ಬೆಂಗಳೂರು: ರಾಜ್ಯದಲ್ಲಿ ಜನವರಿ 25ರ ವೇಳೆಗೆ ಕರೊನಾ ವೈರಸ್ ಸೋಂಕು ಪೀಕ್ ಗೆ ಹೋಗಲಿದ್ದು, ನಂತರ ಹಂತ ಹಂತವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಕೋವಿಡ್-19 ತಜ್ಞರು ತಿಳಿಸಿರುವುದಾಗಿ ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದ ಕೋವಿಡ್ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್ ಅವರು, ರಾಜ್ಯದಲ್ಲಿ ಜನವರಿ 25 ರಂದು ಕೋವಿಡ್ ಪ್ರಕರಣಗಳು ಗರಿಷ್ಠ ಮಟ್ಟವನ್ನು ತಲುಪಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ, ನಂತರ ಅದು ಕ್ರಮೇಣ ಕಡಿಮೆಯಾಗುತ್ತದೆ ಎಂದರು.
ರಾಜ್ಯದಲ್ಲಿ ದಿನಕ್ಕೆ ಎರಡು ಲಕ್ಷಕ್ಕಿಂತ ಹೆಚ್ಚು ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಇದನ್ನು 1.5 ಲಕ್ಷಕ್ಕೆ ಇಳಿಸಬೇಕು. ಪರೀಕ್ಷೆಯನ್ನು ಹೆಚ್ಚಳ ಮಾಡುವುದರಿಂದ ಏನೂ ಪ್ರಯೋಜನವಿಲ್ಲವೆಂದು ತಜ್ಞರು ಹೇಳಿದ್ದಾರೆ. ಲಸಿಕೆ ಪ್ರಮಾಣ ಕಡಿಮೆ ಇರುವ ಐದಾರು ಜಿಲ್ಲೆಗಳ್ಲಲಿ ಲಸಿಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ವಾರಾಂತ್ಯದ ಕರ್ಫ್ಯೂ ವಿಸ್ತರಿಸುವ ಬಗ್ಗೆ ಶುಕ್ರವಾರ ನಡೆಯುವ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಹೇಳಿದರು. ಆದಾಗ್ಯೂ, ರಾಜ್ಯದಲ್ಲಿ ಲಾಕ್‌ಡೌನ್ ಜಾರಿಗೊಳಿಸುವ ಸಾಧ್ಯತೆಯನ್ನು ಅವರು ಸ್ಪಷ್ಟವಾಗಿ ತಳ್ಳಿಹಾಕಿದರು.
ವಾರಾಂತ್ಯದ ಕರ್ಫ್ಯೂ ವಿಧಿಸದಂತೆ ಹೋಟೆಲ್ ಮಾಲೀಕರ ಮನವಿಯ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಾರಾಂತ್ಯದ ಕರ್ಫ್ಯೂ ಅನ್ನು ತೆಗೆದುಹಾಕುವ ಮೂಲಕ ಹೋಟೆಲ್ ಮಾಲೀಕರಿಗೆ ಸಹಾಯ ಮಾಡಲು ನಾವು 6.5 ಕೋಟಿ ಜನರ ಜೀವ ಅಪಾಯಕ್ಕೆ ತಳ್ಳಲು ಸಾಧ್ಯವಿಲ್ಲ. ನಾವು ತಜ್ಞರು, ಕೇಂದ್ರ ಮತ್ತು ಕೋವಿಡ್ ಕುರಿತು ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಳನ್ನು ಪರಿಗಣಿಸುತ್ತೇವೆ ಎಂದರು.
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಸೋಂಕಿತ ಮಕ್ಕಳ ಕುರಿತು ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು, ಪೋಷಕರಿಗೆ ಧೈರ್ಯ ಹೇಳಬೇಕು, ಔಷಧಿ ಕಿಟ್ ಗಳನ್ನು ನೀಡಬೇಕು, ಮಕ್ಕಳಿಗೆ ಪ್ರತ್ಯೇಕ ಔಷಧಿ ಕಿಟ್ ಸಿದ್ಧಪಡಿಸಬೇಕು ಎಂದು ನಿರ್ದೇಶಿಸಲಾಗಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಜನರಲ್ಲಿ ವಿಶ್ವಾಸ ಮೂಡಿಸಬೇಕು, ಆಕ್ಸಿಜನ್ ಘಟಕಗಳನ್ನು ಸಜ್ಜುಗೊಳಿಸಿ, ಸಿಬ್ಬಂದಿ ಇಂಧನ ಮೊದಲಾದವುಗಳನ್ನು ಸಿದ್ಧವಿಟ್ಟುಕೊಳ್ಳಬೇಕು, ಆಸ್ಪತ್ರೆಗಳಲ್ಲಿ ಜನರೇಟರುಗಳ ವ್ಯವಸ್ಥೆ ಮಾಡಿಕೊಳ್ಳಬೇಕು, ಮಕ್ಕಳು ಮತ್ತು 60 ವರ್ಷ ಮೇಲ್ಪಟ್ಟವರ ಕುರಿತು ಹೆಚ್ಚಿನ ನಿಗಾ ವಹಿಸಬೇಕು, ಲಸಿಕೆ ಅಭಿಯಾನವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸಲಹೆ ನೀಡಲಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ನಿಯಮಾವಳಿಗಳಂತೆ ಕೋವಿಡ್ ಮಾದರಿ ಪರೀಕ್ಷೆ ನಡೆಸಬೇಕು, ಎರಡನೇ ಡೋಸ್ ಲಸಿಕೆ ಪಡೆದವರ ಸಂಖ್ಯೆ ಕಡಿಮೆ ಇರುವ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಸಿಇಒಗಳೊಂದಿಗೆ ವಿಡಿಯೋ ಸಂವಾದ ನಡೆಸಬೇಕು, 15 ರಿಂದ 18 ವರ್ಷ ವಯೋಮಾನದವರಿಗೆ ಲಸಿಕಾ ಅಭಿಯಾನ ಚುರುಕುಗೊಳಿಸಬೇಕು, ಹೋಮ್ ಐಸೋಲೇಷನ್ ಕಾಲ್ಸ್ ಹೆಚ್ಚಿಸಬೇಕು, ಸಹ ಅಸ್ವಸ್ಥತೆ ಇರುವವರಿಗೆ ದಿನಕ್ಕೆ ಒಂದು ಬಾರಿ ಕರೆ ಮಾಡಿ ಅವರ ಆರೋಗ್ಯ ಸ್ಥಿತಿ ಅವಲೋಕಿಸಬೇಕು ಹಾಗೂ ವಿಶ್ವಾಸ ಮೂಡಿಸಬೇಕು ಎಂದು ಸಲಹೆ ನೀಡಲಾಯಿತು ಎಂದು ಅವರು ತಿಳಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….