ಒಂದೂರಿನಲ್ಲಿ ಆಕಾಶನೆಂಬ ಹುಡುಗನಿದ್ದ. ದಿನಾಲೂ ‘ಶಾಲೆಗೆ ಹೋಗುತ್ತಿದ್ದ. ಅವನು ಬರುವ ಹೊತ್ತಿಗೆ ತಾಯಿ ತಿಂಡಿ ತಯಾರಿಸಿ ಇಡುತ್ತಿದ್ದಳು. ಅದೊಂದು ದಿನ ಆಕಾಶ ಹೊಟ್ಟೆ ಹಸಿದುಕೊಂಡು ಮನೆಗೆ ಬಂದ. ಆದರೆ ತಾಯಿ ಮನೆಯಲ್ಲಿರಲಿಲ್ಲ. ಹಸಿವೆಯಿಂದ ಪಕ್ಕದ ಮನೆಗಳಲ್ಲಿ ತಿನ್ನಲು ಏನಾದರೂ ಕೊಡಿ ಎಂದು ಬೇಡಿಕೊಳ್ಳುತ್ತ ನಡೆದ. ಯಾರೂ ತಿನ್ನಲು ಕೊಡಲಿಲ್ಲ.
ಬೇಜಾರಾಗಿ, ಹಸಿವೆಯಿಂದ ಬಳಲಿ ಜಗಲಿಯೊಂದರ ಮೇಲೆ ಕುಳಿತ. ಆ ಮನೆಯಲ್ಲಿ ಲತಾ ಎಂಬ ಹುಡುಗಿ ಇದ್ದಳು. ಅವಳು ಅವನು ಹಸಿವೆಯಿಂದ ಬೇಡುತ್ತಿದ್ದುದನ್ನು ಗಮನಿಸಿದ್ದಳು. ತನ್ನ ಮನೆಯಿಂದ ಒಂದು ಲೋಟ ಹಾಲನ್ನು ತಂದು ಅವನಿಗೆ ಕೊಟ್ಟಳು. ಸಮಾಧಾನಗೊಂಡು ಆಕಾಶ ಮನೆಗೆ ಮರಳಿದ.
ವರ್ಷಗಳು ಉರುಳಿದವು. ಲತಾ ದೊಡ್ಡವಳಾದಳು. ಆದರೆ ಅವಳಿಗೊಂದು ರೋಗ ಅಂಟಿಕೊಂಡಿತು. ಯಾವ ವೈದ್ಯರಿಗೆ ತೋರಿಸಿದರೂ ಗುಣವಾಗಲಿಲ್ಲ. ಕೊನೆಗೆ ಅವಳ ತಂದೆ ತಾಯಿ ಪಟ್ಟಣದ ದೊಡ್ಡ ದವಾಖಾನೆಗೆ ಕರೆತಂದರು. ವೈದ್ಯರು ತಪಾಸಣೆ ಮಾಡಿ ಚಿಕಿತ್ಸೆ ಆರಂಭಿಸಿದರು.
ಲತಾಳ ತಂದೆಗೆ ಇಂಥ ದೊಡ್ಡ ದವಾಖಾನೆಯಲ್ಲಿ ಅದೆಷ್ಟು ವೆಚ್ಚವಾಗುವುದೋ ಎಂದು ಗಾಬರಿಯಾಗತೊಡಗಿತು. ಮೂರು ತಿಂಗಳಾದ ಮೇಲೆ ಲತಾ ಗುಣಮುಖಳಾದಳು. ಬಿಲ್ಲನ್ನು ಕಟ್ಟುವುದು ಹೇಗೆ ಎಂಬ ಚಿಂತೆಯಲ್ಲಿ ಕೌಂಟರಿಗೆ ಬಂದು ಬಿಲ್ಲು ಕೊಡಲು ಹೇಳಿದರು.
ಲತಾಳ ತಂದೆಗೆ ಓದಲು ಬರುತ್ತಿರಲಿಲ್ಲ. ಕಾರಣ ಲತಾಳೇ ಚೀಟಿ ತೆರೆದು ನೋಡಿದಳು. ಆಶ್ಚರ್ಯವಾಯಿತು! “ಎಲ್ಲ ಬಿಲ್ಲನ್ನು ಒಂದು ಲೋಟ ಹಾಲಿನಿಂದ ಪಾವತಿಸಲಾಗಿದೆ’ ಎಂದು ಬರೆದಿತ್ತು. ಲತಾಳ ತಂದೆಗೆ ಅಚ್ಚರಿಯಾಯಿತು. ಲತಾ ವಿವರವಾಗಿ ತಿಳಿಸಿದಳು. ಅವನೇ ಆಕಾಶನೆಂದು ತಿಳಿದು ಓಡಿಹೋಗಿ, ಧನ್ಯವಾದ ಅರ್ಪಿಸಿದರು.
ಒಂದು ಲೋಟ ಹಾಲು ನೀಡಿದ್ದನ್ನು ನೆನಪಿನಲ್ಲಿಟ್ಟಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. ಉಪಕಾರ ಮಾಡಿದ್ದು ಎಂದಿಗೂ ನಮ್ಮನ್ನು ಕಾಪಾಡುತ್ತದೆ ಅಲ್ಲವೇ?
ಕೃಪೆ: ಸಾಮಾಜಿಕ ಜಾಲತಾಣ ( ಲೇಖಕರ ಮಾಹಿತಿ ಲಭ್ಯವಾಗಿಲ್ಲ)
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….