ದೊಡ್ಡಬಳ್ಳಾಪುರ, (ಜೂ.14): ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ನೀಡಲಾಗುತ್ತಿದ್ದ ₹5ಗಳ ಪ್ರೋತ್ಸಾಹವನ್ನು ಏಳು ತಿಂಗಳಿಂದಲು ನೀಡಿಲ್ಲ. ಮುಂಗಾರು ಮಳೆ ಪ್ರಾರಂಭವಾಗಿರುವ ಈ ಸಂದರ್ಭದಲ್ಲಿ ರೈತರಿಗೆ ಹಣ ದೊರೆತರೆ ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗಲಿ ಎಂದು ಸಂಸತ್ ಸದಸ್ಯ ಡಾ.ಕೆ.ಸುಧಾಕರ್ ಹೇಳಿದರು.
ಅವರು ನಗರದ ಹಾಲು ಶೀಥಲ ಕೇಂದ್ರದಲ್ಲಿ ನೂತನವಾಗಿ ನಿರ್ಮಿಸಿರುವ ಸಭಾ ಭವನ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರಾರಂಭಿಸಲಾಗಿರುವ ಬಿಎಂಸಿ ಘಟಕಗಳನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ರೈತರ ಪರವಾಗಿ ಇರುವ ಸರ್ಕಾರ ಎಂದು ಹೇಳಿಕೊಳ್ಳುತ್ತಿರುವ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ರೈತರ ಹಾಲಿನ ಹಣ ಬಾಕಿ ಉಳಿಸಿಕೊಂಡಿದೆ. ಶೀಘ್ರವಾಗಿ ಹಣ ಬಿಡುಗಡೆ ಮಾಡದೇ ಇದ್ದರೆ ಹಾಲು ಉತ್ಪಾದಕರೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹಾಲು ಉತ್ಪಾದನೆ ರೈತರ ಮುಖ್ಯ ಕಸುಬಾಗಿದೆ. ಕೇಂದ್ರ ಸರ್ಕಾರದ ವತಿಯಿಂದ ಹೈನುಗಾರಿಕೆ ಅಭಿವೃದ್ಧಿಗೆ ಅಗತ್ಯ ಇರುವ ಎಲ್ಲಾ ರೀತಿಯ ಯೋಜನೆಗಳನ್ನು ತರಲು ಪ್ರಯತ್ನಿಸಲಾಗುವುದು.
ಕೋಲಾರ ಭಾಗದಲ್ಲಿ ಹೈನುಗಾರಿಕೆ ಪ್ರಗತಿಗೆ 70 ದಶಕದಲ್ಲಿ ಸಂಸದರಾಗಿದ್ದ ಎಂ.ವಿ.ಕೃಷ್ಣಪ್ಪ ಅವರು ಭದ್ರಬುನಾದಿಯನ್ನು ಹಾಕಿದ್ದಾರೆ. ಅವರು ಇಂದು ಇಲ್ಲವಾದರು ಅವರನ್ನು ನೆನೆಯುತ್ತಿವೆ. ಹಾಗೆಯೇ ಯಾರಿಗೂ ಅಧಿಕಾರ ಶಾಶ್ವತವಲ್ಲ. ಆದರೆ ಈ ಭಾಗದ ರೈತರ ಅಭಿವೃದ್ಧಿಗೆ ಕೇಂದ್ರದ ಯೋಜನೆಗಳನ್ನು ತರುವ ಭರವಸೆ ನೀಡಿದರು.
ಸಹಕಾರಿ ಕ್ಷೇತ್ರಗಳ ಸಂಸ್ಥೆಗಳಿಗೆ ಆಯ್ಕೆಯಾಗಿದ್ದ ಜನಪ್ರತಿನಿಧಿಗಳ ಅಧಿಕಾರ ಮುಕ್ತಾಯವಾಗಿದೆ. ಆದರೆ ಸರ್ಕಾರ ತಕ್ಷಣ ಚುನಾವಣೆ ನಡೆಸದೆ ಒಂದು ವರ್ಷಗಳ ಕಾಲ ಮುಂದೂಡಲು ನಿರ್ಧರಿಸಿರುವುದು ಸಂವಿಧಾನ ವಿರೋಧಿಯಾಗಲಿದೆ. ಕಾಂಗ್ರೆಸ್ ಮುಖಂಡರು ಸದಾ ಸಂವಿಧಾನ, ಕಾನೂನು ಕುರಿತಂತೆ ಜನರ ಮುಂದೆ ಹೇಳುತ್ತಾರೆ. ಆದರೆ ವಾಸ್ತವದಲ್ಲಿ ನಡೆದುಕೊಳ್ಳುವುದಿಲ್ಲ ಎಂದು ದೂರಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….