬಕ್ಕೆ ಕಬ್ಬು ಬಹುಬೇಡಿಕೆಯುಳ್ಳದ್ದಾಗಿದೆ. ಹೀಗಾಗಿ ಕರಿಕಬ್ಬು, ಬಿಳಿ ಕಬ್ಬು ಇತ್ಯಾದಿಗಳು ಆಗಮಿಸಿವೆ.
ಈ ಬಾರಿ ರಾಜ್ಯಾದ್ಯಂತ ಒಳ್ಳೆಯ ಮಳೆಯಾಗಿದೆ. ಎಲ್ಲೆಡೆ ಕಬ್ಬಿನ ಬೆಳೆಯೂ ಉತ್ತಮವಾಗಿದೆ. ಹೀಗಾಗಿ, ಈ ಬಾರಿ ರಾಜ್ಯದಲ್ಲಿ ಕಬ್ಬಿನ ಇಳುವರಿ ಶೇ.20ರಷ್ಟು ಹೆಚ್ಚಾಗಿದೆ. ಹೀಗಾಗಿ, ಹಬ್ಬಕ್ಕೆ ಕಬ್ಬಿನ ಕೊರತೆ ಇರುವುದಿಲ್ಲ. ಆದರೆ, ಅಧಿಕ ಮಳೆಯಿಂದಾಗಿ ಈ ಬಾರಿ ಕಡಲೆಕಾಯಿ, ಅವರೆಕಾಯಿ ಬೆಳೆಗೆ ಹಾನಿ ಉಂಟಾಗಿದೆ. ಉತ್ತಮ ಇಳುವರಿಯಿಲ್ಲ. ಹೀಗಾಗಿ, ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬಾರದ ಕಾರಣ ಬೆಲೆಗಳು ಕೂಡ ಕೆ.ಜಿ.ಗೆ 80-100 ರೂ. ನಂತೆ ಮಾರಾಟವಾಗುತ್ತಿವೆ. ಸಿಹಿ ಗೆಣಸು 20-30ರೂ.ಗೆ ಮಾರಾಟವಾಗುತ್ತಿದೆ.
ಎಳ್ಳು-ಬೆಲ್ಲ ಮಿಶ್ರಣ: ಮಾರುಕಟ್ಟೆಯಲ್ಲಿ ಸಿದ್ಧ ಎಳ್ಳು-ಬೆಲ್ಲ ಕೆ.ಜಿ.ಗೆ 250-300 ರೂ.ಗೆ ಮಾರಾಟವಾಗುತ್ತಿದೆ. ಸಂಕ್ರಾಂತಿಗೆ ಎಳ್ಳು, ಬೆಲ್ಲ, ಒಣ ಕೊಬ್ಬರಿ, ಕಡ್ಲೆಬೀಜ, ಹುರಿಗಡಲೆಗಳ ಮಿಶ್ರಣ, ಕಬ್ಬು, ಸಕ್ಕರೆ ಅಚ್ಚುಗಳೂ ಆಗಮಿಸಿವೆ.
ಸಂಕ್ರಾಂತಿ ದಿನವೇ ಕರ್ಫ್ಯೂ: ಶನಿವಾರ ಸಂಕ್ರಾಂತಿ ಹಬ್ಬ. ಆದರೆ ವಾರಾಂತ್ಯದಲ್ಲಿ ಸರಕಾರ ಕರ್ಫ್ಯೂ ವಿಧಿಸಿರುವುದರಿಂದ ಹಬ್ಬದ ಆಚರಣೆಗೆ ತೊಡಕಾಗುವ ಸಾಧ್ಯತೆಯಿದೆ. ಮಾರಾಟಗಾರರು ಹಬ್ಬದ ಸಾಮಗ್ರಿಗಳನ್ನು ಖರೀದಿಸಿ ತಂದರೆ, ಅಂದು ವ್ಯಾಪಾರಕ್ಕೆ ಅವಕಾಶ ಸಿಕ್ಕಿದರೂ ಕೂಡ ಗ್ರಾಹಕರು ಬರಬೇಕಲ್ಲವೇ ಎಂಬುದು ವ್ಯಾಪಾರಿಗಳ ಆತಂಕವಾಗಿದೆ. ಹೊರಗಡೆ ಹೋಗದೆ ಅತ್ಯಂತ ಸರಳವಾಗಿ ಸಂಕ್ರಾಂತಿ ಆಚರಿಸಲು ಜನ ಮಾನಸಿಕವಾಗಿ ಸಿದ್ಧರಾಗುತ್ತಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….