ಬೆಂ.ಗ್ರಾ.ಜಿಲ್ಲೆ: ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಅಕ್ಟೋಬರ್ 15ರಂದು ದೊಡ್ಡಬಳ್ಳಾಪುರ ತಾಲೂಕಿನ ಮಾಕಳಿ ಗ್ರಾಮದಲ್ಲಿ ಆಯೋಜನೆಯಾಗಿದೆ.

ಈ ಕುರಿತು ತಾಪಂ ಇಒ ಶ್ರೀನಾಥ್ ಗೌಡ ಮಾಹಿತಿ ನೀಡಿದ್ದು, ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಹೊಸಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಮಾಕಳಿ ಗ್ರಾಮದಲ್ಲಿ ಆಯೋಜನೆಯಾಗಿರುವುದರಿಂದ ಫಲಾನುಭವಿಗಳ ಪಟ್ಟಿ ಒದಗಿಸಲು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆದರೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಭಾಗವಹಿಸುವರೋ ಅಥವಾ ತಹಶೀಲ್ದಾರ್ ಮೋಹನಕುಮಾರಿ ಗ್ರಾಮವಾಸ್ತವ್ಯ ಹೂಡುವರೋ ಕಾದುನೋಡಬೇಕಿದೆ.

ಕಂದಾಯ ಸಚಿವ ಆರ್.ಅಶೋಕ್ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಇದೇ ತಾಲೂಕಿನ ಹೊಸಹಳ್ಳಿಯಲ್ಲಿ ಚಾಲನೆ ನೀಡಲಾಗಿತ್ತು.
ಜಿಲ್ಲಾಡಳಿತವನ್ನು ಹಳ್ಳಿ ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ‘ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ’ ಕಾರ್ಯಕ್ರಮಕ್ಕೆ ಪ್ರತಿ ತಿಂಗಳ ಮೂರನೇ ಶನಿವಾರ ನಡೆಸಲಾಗುತ್ತಿದೆ.
ಜಿಲ್ಲಾಧಿಕಾರಿಗಳ ತಂಡ ಗ್ರಾಮಗಳಿಗೆ ಭೇಟಿ ನೀಡಿ ಕುಂದು ಕೊರತೆ ಆಲಿಸಿ ಅಲ್ಲಿಯೇ ಪರಿಹಾರ ಸೂಚಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಹಳ್ಳಿಯ ಜನರು ಸಣ್ಣಪುಟ್ಟ ಸಮಸ್ಯೆ ಎದುರಾದಾಗಾಲೂ ಜಿಲ್ಲಾಧಿಕಾರಿ, ತಹಸೀಲ್ದಾರ್ ಕಚೇರಿಗೆ ಅಲೆಯುವ ಪರಿಸ್ಥಿತಿಯಿದೆ. ಇದನ್ನು ತಪ್ಪಿಸಲು ಈ ಕಾರ್ಯಕ್ರಮ ರೂಪಿಸಲಾಗಿದೆ. ‘ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ’ ಯೋಜನೆಯ ಅನುಸಾರ ಡಿಸಿಗಳು ಪ್ರತಿ ತಿಂಗಳ ಮೂರನೇ ಶನಿವಾರ ಒಂದು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಲ್ಲಿನ ಹಳ್ಳಿಯ ಜನರ ಅಹವಾಲು ಸ್ವೀಕರಿಸಿ ಸಮಸ್ಯೆ ಇತ್ಯರ್ಥ ಪಡಿಸಲು ಈ ಕಾರ್ಯಕ್ರಮ ರೂಪಿಸಲಾಗಿದೆ.
ಯಾವೆಲ್ಲ ಕುಂದು ಕೊರತೆ?: ”ಪಿಂಚಣಿ, ಆಶ್ರಯ ಯೋಜನೆ, ಸ್ಮಶಾನ, ಫವತಿ ಖಾತೆ, ಪಹಣಿ ತಿದ್ದುಪಡಿ, ಭೂ ಒತ್ತುವರಿ ತೆರವು, ಮತದಾರರ ಪಟ್ಟಿ ಪರಿಷ್ಕರಣೆ, ಬರ, ಪ್ರವಾಹ ಪರಿಶೀಲನೆ ಹಾಗೂ ಪರಿಹಾರ ನೀಡುವುದು, ಅರ್ಹ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ಹಂಚಿಕೆ, ಪೋಡಿ ಪ್ರಕರಣ ಇತ್ಯರ್ಥ, ಕಂದಾಯ ಗ್ರಾಮಗಳ ರಚನೆಗೆ ಸಂಬಂಧಿಸಿದ ಅಡೆತಡೆ ನಿವಾರಣೆ ಸಂಬಂಧ ಡಿಸಿಗಳ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ,”
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….
