ದೊಡ್ಡಬಳ್ಳಾಪುರ: ನಾಳೆ ಅಕ್ಟೋಬರ್ 2. ಭಾರತದ ಪಾಲಿನ ಮಹತ್ವದ ದಿನ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜನ್ಮ ದಿನವಿದು. ಮಹಾತ್ಮ ಗಾಂಧೀಜಿ ಎನ್ನುವುದು ಭಾರತೀಯರ ಮನಸ್ಸಿನಲ್ಲಿ ಅಚ್ಚಳಿಯದೇ ಸದಾ ಶಾಶ್ವತವಾಗಿರುವ ಹೆಸರು.
ಇವರೊಂದು ಶಕ್ತಿ, ಬದುಕಿನ ಆದರ್ಶ. ಗಾಂಧೀಜಿ ತನ್ನ ಸತ್ಯ, ಅಹಿಂಸೆಯ ಸಿದ್ಧಾಂತದಿಂದಲೇ ಜಗವನ್ನು ಗೆದ್ದ ಚೇತನ. ಹೀಗಾಗಿ ವಿಶ್ವದಾದ್ಯಂತ ಈ ದಿನವನ್ನು ಆಚರಿಸಲಾಗುತ್ತದೆ. ಗಾಂಧೀಜಿ ಅವರ ಶಾಂತಿ ಮತ್ತು ಅಹಿಂಸಾ ತತ್ವವನ್ನು ಗೌರವಿಸುವ ಸಲುವಾಗಿ ಈ ದಿನವನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿಯೂ ಆಚರಣೆ ಮಾಡಲಾಗುತ್ತದೆ.
ಜಗತ್ತಿನ ಮೇರು ವ್ಯಕ್ತಿಗಳಲ್ಲಿ ಒಬ್ಬರಾದ ಮಹಾತ್ಮಗಾಂಧೀಜಿ ದೊಡ್ಡಬಳ್ಳಾಪುರಕ್ಕೆ ಬಂದಿದ್ದರು ಎಂದು ಹೇಳಿಕೊಳ್ಳುವುದೇ ಹೆಮ್ಮೆಯ ವಿಷಯ. ಅದೆಷ್ಟೋ ದೇಶ ಪ್ರೇಮಿಗಳಿಗೆ ಪ್ರೇರಣೆಯಾಗಿ ರುವ ಮಹಾತ್ಮ ಗಾಂಧೀಜಿಯವರ ಜನ್ಮ ದಿನಾಚರಣೆ ಸಂದರ್ಭದಲ್ಲಿ ಗಾಂಧೀಜಿ ದೊಡ್ಡಬಳ್ಳಾಪುರ ಹಾಗೂ ತಾಲೂಕಿನ ಸಮೀಪದ ನಂದಿ ಬೆಟ್ಟಕ್ಕೆ ಭೇಟಿ ನೀಡಿದ್ದ ಸಂದರ್ಭಗಳ ಕುರಿತು ಒಂದು ಮೆಲುಕು.
ದೊಡ್ಡಬಳ್ಳಾಪುರದಲ್ಲಿ ಗಾಂಧಿ: 1934ರ ಜನವರಿ 4 ರಂದು ದೊಡ್ಡ ಬಳ್ಳಾಪುರಕ್ಕೆ ಭೇಟಿ ನೀಡಿದ್ದ ಗಾಂಧಿಯನ್ನು ಕಂಡ ಹಿರಿಯರಿಗೆ ಏನೋ ಧನ್ಯತಾಭಾವ. ದೊಡ್ಡಬಳ್ಳಾಪುರಕ್ಕೆ ಗಾಂಧೀಜಿ ಭೇಟಿ ನೀಡಿದ್ದ ವೇಳೆ ಇಲ್ಲಿನ ಜನತೆಗೆ ದೇಶ ಪ್ರೇಮದ ಭಾಷಣ ಮಾಡಿದ್ದರು ಮಹಾತ್ಮ ಗಾಂಧಿ ಆಗ ದೊಡ್ಡಬಳ್ಳಾಪುದ ಜನಸಂಖ್ಯೆ ಬರೀ 25 ಸಾವಿರ. ಸಿದ್ದಲಿಂಗಯ್ಯ, ರುಮಾಲೆ ಭದ್ರಣ್ಣ, ಮುಗುವಾಳಪ್ಪ ಮೊದಲಾದವರು ಸ್ವಾತಂತ್ರ್ಯ ಹೋರಾಟಗಾರರಾಗಿ ರೂಪಗೊಳ್ಳಲು ಗಾಂಧೀಜಿ ಪ್ರೇರಣೆ.
