ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಗ್ರಾಮಪಂಚಾಯಿತಿ ಸಿಬ್ಬಂದಿಗಳು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟ ಪ್ರತಿಭಟನೆ ಆರಂಭಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಲ್ಲಿ ಖಾಲಿ ಉಳಿದಿರುವ ಹುದ್ದೆಗಳ ಭರ್ತಿ, ಪಿಡಿಒ ಹುದ್ದೆಯನ್ನು “ಬಿ’ ಗ್ರೂಪ್ ಗೆ ಸೇರ್ಪಡೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಕೆಗಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ, ಲೆಕ್ಕ ಸಹಾಯಕರು, ಕರ ವಸೂಲಿ ಸಿಬ್ಬಂದಿ ಮತ್ತು ಡಾಟಾ ಎಂಟ್ರಿ ಅಪರೇಟರ್‌ಗಳು ಪ್ರತಿಭಟನೆಗೆ ಕುಳಿತಿದ್ದಾರೆ.
ಇದರಿಂದಾಗಿ ಗ್ರಾಮ ಪಂಚಾಯಿತಿಯ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ.
ಪ್ರತಿಭಟನೆಹಲ್ಲಿ ಮಾತನಾಡಿದ ಮುಖಂಡರು, ರಾಜ್ಯಾದ್ಯಂತ ಅಂದಾಜು 45 ಸಾವಿರ ಹೆಚ್ಚು ಅಧಿಕಾರಿಗಳು, ಸಿಬ್ಬಂದಿ ಭಾಗಿಯಾಗಿದ್ದಾರೆ.
ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಹೆಚ್ಚಾಗಿದ್ದರೂ ಪಂಚಾಯಿತಿಗಳಲ್ಲಿ ಹಿಂದಿನಂತೆ ಸಿಬ್ಬಂದಿ ಇದ್ದಾರೆ. ಕೆಲಸದೊತ್ತಡದಿಂದ ಅಧಿಕಾರಿಗಳು, ನೌಕರರು ಬಳಲುತ್ತಿದ್ದಾರೆ. ಮೂರು ವರ್ಷಗಳಿಂದ ಖಾಲಿಯಾಗಿರುವ ಪಿಡಿಒ, ಕಾರ್ಯದರ್ಶಿ ಮತ್ತು ಲೆಕ್ಕ ಪರಿಶೋಧಕರ ಹುದ್ದೆ ಭರ್ತಿ ಮಾಡಿಲ್ಲ.
ವೃಂದ ಮತ್ತು ನೇಮಕಾತಿ ನಿಯಮ ರಚಿಸುವಾಗ ಸಲಹೆ ಪರಿಗಣಿಸದೆ ಅವೇಾನಿಕ ನಿಯಮ ಅಳವಡಿಸಲಾಗಿದೆ. ನೆಪಮಾತ್ರಕ್ಕೆ ಕುಂದುಕೊರತೆ ಪ್ರಾಧಿಕಾರವನ್ನು ರಚಿಸಲಾಗಿದೆ. ಅಹವಾಲುಗಳಿಗೆ ಮನ್ನಣೆ ದೊರೆಯುತ್ತಿಲ್ಲ.
ಹಲವು ಬಾರಿ ಪಿಡಿಒಗಳು ಎದುರಿಸುತ್ತಿರುವ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದರೂ ಸ್ಪಂದನೆ ದೊರೆತಿಲ್ಲ. ಕಳೆದ ವಾರವಷ್ಟೇ ಅ.4ರಿಂದ ಕೆಲಸ ಸ್ಥಗಿತಗೊಳಿಸಿ ಅರ್ನಿಷ್ಟಾವಧಿ ಮುಷ್ಕರ ನಡೆಸುವುದಾಗಿ ಸರ್ಕಾರದ ಗಮನ ಸೆಳೆಯಲಾಗಿತ್ತು. ಸರ್ಕಾರದಿಂದ ನಮಗೆ ಭರವಸೆ ಸಿಕ್ಕಿಲ್ಲ. ಈ ಧೋರಣೆ ಖಂಡಿಸಿ ಹೋರಾಟಕ್ಕೆ ಮಾಡಲಾಗುತ್ತಿದೆ ಎಂದರು.