
ಬೆಂಗಳೂರು, (ಸೆ.21): ಪರಿಶಿಷ್ಟ ಜಾತಿ/ವರ್ಗಗಳ ಉದ್ಯಮಿಗಳಿಗೆ ಸೂಕ್ತ ತರಬೇತಿಯ ಅಗತ್ಯವಿದೆ. ಈ ಸಂಬಂಧ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಚರ್ಚಿಸಿ ಈ ವ್ಯವಸ್ಥೆ ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಕರ್ನಾಟಕ ದಲಿತ ಉದ್ಯಮಿಗಳ ಸಂಘಟನೆ (ಕೆಇಡಿಎ) ಏರ್ಪಡಿಸಿದ್ದ ಬೃಹತ್ ಪ.ಜಾತಿ/ವರ್ಗಗಳ ಎಂಎಸ್ಎಂಇ ಸಮಾವೇಶದಲ್ಲಿ ಅವರು ಮಾತನಾಡಿದರು.
ಸರಿಯಾದ ರೀತಿಯಲ್ಲಿ ತರಬೇತಿ ನೀಡುವುದರಿಂದ ಪರಿಶಿಷ್ಟ ಉದ್ಯಮಿಗಳನ್ನು ಇನ್ನೂ ಹೆಚ್ಚು ಮಾಡಬಹುದು ಎಂದು ಅವರು ಹೇಳಿದರು.
ಉದ್ಯಮ ಕ್ಷೇತ್ರದಲ್ಲಿ ಪ.ಜಾತಿ/ವರ್ಗಗಳ ಉದ್ಯಮಶೀಲರ ಬೆಳವಣಿಗೆಗೆ ಸರಕಾರ ಒತ್ತಾಸೆಯಾಗಿದೆ. 
ಆರ್ಥಿಕ, ಮೂಲಸೌಕರ್ಯ, ಸ್ಟಾರ್ಟಪ್ ಹಾಗೂ ಎಂಎಸ್ಎಂಇ ಗಳಿಗೆ ನಿಯಂತ್ರಕ ವ್ಯವಸ್ಥೆ ಇತ್ಯಾದಿ ಉಪಕ್ರಮಗಳನ್ನು ಜಾರಿಗೊಳಿಸಲಾಗಿದೆ. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕೆಐಎಡಿಬಿ, ಕೆಎಸ್ಎಸ್ಐಡಿಸಿ, ಕೆಎಸ್ಎಫ್ ಸಿ, ಕೆಯುಎಂ, ಜಿಲ್ಲಾ ಕೈಗಾರಿಕಾ ಕೇಂದ್ರಗಳು ಉದ್ಯಮಿಗಳ ಅಹವಾಲುಗಳನ್ನು ನಿಯಮಿತವಾಗಿ ಆಲಿಸುತ್ತಿವೆ ಎಂದು ವಿವರಿಸಿದರು.
ಕೆಐಎಡಿಬಿ ಪ್ಲಾಟ್ ಹಾಗೂ ಕೆಎಸ್ ಎಸ್ಐಡಿಸಿ ಷೆಡ್ ಗಳ ಹಂಚಿಕೆಯಲ್ಲಿ ಪರಿಶಿಷ್ಟ ಜಾತಿ/ವರ್ಗದ ಉದ್ಯಮಿಗಳಿಗೆ ಶೇ 24.1ರಷ್ಟು ಮೀಸಲು, ಭೂಮಿ ಮಂಜೂರಾತಿಯಲ್ಲಿ ಶೇ 75ರಷ್ಟು ಸಬ್ಸಿಡಿ, ಕೆಎಸ್ ಎಫ್ ಸಿಯಿಂದ ರೂ 10 ಕೋಟಿಯವರೆಗೆ ಶೇ 4ರಷ್ಟು ಬಡ್ಡಿ ದರದಲ್ಲಿ ಸಾಲ ನೆರವು, ಮಾರ್ಜಿನ್ ಮನಿಯ ಶೇ 50ರಷ್ಟು (ಗರಿಷ್ಠ ರೂ 75 ಲಕ್ಷ) ಬೀಜಧನದ ನೆರವು ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ ಎಂದರು.
ಎಸ್ಸಿ, ಎಸ್ಟಿ ಉದ್ಯಮಿಗಳಿಗೆ ಮಾಡಿರುವ ನಿವೇಶನ ಹಂಚಿಕೆಯಡಿ ಕೆಐಎಡಿಬಿಗೆ ಸರಕಾರದಿಂದ 900 ಕೋಟಿ ರೂಪಾಯಿ ಬಾಕಿ ಇದೆ. ಹಾಗೆಂದು, ನಾವು ನೆರವನ್ನು ನಿಲ್ಲಿಸಿಲ್ಲ. ಸಮಾಜ ಕಲ್ಯಾಣ ಇಲಾಖೆಯ ಸಲಹೆಗಾರರಾಗಿರುವ ವೆಂಕಟಯ್ಯನವರಂಥವರು ಇತ್ತ ಗಮನ ಹರಿಸಿ, ಒತ್ತಡ ಹೇರಿದರೆ ಕೈಗಾರಿಕಾ ಇಲಾಖೆಗೂ ಒಳ್ಳೆಯದಾಗುತ್ತದೆ ಎಂದು ಅವರು ನುಡಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪ.ಜಾತಿ ಉದ್ಯಮಿಗಳಿಗೆ ಶೇ 75ರಷ್ಟು ಸಬ್ಸಿಡಿ ಬಾಬ್ತಿಗೆ ರೂ 245.50 ಕೋಟಿ, ಹಾಗೆಯೇ ಪ.ವರ್ಗದವರಿಗೆ ರೂ 62.24 ಕೋಟಿ ಬಿಡುಗಡೆಗೊಳಿಸಿದೆ. ಜೊತೆಗೆ, ಕೈಗಾರಿಕಾ ಪ್ರದೇಶಗಳ ಸಿಎ ಪ್ಲಾಟ್ ಗಳಲ್ಲಿ ಶೇ 24.1ರಷ್ಟನ್ನು ಈ ಸಮುದಾಯಗಳಿಗಾಗಿ ಮೀಸಲಾತಿ ನಿಗದಿಗೊಳಿಸಿ, ಹಂಚಿಕೆ ಮಾಡಲಾಗುತ್ತಿದೆ ಎಂದು ಪಾಟೀಲ ಹೇಳಿದರು.
ಕಳೆದ 15 ತಿಂಗಳ ಅವಧಿಯಲ್ಲಿ ಸರ್ಕಾರವು ಪರಿಶಿಷ್ಟ ಜಾತಿಯ 121 ಉದ್ಯಮಿಗಳಿಗೆ 130 ಎಕರೆ ಹಾಗೂ ಪರಿಶಿಷ್ಟ ವರ್ಗದ 39 ಉದ್ಯಮಿಗಳಿಗೆ 42 ಎಕರೆ ಭೂಮಿ ಮಂಜೂರು ಮಾಡಿದೆ ಎಂದು ಇದೇ ವೇಳೆ ತಿಳಿಸಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ಕೆಐಎಡಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಮಹೇಶ, ಕೋಲಾರ ಸಂಸದ ಮಲ್ಲೇಶ ಬಾಬು, ಚಿಕ್ಕೋಡಿ ಸಂಸದೆ ಪ್ರಿಯಾಂಕ ಜಾರಕಿಹೊಳಿ, ರಾಜ್ಯಸಭಾ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ, ಸಿ.ಜಿ.ಶ್ರೀನಿವಾಸನ್ ಮತ್ತಿತರರು ಇದ್ದರು.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						