ಗಾಂಧೀಜಿ ದೊಡ್ಡಬಳ್ಳಾಪುರಕ್ಕೆ ಬಂದ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಟಿ.ಸಿದ್ದಲಿಂಗಯ್ಯ, ರುಮಾಲೆ ಚನ್ನಬಸವಯ್ಯ, ರುಮಾಲೆ ಭದ್ರಣ್ಣ, ಎಚ್.ಮುಗುವಾಳಪ್ಪ, ನಾ.ನಂಜುಂಡಯ್ಯ ಮುಂತಾದವರೊಂದಿಗೆ ಊರಿನ ಜನ ಹೂ ಮಾಲೆ ಹಾಕಿ ಆತ್ಮೀಯ ಸ್ವಾಗತಕೋರಿದ್ದರು.
ಪುರಸಭೆ ವತಿಯಿಂದ ಗಾಂಧೀಜಿಗೆ ಭಿನ್ನವತ್ತಳೆ ನೀಡಿ ಸನ್ಮಾನಿಸಿ, ಹರಿಜನ ನಿಧಿಗಾಗಿ ಅಂದಿನ ಕಾಲದಲ್ಲಿಯೇ 500ರೂ. ಸಂಗ್ರಹಿಸಿ ನೀಡಲಾಗಿತ್ತು. ಅದನ್ನು ಸ್ವೀಕರಿಸಿದ ಗಾಂಧೀಜಿ ಸ್ಥಳೀಯರು ತೋರಿದ ಅಭಿಮಾನಕ್ಕೆ ವಂದಿಸಿದ್ದರು.
ಅಂದು ಗಾಂಧೀಜಿ ಉಪನ್ಯಾಸ ನೀಡಿದ ಸ್ಮರಣಾರ್ಥವಾಗಿ ಆ ಸ್ಥಳಕ್ಕೆ ಗಾಂಧಿನಗರ ಎಂದು ನಾಮಕರಣ ಮಾಡಲಾಗಿತ್ತು. ಅದೇ ಇಂದಿಗೂ ಹಳೇ ಬಸ್ ನಿಲ್ದಾಣ ಸಮೀಪದ ಪೇಟೆಗೆ ಗಾಂಧಿನಗರ ಅಂತಾ ಹೆಸರಿದೆ.
ಗಾಂಧೀಜಿ ಅವರು ದೊಡ್ಡಬಳ್ಳಾಪುರಕ್ಕೆ ಭೇಟಿ ನೀಡಿದ್ದಾಗ ರುಮಾಲೆ ಭದ್ರಣ್ಣ ಮತ್ತು ಸಂಗಡಿಗರು ರುಮಾಲೆ ಛತ್ರದಲ್ಲಿ ಖಾದಿ ಬಟ್ಟೆಗಳ ಪ್ರದರ್ಶನ ಏರ್ಪಡಿಸಿದ್ದರು. ಅಂದು ಸಾವಿರಾರು ಗಾಂಧಿ ಟೋಪಿಗಳು ಮಾರಾಟವಾಗಿದ್ದವು ಎನ್ನುವುದು ಗಮನಾರ್ಹ ಸಂಗತಿ.
