ದೊಡ್ಡಬಳ್ಳಾಪುರ, (ಆಗಸ್ಟ್.12); ಜನರ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ನಗರದ ಕುರುಬರಹಳ್ಳಿ ಸಮೀಪ ಬ್ರಹ್ಮಶ್ರೀ ಪತ್ರೀಜಿ ಅವರ ಮಾರ್ಗದರ್ಶದಲ್ಲಿ ನಿರ್ಮಿಸಲಾಗಿರುವ ನಾರಾಯಣ ಪಿರಮಿಡ್ ಧ್ಯಾನ ಮಂದಿರ ಆ.15 ರಂದು ಉದ್ಘಾಟನೆ ನಡೆಯಲಿದೆ ಎಂದು ಶ್ರೀನಾರಾಯಣ ಪಿರಮಿಡ್ ಧ್ಯಾನ ಮಂದಿರದ ಮುಖ್ಯಸ್ಥ ಬಿ.ಎನ್.ಅಶ್ವಥನಾರಾಯಣ ಹೇಳಿದರು.
ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಸಾಮಾನ್ಯ ಜನರು ಸೇರಿದಂತೆ ಎಲ್ಲಾ ಜವಾಬ್ದಾರಿಯುತ ಸ್ಥಾನಗಳಲ್ಲಿ ಇರುವವರು ಸಹ ಹಲವಾರು ಮಾನಸಿಕ ತೊಳಲಾಟಗಳಿಂದ ಬಳಲುತ್ತಿದ್ದಾರೆ. ಸರ್ವ ಸಮಸ್ಯೆಗೂ ರಾಮಬಾಣದಂತೆ ಕೆಲಸ ಮಾಡುವ ಪಿರಮಿಡ್ ಧ್ಯಾನದ ತರಬೇತಿಯನ್ನು ಉಚಿತವಾಗಿ ಶ್ರೀನಾರಾಯಣ ಪಿರಮಿಡ್ ಧ್ಯಾನ ಮಂದಿರದಲ್ಲಿ ಆಯೋಜನೆ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯದ ನಾನಾ ಕಡೆಗಳಿಂದ ಸುಮಾರು 4000ಕ್ಕೂ ಹೆಚ್ಚಿನ ಜನ ಭಾಗವಹಿಸುವ ನಿರೀಕ್ಷೆ ಇದೆ. ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ನಾದ ಧ್ಯಾನ ಯಜ್ಞ 3ರ ಅಡಿಯಲ್ಲಿ ಆಸಕ್ತರಿಗೆ ಉಚಿತವಾಗಿ ಪಿರಮಿಡ್ ಧ್ಯಾನವನ್ನು ಆಯೋಜಿಸಲಾಗಿದೆ ಎಂದರು.
ಮುಖ್ಯ ತರಬೇತುದಾರ ಅಯ್ಯಪ್ಪ ಪಿಂಡಿ ಮಾತನಾಡಿ, ಅತ್ಯಂತ ಪ್ರಭಾವಿಶಾಲಿಯಾದ ಪಿರಮಿಡ್ ಧ್ಯಾನವು ಸರ್ವರಿಗೂ ಲಭಿಸಲಿ ಎಂಬ ಸದುದ್ದೇಶದಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇದು ಮೂರನೇ ಧ್ಯಾನ ಮಂದಿರವಾಗಿದ್ದು ನಾದ ಧ್ಯಾನ ಯಜ್ಞ ವಿಶೇಷವಾಗಿರಲಿದೆ.
ನಿತ್ಯ ಧ್ಯಾನ ಮಾಡುವ ಮೂಲಕ ಆರೋಗ್ಯ ಸಮಸ್ಯೆ ಹಾಗೂ ಮಾನಸಿಕ ತೊಂದರೆಗಳಿಂದ ದೂರವಿರಬಹುದಾಗಿದೆ. ಕಲುಷಿತ ವಾತಾವರಣದಲ್ಲಿ ನಮ್ಮ ಮನಸ್ಸು ಮತ್ತು ದೇಹದ ಮೇಲೆ ಆಗುವ ದುಷ್ಪರಿಣಾಮಗಳಿಂದ ದೂರವಿರಲು ಧ್ಯಾನ ಅತ್ಯುತ್ತಮ ಮಾರ್ಗವಾಗಿದೆ.ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧ್ಯಾನದ ಉಪಯೋಗ ಪಡೆದುಕೊಳ್ಳಬೇಕು ಎಂದರು.
ಧ್ಯಾನ ಮಂದಿರದ ಮುಖಂಡರಾದ ಉಮೇಶಯ್ಯ ಮಾಹಿತಿ ನೀಡಿ, ಧ್ಯಾನಕ್ಕೆ ಬರುವ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಉಪಹಾರದ ವ್ಯವಸ್ಥೆಯು ಇರಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಧಾನ ಕೇಂದ್ರದ ರಂಗರಾಜು, ಎಲ್.ಕೆ.ನಂದಕುಮಾರ್,ಆರ್.ಶ್ರೀನಿವಾಸ್, ಲಿಂಗರಾಜು, ಅರುಣಕುಮಾರ್, ಎಚ್.ಬಿ.ದೊಡ್ಡರಂಗಪ್ಪ, ಎ.ಚಿತ್ರಶ್ರೀ, ಎನ್.ಸವಿತಾ ಇದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….