ಬೆಂಗಳೂರು, (ಆಗಸ್ಟ್.13): ಮನೆಯಿಂದ ಹೋದ ಟೆಕ್ಕಿಯೊಬ್ಬರು 8 ದಿನಗಳು ಕಳೆದರು ವಾಪಾಸ್ ಮರಳದೇ ನಾಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಕಂಪನಿಯೊಂದರಲ್ಲಿ ಟೆಕ್ಕಿಯಾಗಿರುವ ವಿಪಿನ್ ಗುಪ್ತಾ (37) ಕಾಣೆಯಾದ ವ್ಯಕ್ತಿ.
ಆಗಸ್ಟ್ 4ರಂದು ಮಧ್ಯಾಹ್ನ ಮನೆಯಿಂದ ಹೋಗಿರುವ ವಿಪಿನ್ ಮನೆಗೆ ಮರಳಿಲ್ಲ, ಅವರ ಫೋನ್ ಸಹ ಸ್ವಿಚ್ ಆಫ್ ಆಗಿದೆ. ಆದ್ದರಿಂದ ಪತಿಯನ್ನ ಹುಡುಕಿಕೊಡಿ ಎಂದು ಆತನ ಪತ್ನಿ ಎಕ್ಸ್ ಆ್ಯಪ್ ಮೂಲಕ ಬೆಂಗಳೂರು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಲಕ್ನೋ ಮೂಲದ ವಿಪಿನ್ ಗುಪ್ತಾ ಕಳೆದ ಮೂರು ವರ್ಷದಿಂದ ಬೆಂಗಳೂರಿನಲ್ಲಿ ಪತ್ನಿ ಹಾಗೂ ಮಕ್ಕಳೊಂದಿಗೆ ಕೊಡಿಗೆಹಳ್ಳಿಯ ಟಾಟಾನಗರದಲ್ಲಿ ವಾಸವಿದ್ದರು.
ಆಗಸ್ಟ್ 4ರಂದು ಮಧ್ಯಾಹ್ನ 12:44ಕ್ಕೆ ಪತ್ನಿಗೂ ತಿಳಿಸದೆ ಕೈಯಲ್ಲಿ ಒಂದು ಟಿ ಶರ್ಟ್ ಹಿಡಿದು ಮನೆಯಿಂದ ಹೊರಗೆ ಹೋಗಿರುವ ವಿಪಿನ್ ಬಳಿಕ ತನ್ನ ಕವಾಸಕಿ ಬೈಕ್ ತೆಗೆದುಕೊಂಡು ತೆರಳಿದ್ದಾರೆ. ಆದರೆ ವಾಪಾಸ್ ಮರಳಿಲ್ಲ. ವಿಪಿನ್ ಮನೆಯಿಂದ ತೆರಳಿದ ಕೆಲವೇ ನಿಮಿಷಗಳಲ್ಲಿ ಅವರ ಖಾತೆಯಿಂದ 1.80 ಲಕ್ಷ ರೂ ಹಣ ಡ್ರಾ ಆಗಿದ್ದು, ನಂತರ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ.
ಘಟನೆಯ ಸಂಬಂಧ ಆಗಸ್ಟ್ 6ರಂದು ಕೊಡಿಗೆಹಳ್ಳಿ ಪೊಲೀಸ್ ಠಾಣೆಗೆ ವಿಪಿನ್ ಪತ್ನಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.8 ದಿನ ಕಳೆದರೂ ಮನೆಗೆ ಬಂದಿಲ್ಲ, ಹುಡುಕಿಕೊಡಿ ಎಂದು ವಿಪಿನ್ ಪತ್ನಿ ನಗರ ಪೊಲೀಸ್ ಆಯುಕ್ತರಿಗೆ ಎಕ್ಸ್ ಖಾತೆ ಮೂಲಕ ಮನವಿ ಸಹ ಮಾಡಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….