1924ರಲ್ಲಿ ಬೆಳಗಾವಿಯಲ್ಲಿ ನಡೆದ 39ನೇ ಅಖೀಲ ಭಾರತ ಕಾಂಗ್ರೆಸ್ ಅಧಿವೇಶನಕ್ಕೆ ದೊಡ್ಡಬಳ್ಳಾಪುರದಿಂದಲೂ ಪ್ರತಿನಿಧಿಗಳು ಭಾಗವಹಿಸಿದ್ದರು.1930ರಲ್ಲಿ ನಡೆದದಂಡಿಉಪ್ಪಿನ ಸತ್ಯಾಗ್ರಹದಲ್ಲೂ ದೊಡ್ಡಬಳ್ಳಾಪುರದಿಂದ ರುಮಾಲೆ ಚನ್ನಬಸವಯ್ಯ, ಎಚ್.ಮುಗು ವಾಳಪ್ಪ ಭಾಗವಹಿಸಿದ್ದರು. ಇಲ್ಲಿಯೂ ದೇಶಿ ಉಪ್ಪನ್ನು ಮಾರಾಟ ಮಾಡಲಾಯಿತಲ್ಲದೆ, ವರ್ತಕರು ವಿದೇಶಿ ವಸ್ತುಗಳನ್ನು ಮಾರಾಟ ಮಾಡುವುದಿಲ್ಲವೆಂದು ಸಂಕಲ್ಪ ಮಾಡಿದ್ದರು.
ಇದನ್ನೂ ಓದಿ: ಮೈಸೂರು ದಸರಾ ಕ್ರೀಡಾಕೂಟದಲ್ಲಿ ದೊಡ್ಡಬಳ್ಳಾಪುರ ಅಥ್ಲೆಟಿಕ್ ಆಟಗಾರರು..!
ದೊಡ್ಡಬಳ್ಳಾಪುರ ತಾಲೂಕಿನ ಸಮೀಪವೇ ಇರುವ ನಂದಿ ಬೆಟ್ಟಕ್ಕೆ1927ರಲ್ಲಿ45 ದಿನ ಹಾಗೂ 1936ರಲ್ಲಿ3 ವಾರ ಗಾಂಧೀಜಿ ತಂಗಿದ್ದರು. ಗಾಂಧೀಜಿ ಅವರಿಗೆ ಅಪೊಪ್ಲಿಕ್ಸ್ (ಲಕ್ವಾ)ಗೆ ಸಂಬಂಧಿಸಿದ ಕಾಯಿಲೆ ಸಂಬಂಧ ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ಕುಟುಂಬ ವೈದರ ಸಲಹೆ ಮೇರೆಗೆ ನಂದಿ ಗಿರಿಧಾಮವೇ ಪ್ರಶಸ್ತ ಸ್ಥಳವೆಂದು ತೀರ್ಮಾನಿಸಿ ಇಲ್ಲಿಗೆ ಬಂದಿದ್ದರು.
ಗಿರಿಧಾಮದಲ್ಲಿ ಜನಸಂದಣಿ ಹೆಚ್ಚಾಗಿ ಗಾಂಧೀಜಿ ಅವರ ಆರೋಗ್ಯ ಕೈಕೊಟ್ಟಿದ್ದೂ ಉಂಟು. ಆದರೆ ವೈದ್ಯರ ಕಟ್ಟುನಿಟ್ಟಿನ ನಿಗಾದಿಂದ ಅವರು ಬಹುಬೇಗ ಚೇತರಿಸಿಕೊಂಡರು. 1936ರಲ್ಲಿ ಹಠಾತ್ತನೆ ರಕ್ತದೊತ್ತಡ ಅಧಿಕವಾಗಿ ನಂದಿಗಿರಿಧಾಮವೇ ಪ್ರಶಸ್ತ ಸ್ಥಳವೆಂದು ಮತ್ತೂಮ್ಮೆ ಇಲ್ಲಿಗೆ ಆಗಮಿಸಿದ್ದರು.
ಇದೇ ವೇಳೆ ಖ್ಯಾತ ವಿಜ್ಞಾನಿ ಭಾರತರತ್ನ ಸರ್ ಸಿ.ವಿ.ರಾಮನ್‌ಕೂಡ ಬೆಟ್ಟಕ್ಕೆ ಬಂದು ಮಹಾತ್ಮರೊಡನೆ ಕೆಲ ದಿನ ತಂಗಿದ್ದರು.
ಅಕ್ಟೋಬರ್ 2 ಎಂಬುದು ಬಾಪು ಅವರ ಚಿಂತನೆ, ಆದರ್ಶ, ಜೀವನ ಮೌಲ್ಯಗಳನ್ನು ಸ್ಮರಿಸುವ ಹಾಗೂ ಅದರಂತೆ ನಾವು ಕೂಡಾ ನಡೆಯುವ ಪಣ ತೊಡುವ ದಿನವಾಗಿದೆ.